ಕನ್ನಡ ಚಿತ್ರರಂಗದ ಅಪರೂಪದ ನಟ ಅಶೋಕ್

ನಟ ಅಶೋಕ್ ಕನ್ನಡ ಚಿತ್ರರಂಗ ಕಂಡ ಇನ್ನೋರ್ವ ಶ್ರೇಷ್ಠ ಹಿರಿಯ ಕಲಾವಿದರಾಗಿದ್ದು ಸೀಮಿತ ಚಿತ್ರಗಳಲ್ಲಿ ಕಾಣಿಸಿಕೊಂಡರೂ  ನಿರ್ವಹಿಸಿದ ಪಾತ್ರಗಳು ಅಷ್ಟೇ ಮಹತ್ವ ಪೂರ್ಣವಾಗಿವೆ. ಗೋಕಾಕ್ ಚಳುವಳಿ ಮತ್ತು ರೈತ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಇವರು ಪ್ರಸ್ತುತ ಕರ್ನಾಟಕ ಚಲನಚಿತ್ರ ಕಲಾವಿದರು ಮತ್ತು ಕಾರ್ಮಿಕ ವರ್ಗದ ನಾಯಕರು ಆಗಿದ್ದಾರೆ.

   ಸೆಪ್ಟೆಂಬರ್ ೧೨, ೧೯೫೧ ರಂದು ಬೆಂಗಳೂರಿನ ಆನೇಕಲ್ ನಲ್ಲಿ  ಲಕ್ಷ್ಮಿ ನರಸಿಂಹಯ್ಯ ಮತ್ತು ಪುಟ್ಟಮ್ಮ ದಂಪತಿಯ ಮಗನಾಗಿ ಜನಿಸಿದರು. ಇವರ ತಂದೆ ಹೆಸರು ಲಕ್ಷ್ಮೀ ನರಸಿಂಹಯ್ಯ ವೃತ್ತಿಯಲ್ಲಿ ಪೋಲೀಸ್ ಇನ್ಸಪೆಕ್ಟರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ತಾಯಿಯ ಹೆಸರು ಪುಟ್ಟಮ್ಮ. ಇವರಿಗೆ ಚಿಕ್ಕಂದಿನಿಂದಲೂ ಚಿತ್ರ ನಟನಾಗುವ ಹಂಬಲವಿತ್ತು. ಆದರೆ ಅವಕಾಶ ಇರಲಿಲ್ಲ. ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದ ಇವರು ನಟನೆಯಲ್ಲಿ ತರಬೇತಿ ಪಡೆಯಲು ಮದ್ರಾಸ್ ನ ಫಿಲಂ ಇನ್ಸ್ಟಿಟ್ಯೂಟ್ ಗೆ ಸೇರ್ಪಡೆಗೊಂಡರು.

ನಟನೆಯಲ್ಲಿ ತರಬೇತಿ ಪಡೆದ ನಂತರ ೧೯೭೫ ರಲ್ಲಿ ತೆರೆ ಕಂಡ ಪ್ರಣಯ ರಾಜ ನಟ ಶ್ರೀನಾಥ್ ನಟಿಸಿದ ಹೆಣ್ಣು ಸಂಸಾರದ ಕಣ್ಣು ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಆದರೆ ನಾನು ಇಲ್ಲಿ ಗಮನಿಸಿದ ವಿಷಯವೇನೆಂದರೆ ಅದೃಷ್ಟವಂತ ನಟರಲ್ಲಿ ಇವರು ಒಬ್ಬರಾಗಿದ್ದಾರೆ. ಇದಕ್ಕೆ ಉತ್ತರವೂ ನನ್ನ ಬಳಿಯಿದೆ.  ಇವರು ಚಿತ್ರ ರಂಗ ಪ್ರವೇಶಿಸಿದ ಸಮಯದಲ್ಲಿ ನಮ್ಮ ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ಡಾ.ರಾಜಕುಮಾರ್ ಚಿತ್ರಗಳ ಭರಾಟೆ ಜೋರಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಡಾ.ರಾಜಕುಮಾರ್ ಯುಗ.

ಒಂದು ನಿಧಿ ಸಿಕ್ಕಾಗ ಆಗುವ ಸಂತೋಷಕ್ಕಿಂತಲೂ ಇವರ ಜೊತೆ ನಟಿಸುವ ಅವಕಾಶ ದೊರೆತಾಗ  ಹತ್ತು ಪಟ್ಟು ಹೆಚ್ಚು ಸಂತೋಷ ಸಿಗುತ್ತಿತ್ತು. ನಮ್ಮ ಕನ್ನಡದ ಕಣ್ಮಣಿ ನಟ ಸಾರ್ವಭೌಮ ಡಾ.ರಾಜಕುಮಾರ್ ಜೊತೆ ನಟಿಸಲು ಚಿಕ್ಕ ಪಾತ್ರ ಸಿಕ್ಕರು ಸಾಕು ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಲಾವಿದರ ಸಂಖ್ಯೆಗೆ ಲೆಕ್ಕವಿಲ್ಲ. ೧೯೭೭ ರಲ್ಲಿ ತೆರೆ ಕಂಡ ಡಾ.ರಾಜಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಇವರಿಗೆ ಮಗನ ಪಾತ್ರವನ್ನು ನಿರ್ವಹಿಸಲು ಬಂಗಾರದಂತಹ ಅವಕಾಶ ದೊರೆಯಿತು.

ತೆರೆ ಕಂಡ ನಂತರ ಈ ಚಿತ್ರವು ಗಳಿಸಿದ ಯಶಸ್ಸು ಅಂತಿಂಥದ್ದಲ್ಲ. ಈ ಚಿತ್ರದಿಂದ ಇವರ  ಬದುಕೇ ಬದಲಾಯಿತು. ೧೯೭೭ ರಲ್ಲಿ ತೆರೆ ಕಂಡ ಕರ್ನಾಟಕದ ಕುಳ್ಳ ಎಂದು ಪ್ರಸಿದ್ಧಿ ಪಡೆದಿರುವ ನಟ, ನಿರ್ಮಾಪಕ ದ್ವಾರಕೀಶ್ ನಿರ್ಮಾಣದ ಮತ್ತು ನಟ ಸಾರ್ವಭೌಮ ಡಾ.ರಾಜಕುಮಾರ್ ಅಭಿನಯದ ಎವರ್ ಗ್ರೀನ್ ಬ್ಲಾಕ್ ಬಾಸ್ಟರ್ ಭಾಗ್ಯವಂತರು ಚಿತ್ರ. ಇದು ಮೂಲತಃ  ಧೀರ್ಘ ಸುಮಂಗಲಿ ಎಂಬ ಸೂಪರ್ ಹಿಟ್ ತಮಿಳು ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಇವರಿಗೆ ಪುನಃ ಮಗನ ಪಾತ್ರವನ್ನು ನಿರ್ವಹಿಸಲು ಅವಕಾಶ ದೊರಕಿತು. ಯಾಕೆಂದರೆ ಒಬ್ಬ ಮೇರು ನಟರ ಜೊತೆ ನಟಿಸುವುದೆಂದರೆ ಸುಲಭದ ವಿಷಯವಲ್ಲ. ಆದರೂ ಮೇರು ನಟರ ಈ ಎರಡು ಚಿತ್ರಗಳಲ್ಲಿ ಇವರು ನಿರ್ವಹಿಸಿದ ಮಗನ ಪಾತ್ರ ಅದ್ಭುತ. ಈ ಚಿತ್ರವು ಪಡೆದ ಯಶಸ್ಸು ಕರುನಾಡಿಗೆ ತಿಳಿದಿರುವುದರಿಂದ ಯಾವ ರೀತಿ ವರ್ತಿಸಬೇಕೆಂದು ತಿಳಿಯುತ್ತಿಲ್ಲ.

ಇದೇ ಚಿತ್ರದ ತೆಲುಗು ರಿಮೇಕ್ ನಲ್ಲಿ ಸೂಪರ್ ಸ್ಟಾರ್ ನಟ ಕೃಷ್ಣ  ಡಾ.ರಾಜಕುಮಾರ್ ಪಾತ್ರವನ್ನು ನಿರ್ವಹಿಸಿದ್ದರು.ಈ ರೀತಿಯಾಗಿ ಶ್ರೇಷ್ಠ ನಟರೊಂದಿಗೆ ತಮ್ಮ ಬಣ್ಣದ ಬದುಕನ್ನು ಪ್ರಾರಂಭಿಸಿದ ಇವರು ಬಯಲು ದಾರಿ,ರಂಗ ನಾಯಕಿ,ಮುಗಿಲ ಮಲ್ಲಿಗೆ, ತುಂಬಿದ ಮನೆ, ಅರ್ಚನಾ,ತಿರುಪತಿ ಎಕ್ಸ್ ಪ್ರೆಸ್, ಅಧ್ಯಕ್ಷ ಇನ್ ಅಮೇರಿಕಾ, ಪಾವನ ಗಂಗಾ,ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಕೆಂಪೇಗೌಡ,ಮಹಾರಾಜ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಪ್ಪು, ನಮ್ಮ ಬಸವ, ರಾಜಕುಮಾರ್, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕುಟುಂಬ, ನ್ಯೂಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸ್ವಾಮಿ, ಚಕ್ರವರ್ತಿ ಚಿತ್ರ ಸೇರಿ ಅನೇಕ ಚಿತ್ರಗಳಲ್ಲಿ ನಟ, ನಾಯಕ ನಟ, ಪೋಷಕ ನಟ ಮತ್ತು ಖಳನಾಯಕನ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಸ್ತುತ ಕರ್ನಾಟಕ ಚಲನಚಿತ್ರ ಕಲಾವಿದರು ಮತ್ತು ಕಾರ್ಮಿಕ ವರ್ಗದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ತೆರೆ ಕಂಡ ಚಿತ್ರಗಳಲ್ಲಿ ಇವರು ಯಾಕೆ ಕಾಣಿಸಿಕೊಳ್ಳುತ್ತಿಲ್ಲ? ಇವರಲ್ಲದೆ ಇನ್ನೂ ಅನೇಕ ಹಿರಿಯ ಕಲಾವಿದರು ಕೂಡ ಯಾಕೆ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲವೆಂಬುದೇ ಯಕ್ಷ ಪ್ರಶ್ನೆಯಾಗಿದೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply