ಈ ಚಿತ್ರದಲ್ಲಿ ಕಮೆಡಿಯನ್ ಗುಗ್ಗು ಹೆಸರು ಚಿನಮುರಳಿ. ಅದನ್ನು ಚಿನಕುರುಳಿ ಎಂದು ಬದಲಾಯಿಸಿಕೊಂಡಿರುತ್ತಾನೆ. ಕ್ಲಾಸ್.. ಮಾಸ್ ಅನ್ನೋ ಪದಗಳನ್ನು 1958ರ ಈ ಸಿನಿಮಾದಲ್ಲಿ ಆಡುತ್ತಾನೆ. ಆದರೆ ಈ ಚಿತ್ರದ ನಿಜವಾದ ಚಿನಕುರುಳಿ ಬೆಳ್ಳಿ (ಅಭಿನಯ ಸರಸ್ವತಿ ಬಿ. ಸರೋಜಾದೇವಿ.)
ಅಬ್ಬಾ… ಪಟಪಟನೆ ಮಾತಾಡುವ ಬೆಳ್ಳಿ ತನ್ನ ಸೋದರತ್ತೆಯ ಮಗ ಮಲ್ಲಣ್ಣನ (ರಾಜ್‍ಕುಮಾರ್) ಜೊತೆ ಮೊದಲು ‘ನಿನ್ ಬಯಸ್ಕೋಪೆಲ್ಲ ನನ್ ತಾವ ಬ್ಯಾಡ’ ಅಂತಿದ್ದೋಳು ಆಮೇಲೆ ಅವನನ್ನು ಕಂಡು ನಾಚಿ ನಲಿಯುವ ಪಾತ್ರದಲ್ಲಿ ಮಿಂಚಿದ್ದಾಳೆ. ತನ್ನನ್ನು ಅಪಹರಿಸಿದ ರೌಡಿಯನ್ನು ನೋಡಿ ಕೂಡ ಬೆದರದ ಘಟ. ಬಡವ ಶ್ರೀಮಂತ ಎಲ್ಲಾರೂ ಒಂದೇ. ಐದೊರ್ಸಕ್ಕೆ ಓಟು ಕೊಡಾಕ್ಕಿಲ್ವಾ ಅಂತಾಳೆ.
ಮಲ್ಲನಾಗಿ ರಾಜ್‌ಕುಮಾರ್ ಸಖತ್ ಖುಷಿ ಕೊಡ್ತಾರೆ. ಜುಟ್ಟು, ಹಣೆಯಲ್ಲಿ ಬಿಳಿಯ ಬೊಟ್ಟು, ಕಣ್ಣಿಗೆ ಕಾಡಿಗೆ, ಕಚ್ಚೆ ಪಂಚೆ, ಶರ್ಟು ಅಥವಾ ಬನಿಯನ್ ಅಥವಾ ಟಾಪ್‌ಲೆಸ್. ಮೊದಮೊದಲು ಬೆಳ್ಳಿಯೊಂದಿಗೆ ಜಗಳ. ‘ನಿನ್ ಸೊರ್ಕೊಸ್ಸು ನನ್ ತಾವ ತೋರಿಸ್‌ಬ್ಯಾಡ’ ಎನ್ನುವ ಜಗಳಗಂಟ… ಓದಿದ ತಂಗಿ ತಮ್ಮ ಮನೆಯ ಬಡತನಕ್ಕೆ ಕಾರಣವಾದ ಸೋದರಮಾವನ ಓದಿದ ಮಗನನ್ನು ಪ್ರೇಮಿಸಿದಾಗ ಕೋಪ… ನಂತರ ಮಮತೆ…ಸ್ವಲ್ಪ ಓದಿರುವ ಬೆಳ್ಳಿ ಮುಂದೆ ತಾನು ಅನಕ್ಷರಸ್ಥ ಎಂದುಕೊಳ್ಳಲು ನಾಚಿಕೆ… ಕುಣಿತ.. ಹಾಡು ಓಹ್… ಸೂಪರ್.
ಬಾಲಕೃಷ್ಣ ನಿಜಕ್ಕೂ ಭಲೇ ಚಂದದ ನಟನೆ. ಅಳಲು ಬಿ ಜಯಮ್ಮ. ಕಾಮಿಡಿಗೆ ನರಸಿಂಹರಾಜು ಮತ್ತು ಎಂ ಎನ್ ಲಕ್ಷ್ಮೀದೇವಿ.
ಕೆ ಎಸ್ ಅಶ್ವತ್ಥ್ ಮತ್ತು ವಿದ್ಯಾವತಿ ಓದಿದ ಜೋಡಿ. ಹಾಡುಗಳು ಕೇಳಲು ನೋಡಲು ಹಿತ.