ಕನ್ನಡದ ಹೆಸರಾಂತ ನಿರ್ದೇಶಕ ಎಸ್. ನಾರಾಯಾಣ ಅವರು ತಮ್ಮ ಸದಭಿರುಚಿಯ ಸಿನಿಮಾಗಳಿಂದ ಎಲ್ಲರ ಮಧ್ಯೆ ಚಿರಪರಿಚಿತರು. ಸೂರ್ಯ ವಂಶ, ವೀರಪ್ಪನಾಯಕ, ಶಬ್ದವೇದಿ, ಚೈತ್ರದ ಪ್ರೇಮಾಂಜಲಿ, ಚಂದ್ರಚಕೋರಿ ಯಂತಹ ಹತ್ತಾರು ಸದಭಿರುಚಿಯ ಸಿನಿಮಾಗಳನ್ನ ನೀಡಿ ಸಾಕಷ್ಟು ಹೆಸರುವಾಸಿಯಾದವರು. ಕಳೆದೆರಡು ವರ್ಷಗಳಿಂದ ನಿರ್ದೇಶಕನ ಜವಾಬ್ದಾರಿಯನ್ನ ಹೊರದೆ ಹಲವು ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ರು. ಸರ್ ನಿಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವಾಗ? ಎಂದು ಕೇಳಿದಾಗಲೆಲ್ಲಾ ಅವರದು ಒಂದೇ ಉತ್ತರವಾಗಿತ್ತು, ಸ್ಕ್ರಿಪ್ಟ್ ಸಿದ್ಧವಾಗ್ತಾ ಇದೆ ಅಂತ..ನಮ್ಮ ಪ್ರಶ್ನೆಗಳಿಗೆ ಇದೀಗ ಉತ್ತರ ಕೊಟ್ಟಿದ್ದಾರೆ. ಎರಡು ದಿನಗಳ ಕೆಳಗಷ್ಟೇ ಅವರ ನಿರ್ದೇಶನದ ಹೊಸ ಸಿನಿಮಾವೊಂದು ಸೆಟ್ಟೇರಿದೆ. ನಾಯಕನಾಗಿ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಹಾಗೂ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಲಿದ್ದು, ಇದೊಂದು ಥ್ರಿಲ್ಲರ್ ಕಥಾವಸ್ತುವುಳ್ಳ ಸಿನಿಮಾ ಆಗಿರುತ್ತದೆ. ಪ್ರಥಮ ಬಾರಿಗೆ ಎಸ್. ನಾರಾಯಣ್ ಅವರು ಥ್ರಿಲ್ಲರ್ ಆಧಾರಿತ ಕಥೆಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಒಂದಲ್ಲ ಎರಡಲ್ಲ, ಎಂಭತ್ತಕ್ಕೂ ಹೆಚ್ಚು ಕಲಾವಿದರಿರುವ ಅರವತ್ತಕ್ಕೂ ಹೆಚ್ಚು ಲೊಕೇಶನ್ ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವುದೇ ಈ ಚಿತ್ರದ ವಿಶೇಷ.
ಕುರಿಗಳು ಸಾರ್ ಕುರಿಗಳು ಸಿನಿಮಾವನ್ನ ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿ ನಾರಾಯಣ್ ಅವರನ್ನ ನಾಯಕನಟನನ್ನಾಗಿಸಿದ್ರು. ಈಗ ಎಸ್ .ವಿ ಅವರ ಮಗನಿಗೆ ನಾರಾಯಣ್ ಡೈರೆಕ್ಟ್ ಮಾಡುವ ಸರದಿಯಲ್ಲಿದ್ದಾರೆ. ಸಿನಿಮಾದ ಲಾಂಚ್ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯ ಅಥಿತಿಯಾಗಿ ಬಂದು ಇಡೀ ತಂಡಕ್ಕೆ ಶುಭ ಹಾರೈಸಿದರು. ಎಸ್. ನಾರಾಯಣ್ ಅವರಿಗೆ ಚಿತ್ರೋದ್ಯಮ.ಕಾಂ ನಿಂದ ಆಲ್ ದಿ ಬೆಸ್ಟ್.