ಹೆಸರೇ ಹೇಳುತ್ತದೆ ಸಿನೆಮಾದ ಕಥೆ ಏನೆಂದು. ಇದರಲ್ಲಿ ನಾಯಕ ಒಬ್ಬ ಡಿಟೆಕ್ಟೀವ್. ಅವನಿಗೊಬ್ಬ ಯುವತಿ ಅಸಿಸ್ಟೆಂಟ್. ಈತ ತನ್ನ ಅಸಿಸ್ಟೆಂಟ್ ಮುಂದೆ ತಾನು ಹಾಗೆ, ಹೀಗೆ ಅಂತ ಜಂಭ ಕೊಚ್ಚುತ್ತಾ ಇರುತ್ತಾನೆ. ಆದರೆ ವಾಸ್ತವವಾಗಿ ಹಾಗಿರದೇ ಜನರ ಮುಂದೆ ಅಪಹಾಸ್ಯಕ್ಕೆ ಈಡಾಗುತ್ತಾ ಇರುತ್ತಾನೆ. ಏನೇ ಆದರೂ ಆತನ ಟ್ಯಾಲೆಂಟ್ ಮೆಚ್ಚತಕ್ಕದ್ದು.
ಆತನ ಪ್ರತಿಭೆಯನ್ನು ನಾವೂ ಸಹ ಒಪ್ಪಿಕೊಳ್ಳುವಂತಹಾ ಎರಡು ಮೂರು ಇನ್ಸಿಡೆಂಟುಗಳೂ ಸಹ ನಡೆಯುತ್ತವೆ. ಆದರೆ ಪೊಲೀಸರು ಮಾತ್ರ ಇವನನ್ನು ಕ್ರೈಂ ಸೀನಿನಿಂದ ಒದ್ದು ಆಚೆ ಕಳಿಸುತ್ತಿರುತ್ತಾರೆ. ಇವನು ಚೂರೂ ಸಹ ಬೇಜಾರು ಮಾಡಿಕೊಳ್ಳದೇ ತನ್ನ ತನಿಖೆ ಮುಂದುವರೆಸುತ್ತಾ ಇರುತ್ತಾನೆ. ಹೀಗೆಯೇ ಜೀವನ ಮೂರಕ್ಕಿಳಿಯದೇ ಆರಕ್ಕೇರದೇ ಸಾಗುತ್ತಿರುತ್ತದೆ.
ಹೆಚ್ಚುಕಡಿಮೆ ಅರ್ಧ ಗಂಟೆಯವರೆ್ಗೂಗೂ ಹೀಗೆಯೇ ಹಾಸ್ಯಮಯವಾಗಿ ಸಾಗುತ್ತಿರುವ ಕಥೆ ನಂತರ ದಿಢೀರನೇ ಗಂಭೀರವಾದ ತಿರುವು ತೆಗೆದುಕೊಂಡುಬಿಡುತ್ತದೆ.

ಯಾರೂ ಊಹಿಸಿಯೂ ಇರದ ತಿರುವು !!!!
ಒಮ್ಮೆ ನಾಯಕನ ಸ್ನೇಹಿತನಾದ ಸಿರೀಶ್ ರೈಲ್ವೇ ಟ್ರಾಕುಗಳ ಪಕ್ಕ ಸಿಗುತ್ತಿರುವ ನಿಗೂಢ ಹೆಣಗಳ ಬಗ್ಗೆ ಹೇಳುತ್ತಾನೆ. ‘ಆ ಹೆಣಗಳು ಯಾವುವು? ಎಲ್ಲಿಯವು? ಒಂದೂ ಗೊತ್ತಾಗಿಲ್ಲ. ಆದರೆ ಆಗಾಗ ಐದಾರು ಹೆಣಗಳು ಸಿಗುತ್ತಲೇ ಇರುತ್ತವೆ’ ಎಂದು ಹೇಳುತ್ತಾನೆ.
ನಾಯಕನಿಗೆ ಒಂದು ನಂಬಿಕೆ ಇರುತ್ತದೆ.
ಏನೆಂದರೆ… ಇಂದಲ್ಲ ನಾಳೆ ತಾನು ದೊಡ್ಡದೊಂದು ಕೇಸ್ ಸಾಲ್ವ್ ಮಾಡಿ ಫೇಮಸ್ ಆಗುತ್ತೇನೆ ಅಂತ. ಈಗ ಈ ಹೆಣಗಳ ಕೇಸ್ ಪರಿಹರಿಸಿ ದೊಡ್ಡ ಡಿಟೆಕ್ಟಿವ್ ಆಗಬೇಕೆಂದುಕೊಂಡು ಹೊರಡುತ್ತಾನೆ. ಆದರೆ ಅವನು ಹೆಣದ ಬಳಿ ತಲುಪುವಷ್ಟರಲ್ಲಿ ಪೊಲೀಸರೂ ತಲುಪಿದ್ದು, ಇವನನ್ನು ಪ್ರಾಥಮಿಕ ತನಿಖೆಯಿಂದ ಸಸ್ಪೆಕ್ಟ್ ಎಂದು ಅರೆಸ್ಟ್ ಮಾಡುತ್ತಾರೆ.
( ಮುಂದುವರಿಸಲಾಗುವುದು )