ಆಪರೇಷನ್ ಜ್ಯಾಕ್‍ಪಾಟ್‍ನಲ್ಲಿ ಸಿ.ಐ.ಡಿ. 999

“ನಾನೇ ರಾಜಕುಮಾರ”

ಸುಪ್ರಸಿದ್ಧ ಹಿಂದೀ ನಟಿ (ಭಾನು)ರೇಖಾಳ ಪರಿಚಯ ಚಿತ್ರವಿದು. ಕೆಲವೆಡೆ ಆಕೆಯ ಧ್ವನಿ ಕೇಳಿಸುತ್ತದೆ. ಮತ್ತೆ ಕೆಲವು ಕಡೆ ಬೇರೆ ಯಾರೋ ಡಬ್ ಮಾಡಿದ್ದಾರೆ.

ಪ್ರಕಾಶ್ (ರಾಜ್‍ಕುಮಾರ್) ಈ ಸಲ ದೆಹಲಿಯಿಂದ (ಆತನ ಹೆಡ್‍ಕ್ವಾರ್ಟರ್ಸ್) ಬೆಂಗಳೂರಿಗೆ ಬರುತ್ತಾನೆ. ಒಂದು ವಿಶೇಷ ಫಾರ್ಮುಲಾ ಕಂಡು ಹಿಡಿದ ವಿಜ್ಞಾನಿಯೊಬ್ಬನಿಗೆ ಕುದುರೆ ಜ್ಯಾಕ್‍ಪಾಟ್ ಗೆಲ್ಲುವ ಹುಚ್ಚು. ಅದನ್ನು ಬಳಸಿಕೊಂಡು, ದೇಶದ್ರೋಹಿ ಬಾಸ್ ಒಬ್ಬ ಬೀನಾಳನ್ನು (ಸುರೇಖಾ- ಲೇ ಲೇ ಅಪ್ಪನ ಮಗಳೇ) ರೇಸ್‍ಕೋರ್ಸ್‍ಗೆ ಕಳಿಸಿ, ಕುದುರೆಗೆ ಮತ್ತಿನ ಔಷಧಿಯನ್ನು ಡಾರ್ಟ್ ಮೂಲಕ ಹೊಡೆಯುತ್ತಿರುತ್ತಾಳೆ. ಆ ಕುದುರೆ ಗೆದ್ದು ವಿಜ್ಞಾನಿ ಬೀಗುತ್ತಿರುವಾಗ ಅವನ ಅಪಹರಣ ಮಾಡುತ್ತಾನೆ ಬಾಸ್. ಅವನ ಡೂಪ್ಲಿಕೇಟ್ ಒಬ್ಬನನ್ನು ಮೊದಲು ಅವನ ಜಾಗಕ್ಕೆ ಕಳಿಸಿ, ಪ್ರಕಾಶ್ ಅವನ ಮೇಲೆ ಅನುಮಾನಗೊಂಡಾಗ ಅವನನ್ನು ಬೆಂಕಿ ಹಾಕಿ ಸುಡಿಸುತ್ತಾನೆ ಬಾಸ್.

ಬೇಬಿ (ನರಸಿಂಹರಾಜು) ಸಿ.ಐ.ಡಿ. 888 ಪ್ರಕಾಶನಿಗೆ ಸಹಾಯಕನಾಗಿ ಅವನದೇ ಕರಾಮತ್ತು ನಡೆಸುತ್ತಾನೆ.

ಹಿಂದಿನ ಜೇಡರ ಬಲೆ, ಗೋವಾದಲ್ಲಿ ಸಿಐಡಿ 999 ರಂತೆಯೇ ಇದರಲ್ಲಿಯೂ ಸುಂದರ ನೇಪಥ್ಯ ವಾದ್ಯ ಸಂಗೀತವಿದೆ. ಹೆಣ್ಣುಮಕ್ಕಳಿಗೆ ಮಾತ್ರ ಹಾಡುಗಳಿವೆ. ರೇಖಾಗೆ ಒಂದು, ಸುರೇಖಾಗೆ ಒಂದು, ಜ್ಯೋತಿಲಕ್ಷ್ಮಿಗೆ ಒಂದು ಹಾಡು. ರೇಖಾ ಕಾರಿನ ಬಾನೆಟ್ ಮೇಲೆ ಕುಣಿದರೆ, ಸುರೇಖಾ ಸ್ವಿಮ್‍ಸೂಟ್‍ನಲ್ಲಿ, ಸ್ವಿಮ್‍ಸೂಟ್ ಧರಿಸಿರುವ ಅಣ್ಣಾವ್ರ ಜೊತೆ ಸ್ಟೆಪ್ಪು ಹಾಕುತ್ತಾಳೆ.

ಜೋಗ ಜಲಪಾತದ ಮೇಲ್ಭಾಗದಲ್ಲಿ ದೊಡ್ಡ ಫೈಟಿಂಗ್ ಒಂದು ಹೈಲೈಟ್. ಕಾರ್‍ಚೇಸ್‍ಗಳು ಇದ್ದೇ ಇವೆ. ಫೈಟಿಂಗ್‍ಗಳೂ ಇವೆ.

1969ರಲ್ಲಿ ಭಾರತದ ಜನಸಂಖ್ಯೆ 50 ಕೋಟಿ ಎಂಬ ವಿಷಯ ಹೇಳಲ್ಪಡುತ್ತದೆ. 50 ವರ್ಷಗಳಲ್ಲಿ ಅದೆಷ್ಟು ಬೆಳೆದಿದೆ ಜನಸಂಖ್ಯೆ!

ಈ ಸಿನಿಮಾಗಳನ್ನು ಬಾಂಡ್ ಸಿನಿಮಾ ರೀತಿ ಚಿತ್ರಗಳನ್ನು ತೆಗೆಯಲಾಶಿಸುವ ನಿರ್ದೇಶಕರು ನೋಡಬೇಕು. 1968ರಲ್ಲಿ ಎರಡು, ಈ ಚಿತ್ರ 1969ರಲ್ಲಿ ಬಂದವು. ಯಾವುದೇ ತಾಂತ್ರಿಕ ಸಹಾಯ ಇಲ್ಲದೇ ಅದೆಷ್ಟು ಚೆನ್ನಾಗಿ ಚಿತ್ರ ತೆಗೆದಿದ್ದಾರೆ ದೊರೆ ಭಗವಾನ್ ಎಂದರೆ ಅಚ್ಚರಿ ಆಗುವಷ್ಟು ಚೆನ್ನಾಗಿವೆ. ಕಪ್ಪು ಬಿಳುಪು ಚಿತ್ರಗಳಾದರೇನು, ಉತ್ಕೃಷ್ಟ  ಮಟ್ಟದ ಪ್ರಯತ್ನಗಳು ಈ ಮೂರೂ ಸಿನಿಮಾಗಳು.

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply