ಅಮಿತಾಭ್ ಎಂಬ ಬಹಳ “ಎತ್ತರದ” ಮನುಷ್ಯ.

Amitabh Bachan

ಅಮಿತಾಭ್ ಬಚ್ಚನ್ – ವಯಸ್ಸು ಎಪ್ಪತ್ತೊಂಭತ್ತಾದರೂ ಮೂವತ್ತರ ಯುವಕರೂ ನಾಚುವಷ್ಟು ಉತ್ಸಾಹ. ಬಾಲಿವುಡ್ ನ ಬಿಗ್ ಬಿ ಎಂದೇ ಕರೆಯಲ್ಪಡುವ ಅಮಿತಾಭ್ ಬಗ್ಗೆ ಬರೆಯಲು ಆಯ್ದುಕೊಂಡಿರುವುದಕ್ಕೂ ಕಾರಣವಿದೆ. ಇಂದಿಗೆ ಎಪ್ಪತ್ತೆಂಟು ವರ್ಷಗಳನ್ನು ಪೂರೈಸಿ ಎಪ್ಪತ್ತೊಂಭತ್ತಕ್ಕೆ ಕಾಲಿಡುತ್ತಿದ್ದಾರೆ. ಸೊನ್ನೆಯಿಂದ ಆರಂಭಿಸಿ, ಬಹಳ ಎತ್ತರಕ್ಕೆ ಬೆಳೆದು, ಮತ್ತೆ ಕೆಳಗೆ ಬಿದ್ದು, ಮತ್ತೆ ಎದ್ದು ಬೆಳೆದ ಪರಿಯೇ ಅನನ್ಯ.
ಈಗ 2021. ನಿಮ್ಮ ಮನೆಯ ಕ್ಯಾಲೆಂಡರ್ ಅನ್ನು 25 ವರ್ಷ ಹಿಂದಕ್ಕೆ ಅಂದರೆ 1996 ಕ್ಕೆ ತಿರುಗಿಸಿ. ನಾವೀಗ 1996 ರಲ್ಲಿದ್ದೇವೆ. ಬಿಗ್ ಬಿ ಗೆ ಈಗ 54 ರ ಹರೆಯ. ಬಾಲಿವುಡ್ ನ ಸೂಪರ್ ಸ್ಟಾರ್. ಬಂಗಲೆಗಳು, ವಿದೇಶಿ ಕಾರುಗಳು, ಕೋಟಿಗಟ್ಟಲೆ ಬ್ಯಾಂಕ್ ಬ್ಯಾಲೆನ್ಸ್ ಇರುವ ಬಾಲಿವುಡ್ ನ ದೈತ್ಯ ಪ್ರತಿಭೆ. ಎ.ಬಿ.ಸಿ.ಎಲ್. ಎಂಬ ಕಂಪನಿಯ ಮಾಲೀಕನಾಗಿದ್ದಾಗ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜನೆ ಮಾಡಬೇಕೆಂಬ ಅವರ ಒಂದು ತಪ್ಪು ನಿರ್ಧಾರ ಅವರನ್ನು ಅನಾಮತ್ತಾಗಿ ಬೀದಿಗೆ ತಂದು ಬಿಸಾಡಿತ್ತು. ತಾನು ವಾಸಿಸುತ್ತಿದ್ದ “ಪ್ರತೀಕ್ಷಾ” ಬಂಗಲೆಯನ್ನು ಕೂಡ ಬ್ಯಾಂಕಿಗೆ ಅಡವಿಟ್ಟು ನಿರ್ಗತಿಕರಾಗಿದ್ದರು. ಒಂದಲ್ಲ ಎರಡಲ್ಲ, ಐವತ್ತಕ್ಕೂ ಹೆಚ್ಚು ಕೇಸುಗಳು ಈ ಕಂಪನಿ ಮೇಲೆ ದಾಖಲಾಗಿದ್ದವು. ಸುಮಾರು 90 ಕೋಟಿ ರೂಪಾಯಿ ಸಾಲ ತಲೆ ಮೇಲೆ ಹೊತ್ತು ಆಕಾಶ ನೋಡುತ್ತಾ ಕುಳಿತುಬಿಟ್ಟರು. ಕೈನಲ್ಲಿ ಸಿನಿಮಾಗಳು ಕೂಡ ಇಲ್ಲ. ಮುಂದೇನು ಮಾಡುವುದು ಗೊತ್ತಿಲ್ಲ.
ಸರಿ, ಈಗ ಇನ್ನೂ ಹನ್ನೆರಡು ವರ್ಷ ಹಿಂದಕ್ಕೆ ಕ್ಯಾಲೆಂಡರ್ ತಿರುಗಿಸಿ. ಅಲಹಾಬಾದ್ ಕ್ಷೇತ್ರದಿಂದ ಎಂಪಿಯಾಗಿ ಆಯ್ಕೆಯಾಗಿದ್ದರೂ ಕೂಡ ರಾಜಕೀಯದಲ್ಲೂ ಸಾಲು ಸಾಲು ಸಮಸ್ಯೆಗಳು. ಈ ರಾಜಕೀಯದ ಸಹವಾಸವೇ ಬೇಡವೆಂದು ಮತ್ತೆ ಸಿನಿಮಾರಂಗಕ್ಕೆ ವಾಪಸ್ ಬಂದುಬಿಟ್ಟರು. ಇನ್ನೂ ನಾಲ್ಕೈದು ವರ್ಷ ಹಿಂದಕೆ ಹೋಗೋಣ. ಅಂದರೆ 1982 ರಲ್ಲಿ ನಡೆಯುತ್ತಿದ್ದ ಕೂಲಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಏಟು ಬಿದ್ದು, ತಿಂಗಳುಗಟ್ಟಲೆ ಆಸ್ಪತ್ರೆ ಸೇರಿದ್ದರು. ಗುಣವಾಗಿ ಬಂದಮೇಲೂ ಕೂಡ ಶೂಟಿಂಗ್ ನಲ್ಲಿ ಭಾಗವಹಿಸುವುದು ಕಷ್ಟ ಎಂದು ಬಾಲಿವುಡ್ ಮಂದಿ ಗುಸುಗುಸು ಮಾತಾಡಿಕೊಳ್ಳುತ್ತಿದ್ದರು.
ಸರಿ ಈಗ ಇನ್ನೂ ಸಲ್ಪ ಹಿಂದಕ್ಕೆ ಹೋಗೋಣ. ಅಂದರೆ ಅಮಿತಾಭ್ ವೃತ್ತಿ ಜೀವನದ ಆರಂಭದ ದಿನಗಳು. ಡಬಲ್ ಮಾಸ್ಟರ್ ಡಿಗ್ರಿ ಪಡೆದು, ಕೆಲಸ ಹುಡುಕುತ್ತಾ ಕೊಲ್ಕತ್ತಾಕ್ಕೆ ಬಂದರು. ತಿಂಗಳಿಗೆ ಐನೂರು ರೂಪಾಯಿ ಸಂಬಳಕ್ಕೆ ಚಿಕ್ಕ ಕೆಲಸವೊಂದು ಕೂಡ ಸಿಕ್ಕಿತ್ತು. ಆಕಾಶವಾಣಿಯಲ್ಲಿ ನಿರೂಪಕನಾಗಬೇಕೆಂಬ ಆಸೆ ಹೊತ್ತು ಆಕಾಶವಾಣಿಗೆ ಸಂದರ್ಶನಕ್ಕೆ ಹೋದರು. ಇವರ ಗಡುಸು ದ್ವನಿಯನ್ನು ಕೇಳಿ, ಇವರು ನಿರೂಪಕರಾಗಲು ನಾಲಾಯಕ್ ಎಂದು ಆಕಾಶವಾಣಿಯವರು ಇವರನ್ನು ಆಚೆ ಕಳಿಸಿಬಿಟ್ಟರು. ಧ್ವನಿ ರಿಜೆಕ್ಟ್ ಆದರೆ ಏನಂತೆ? ನಟನೆಯನ್ನು ಟ್ರೈ ಮಾಡೋಣ ಎಂದು 1969 ರಲ್ಲಿ ಸೀದಾ ಮುಂಬಯಿಗೆ ಹೊರಟುಬಿಟ್ಟರು. ಜೇಬಲ್ಲಿ ಹಣವಿಲ್ಲ, ಇರಲು ಮನೆಯಿಲ್ಲ, ತಿನ್ನಲು ರೊಟ್ಟಿಯಿಲ್ಲ. ಮರೀನಾ ಡ್ರೈವ್ ನ ಫುಟ್ಪಾತ್ ಮೇಲೆ ಮಲಗಿ, ಬೆಳಿಗ್ಗೆ ಎದ್ದು ಸಾರ್ವಜನಿಕ ಕೊಳಾಯಿ ನೀರಲ್ಲಿ ಸ್ನಾನ ಮಾಡಿ ಪ್ರತಿಯೊಬ್ಬ ನಿರ್ದೇಶಕರ ಮನೆ ಬಾಗಿಲು ತಟ್ಟಿದರು. ಇವರ ಆರಡಿ ಆಕಾರ, ಒರಟು ಧ್ವನಿಯನ್ನು ನೋಡಿ “ನೋ” ಎಂದವರೇ ಹೆಚ್ಚು. ಕಡೆಗೂ ಎ.ಕೆ.ಅಬ್ಬಾಸ್ ರವರ “ಸಾಥ್ ಹಿಂದುಸ್ಥಾನಿ” ಯಲ್ಲಿ ಒಂದು ಚಾನ್ಸ್ ಸಿಕ್ಕಿತಾದರೂ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ನಂತರ ಬಂದ ಕೆಲವು ಚಿತ್ರಗಳಿಗೆ ಬಣ್ಣ ಹಚ್ಚಿದರೂ ಅವ್ಯಾವೂ ಹಿಟ್ ಆಗಲೇ ಇಲ್ಲ. ಸಿನಿಮಾಕ್ಕೆ ಗುಡ್ ಬೈ ಹೇಳಿ ವಾಪಸ್ ಊರಿಗೆ ಹೋಗೋಣವೆಂದು ಅನ್ನಿಸಿತ್ತಾದರೂ, ಒಂದು ಹೆಜ್ಜೆ ಇಲ್ಲಿ ಇಟ್ಟಾಗಿದೆ. ವಾಪಾಸ್ ಹೋಗುವುದು ಬೇಡ, ಬಂದದ್ದೆಲ್ಲಾ ಬರಲಿ ಎಂದು ಆ ನೋವು, ಕಷ್ಟ, ಅಪಮಾನಗಳನ್ನು ಸಹಿಸುತ್ತಲೇ ಬೆಳೆದರು. ಅದರ ಫಲವೇ ಇಂದು ಅವರು ಅನುಭವಿಸುತ್ತಿರುವ ಬಿಗ್ ಬಿ ಪಟ್ಟ, ಕಾರು, ಬಂಗಲೆ, ಯಶಸ್ಸು ಎಲ್ಲವೂ..
ಕಷ್ಟ ಬಂದಾಗ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಾದರೆ ಬಿಗ್ ಬಿ ಈಗಾಗಲೇ ಹತ್ತು ಸಾರಿ ಸಾಯಬೇಕಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡದ್ದು – ಬದುಕಿ, ಸಾಧಿಸಿ ತೋರಿಸುವ ದಾರಿಯನ್ನು. ನೆನಪಿಡಿ: ನಿರಂತರ ಉಳಿಯೇಟು ತಿಂದ ಕಲ್ಲು ದೇವರ ಪ್ರತಿಮೆಯಾಗುತ್ತದೆ. ಉಳಿಯೇಟಿಗೆ ಹೆದರುವ ಕಲ್ಲು ದೇವಾಲಯದ ಚಪ್ಪಡಿಯೋ, ಮೆಟ್ಟಿಲೋ ಆಗುತ್ತದಷ್ಟೆ. ಅಂದಹಾಗೆ ಇಂದು 79 ನೆಯ ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಿಗ್ ಬಿ ಗೆ ಚಿತ್ರೋದ್ಯಮ.ಕಾಂ ಶುಭಾಶಯಗಳು. ಅವರ ಉತ್ಸಾಹ ಅಸಂಖ್ಯ ಯುವಕರಿಗೆ ಮಾದರಿಯಾಗಲಿ. ನಮ್ಮ ನಡುವೆಯೇ ಇನ್ನೊಬ್ಬ ಬಿಗ್ ಬಿ ಹುಟ್ಟುವಂತಾಗಲಿ ಎಂಬುದೇ ನಮ್ಮ ಆಶಯ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply