ಅಣ್ಣವರು ನಾ ಕಂಡಂತೆ.

ರಾಜ್ಕುಮಾರ್

ಅಣ್ಣವರು ಅನ್ನೋ ಪದ ಡಾ. ರಾಜಕುಮಾರ್ ಅವರಿಗೆ ಬಿಟ್ಟರೆ ಬಹುಶಃ ಇನ್ನಾರಿಗೂ ಹೊಂದುವುದಿಲ್ಲ ಅನ್ನಿಸುತ್ತದೆ. ಅವರಿಗೆ ಅದು ಮೀಸಲು ಎಷ್ಟರಮಟ್ಟಿಗೆ ಅಂದರೆ, ನಮ್ಮ ಮನೆಯ ಅಣ್ಣಂದಿರಿಗೂ ಆ ಪದ ಬಳಕೆ ಮಾಡುವುದಿಲ್ಲ. ಆ ಪದದ ಶಕ್ತಿಯೇ ಹಾಗೆ, ಏನೋ ಒಂದು ಆತ್ಮೀಯತೆ, ಏನೋ ಒಂದು ಅಭಿಮಾನ , ಏನೋ ಒಂದು ಗೌರವ. ನನ್ನ ಪ್ರಕಾರ ಅಣ್ಣವರ ಸಿನಿಮಾ ಒಂದು ಪಾಠಶಾಲೆ. ಅದರಲ್ಲಿ ಕಲಿಯುವುದು  ತುಂಬಾ ಇದೆ. ತಾಯಿಯ ಸೇವೆ, ತಮ್ಮಂದಿರ ಒಡನಾಟ, ಸಂಸಾರ ಸಾಮರಸ್ಯ ಹೀಗೆ ಹಲವು ಅಂಶಗಳನ್ನು ಅವರ ಸಿನಿಮಾ ಒಳಗೊಂಡಿರುತ್ತದೆ. ಅವರ ಭಾಷಾ ಸ್ಪಷ್ಟತೆ ಇಂದಿನ ಕನ್ನಡ ಪಾಠ ಮಾಡುವ ಮಾಸ್ತರಿಗೆ ಒಂದು ಮಾರ್ಗ ಸೂಚಿ. ಅವರ ಯಾವ ಸಿನಿಮಾದಲ್ಲೂ ಕೆಟ್ಟ ಬೈಗುಳವಾಗಲಿ, ಅವಾಚ್ಯ  ಶಬ್ಧ ದ ಬಳಕೆ ಮಾಡಿರುವುದಿಲ್ಲಾ. ನವ ನಾಯಕ ನಟರಿಗೆ ಒಂದು ಕೈಪಿಡಿ. ಅವರ ಬಂಗಾರದ ಮನುಷ್ಯ ಸಿನಿಮಾ ನಮ್ಮಂತ ಯುವಕರಿಗೆ ಸ್ಪೂರ್ತಿ ತುಂಬಿ ಮರಳಿ ನಮ್ಮ ಊರಿಗೆ ಬಂದು ಸಾಧನೆ ಮಾಡುವ ಹಾಗೆ ಮಾಡಿತು. ಆ ಸಿನಿಮಾದಿಂದ ಹಲವು ಹಳ್ಳಿಗಳು ಬದಲಾಗಿದ್ದವು ಎಂದು ಕೇಳಿದ್ದೇವೆ. ಕಾಮನ ಬಿಲ್ಲು ಸಿನಿಮಾದಲ್ಲಿ ಯೋಗ ಮಾಡುವ ದೃಶ್ಯ ಯುವಕರೂ ನಾಚುವಂತಹದ್ದು. ಈ ಸಂದರ್ಭದಲ್ಲಿ  ,ನಾವು ಸಣ್ಣ ಹುಡುಗರಾಗಿದ್ದಾಗ ಇತಿಹಾಸ ಪಾಠ ಮಾಡುವ ಮೇಷ್ಟ್ರು ಕೃಷ್ಣದೇವರಾಯ ನ ಬಗ್ಗೆ ಹೇಳುತ್ತಿದ್ದರು, ಕೃಷ್ಣದೇವರಾಯನ ಸಾಹಸ ಶೌರ್ಯ ದ ಬಗ್ಗೆ ಹೇಳುವಾಗ ” ಡಾ.ರಾಜಕುಮಾರ್ ಗೆ ಜೈ ” ಎಂದು ನನ್ನ ಸ್ನೇಹಿತ ತರಗತಿಯಲ್ಲಿ ಕಿರುಚಿದ್ದು ನೆನಪಿಗೆ ಬರುತ್ತದೆ. ಅಂದರೆ ಅಣ್ಣವರ ಕೃಷ್ಣದೇವರಾಯನ ಪಾತ್ರ ನಮ್ಮ ಮನಸಲ್ಲಿ ಅಚ್ಚಳಿಯದೆ ಉಳಿದಿದೆ. ಬಹುಶಃ ನಿಜವಾಗಿಯೂ ಕೃಷ್ಣ ದೇವರಾಯರು ಎದುರಿಗೆ ಬಂದರೆ ನಮಗೆ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲಾ.

ಅದೇ ತರಹ ನಮಗೆ ರಾಯರ ಮಠಕ್ಕೆ ಹೋದರೆ ರಾಘವೇಂದ್ರ ಸ್ವಾಮಿ ಯವರ ಬೃಂದಾವನದ ಮುಂದೆ ಹೋದರೆ ಕಣ್ಣು ಮುಚ್ಚಿ ನಮಸ್ಕರಿಸಿದರೆ ಅಣ್ಣವ್ರೇ ಕಣ್ಣುಮುಂದೆ ಬರುತ್ತಾರೆ. ನಿಜವಾಗಿಯೂ ಅವರು ವರನಟರು ಎಂಬುದರಲ್ಲಿ ಎರಡುಮಾತಿಲ್ಲಾ. ಪರಕಾಯ ಪ್ರವೇಶ ಎಂಬುದನ್ನು ನಾವು ಕೇಳಿದ್ದೆವು ಆದರೆ ಅದನ್ನ ಕಣ್ಣಾರೆ ನೋಡಿದ್ದು ಅಣ್ಣವ್ರ ಅಭಿನಯದಲ್ಲೇ. ರೊಮ್ಯಾಂಟಿಕ್ ದೃಶ್ಯ ಬಂದರೆ ಈಗಿನ ಸಿನೆಮಾದಲ್ಲಿ ಮನೆ ಮಂದಿಯೆಲ್ಲಾ ಮುಜುಗರ ಪಟ್ಟುಕೊಳ್ಳುವಹಾಗೆ ಇರುತ್ತದೆ. ಆದರೆ ಅಣ್ಣವ್ರ ಯಾವ ಸಿನಿಮಾದ ಯಾವ ದೃಶ್ಯ ವೂ ಮುಜುಗರವಿಲ್ಲದೆ ಎಲ್ಲಾರು ನೋಡಬಹುದಾಗಿತ್ತು. ಅವರ ಹಾಸ್ಯ ದೃಶ್ಯ ಡಬಲ್ ಮೀನಿಂಗ್ ಇಂದ ಹೊರತಾಗಿತ್ತು. ಅದ್ಬುತ ಹಾಸ್ಯ ಅಲ್ಲಿ ಸೃಷ್ಟಿಯಾಗುತ್ತಿತ್ತು.ಅಣ್ಣವ್ರ ಸಿನಿಮಾ, ಅಣ್ಣವ್ರ ಹಾಡು, ಅಣ್ಣವ್ರ  ನಟನೆ, ಅಣ್ಣವ್ರ ವಿನಯ ಎಲ್ಲವುದಕ್ಕೂ ಸಮನಾದದ್ದು ಇತಿಹಾಸದಲ್ಲೇ ಇಲ್ಲಾ. ಶತಮಾನಕ್ಕೊಬ್ಬರೇ ಅಣ್ಣವ್ರು. ಭಾರತ ಚಿತ್ರರಂಗದ ಇತಿಹಾಸದಲ್ಲಿ ಇವರು ದೃವತಾರೆ. ಅವರ ಸಿನಿಮಾ ನೋಡಲು ನೂರುಕಣ್ಣು ಸಾಲದು. ಅವರು ಬದುಕಿದ್ದ ಕಾಲದಲ್ಲಿ ನಾವು ಇದ್ದೆವು ಎಂದು ಮುಂದಿನ ಪೀಳಿಗೆಗೆ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅಣ್ಣವ್ರದ್ದು ಒಂದು ವಿಶೇಷ ವ್ಯಕ್ತಿತ್ವ. ಅವರನ್ನು ನೀವು ಹೇಗೆ ನೋಡುತ್ತೀರೋ ಹಾಗೆ ಕಾಣುತ್ತಾರೆ. ಅಣ್ಣನಾಗಿ, ಬಂಧುವಾಗಿ, ಸ್ನೇಹಿತನಾಗಿ, ಡಾಕ್ಟರ್, ಪೊಲೀಸ್, ಹೀಗೆ ಎಲ್ಲಾ ಪಾತ್ರಕ್ಕೂ ನ್ಯಾಯ ಒದಗಿಸೋ ಏಕೈಕ ನಟಸಾರ್ವಭೌಮ ಅಂದರೆ ನಮ್ಮ ಅಣ್ಣವ್ರು . ಅಣ್ಣವ್ರ ಬಗ್ಗೆ ಹೇಳಲು ಪದಗಳೇ ಸಾಲದು.ಇಂದು ಕನ್ನಡದ ಅಭಿಮಾನಿ ದೇವರುಗಳ ದೇವರು ಕನ್ನಡದ ಕಂಠೀರವ ಡಾ ರಾಜ್ ಅಣ್ಣವ್ರ ಹುಟ್ಟಿದ ಹಬ್ಬ , ಎಲ್ಲರಿಗೂ ಶುಭಾಶಯಗಳು.

ಕೃಷ್ಣಚೈತನ್ಯ

ಕೃಷ್ಣಚೈತನ್ಯ

Leave a Reply