ಕನ್ನಡ ಚಿತ್ರರಂಗದ ಆಚಾರ್ಯ ನಟ, ನಿರ್ಮಾಪಕ, ನಿರ್ದೇಶಕ ಜಿ.ವಿ.ಅಯ್ಯರ್

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದ ನಟ, ನಿರ್ಮಾಪಕ, ನಿರ್ದೇಶಕ ಜಿ.ವಿ.ಅಯ್ಯರ್ ಕನ್ನಡ ಚಿತ್ರರಂಗದ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು. ಅಷ್ಟೇ ಅಲ್ಲದೆ ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತರು ಕೂಡಾ ಆಗಿದ್ದರು. ಇಂದಿನ ಯುವ ಜನಾಂಗಕ್ಕೆ ಇವರ ಸಾಧನೆಯನ್ನು ತಿಳಿಸಿಕೊಡಬೇಕೆಂಬ ಉದ್ದೇಶದಿಂದಲೇ ಅಧ್ಯಯನ ಮತ್ತು ಮಾಹಿತಿ ಸಂಗ್ರಹಣೆಯ ಮೂಲಕ ಈ ಲೇಖನವನ್ನು ರಚಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಇದು ನನ್ನ 125 ನೇ ಲೇಖನ ಕೂಡ ಆಗಿದೆ.


ಸೆಪ್ಟೆಂಬರ್ 3, 1917 ರಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನಿಸಿದ ಇವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯಂಗಾರ್. ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಮೈಸೂರಿನ ಸದಾರಮೆ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಗಳನ್ನು ಬರೆಯುವ ಮೂಲಕ ಕೆಲಸವನ್ನು ಆರಂಭಿಸಿದ ಇವರು ನಂತರ ಗುಬ್ಬಿ ನಾಟಕ ಕಂಪನಿಯಲ್ಲಿ ಕೆಲಸವನ್ನು ನಿರ್ವಹಿಸಿ ಅಪಾರ ಅನುಭವವನ್ನು ಪಡೆದಿದ್ದರು. ನಂತರ ಅವಕಾಶಕ್ಕಾಗಿ ಪುಣೆಗೆ ಹೋದ ಇವರು ಅಲ್ಲಿ ತಮ್ಮ ಬದುಕಿಗಾಗಿ ಹೋಟೆಲ್ ಮಾಣಿಯ ಕೆಲಸವನ್ನು ನಿರ್ವಹಿಸುತ್ತಲೇ ಚಿತ್ರ ರಂಗದಲ್ಲಿನ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದರು. ಆದರೆ ಅದು ಫಲಕಾರಿಯಾಗದೇ ಕರ್ನಾಟಕಕ್ಕೆ ಹಿಂತಿರುಗಿದರು. 1943 ರಲ್ಲಿ ತೆರೆ ಕಂಡ ರಾಧಾರಮಣ ಚಿತ್ರದಲ್ಲಿ ಕೇಶಿದತ್ಯನ ಪಾತ್ರವನ್ನು ನಿರ್ವಹಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದರು. ಆದರೆ 1954 ರಲ್ಲಿ ತೆರೆ ಕಂಡ ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಆರಾಧ್ಯ ದೈವ ವರನಟ ಡಾ. ರಾಜಕುಮಾರ್ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ನಟಿಸಿದ್ದ ಬೇಡರ ಕಣ್ಣಪ್ಪ ಚಿತ್ರವು ಇವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅದರಲ್ಲೂ ಈ ಚಿತ್ರದಲ್ಲಿ ಇವರು ನಿರ್ವಹಿಸಿದ್ದ ಕೈಲಾಸನ ಪಾತ್ರ ಮಾಡಿದ ಮೋಡಿ ಸಾಮಾನ್ಯವೇ? ತೆರೆ ಕಂಡ ನಂತರ ಈ ಚಿತ್ರವು ಪಡೆದ ಜನಪ್ರಿಯತೆಯನ್ನು ವರ್ಣಿಸಲು ಪದಗಳು ಕೂಡ ಸಾಲದು. ನಂತರ ಕೂಡ ಇವರು ಚಲನ ಚಿತ್ರಗಳಲ್ಲಿ ನಟಿಸುತ್ತಿದ್ದರೂ ತಮಗೆ ಬದುಕನ್ನು ಕೊಟ್ಟಿದ್ದ ರಂಗಭೂಮಿಯನ್ನು ಮರೆತಿರಲಿಲ್ಲ. ರಂಗಭೂಮಿಯಲ್ಲಿಯೂ ಕೂಡ ಸಕ್ರೀಯವಾಗಿದ್ದರು. 1955 ರಲ್ಲಿ ತೆರೆ ಕಂಡ ಸೋದರಿ ಚಿತ್ರದ ಮೂಲಕ ಹಾಡು ಮತ್ತು ಸಂಭಾಷಣೆಯನ್ನು ಬರೆಯುವ ಮೂಲಕ ಚಿತ್ರ ಸಾಹಿತಿಯಾಗಿಯೂ ಕೆಲಸವನ್ನು ಆರಂಭಿಸಿದರೆ 1962 ರಲ್ಲಿ ತೆರೆ ಕಂಡ ಭೂ ದಾನ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕರಾಗಿಯೂ ಬಡ್ತಿಯನ್ನು ಪಡೆದಿದ್ದರು. ಈ ರೀತಿಯಾಗಿ ಇವರಲ್ಲಿ ಪ್ರತಿಭೆಯ ಸಾಗರವೇ ಇತ್ತು. ಅಲ್ಲದೇ ಆ ಕಾಲದಲ್ಲಿ ಕನ್ನಡದ ಬಹಳಷ್ಟು ಕಲಾವಿದರ ಆರ್ಥಿಕ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಕಲಾವಿದರ ಆರ್ಥಿಕ ಸ್ಥಿತಿಯ ಬಗ್ಗೆ ಕಳಕಳಿಯನ್ನು ಹೊಂದಿದ್ದ ಇವರು ಡಾ. ರಾಜಕುಮಾರ್, ಬಾಲಕೃಷ್ಣ ಮತ್ತು ನರಸಿಂಹರಾಜು ರವರ ಜೊತೆ ಸೇರಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿದರು. ಅಲ್ಲದೇ ರಾಜ್ಯಾದ್ಯಂತ ಪ್ರವಾಸವನ್ನು ಮಾಡಿ ಕನ್ನಡ ಚಿತ್ರರಂಗ ಭದ್ರವಾದ ನೆಲೆಯನ್ನು ಕಂಡುಕೊಳ್ಳಲು, ಕಲಾವಿದರು ಬದುಕಲು ಹಲವಾರು ಮಾರ್ಗಗಳನ್ನು ಹುಡುಕಿದರು. ಆದರೆ ಆ ಸಮಯದಲ್ಲಿ ಕನ್ನಡ ಚಿತ್ರಗಳ ಸಂಖ್ಯೆಯಲ್ಲಿ ಅನಿರೀಕ್ಷಿತ ಇಳಿಕೆಯು ಕಂಡಿತ್ತು. ಆದರೂ ಕನ್ನಡ ಚಿತ್ರದ ಉಳಿವಿಗಾಗಿ ಇವರು ತಮ್ಮ ಸ್ನೇಹಿತರೊಡನೆ ಸೇರಿ ಡಾ.ರಾಜಕುಮಾರ್ ನಾಯಕತ್ವದಲ್ಲಿ ರಣಧೀರ ಕಂಠೀರವ ಎಂಬ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಆದರೆ ಈ ಚಿತ್ರವು ತೆರೆ ಕಂಡ ನಂತರ ಮಾಡಿದ ಮೋಡಿ ಸಾಮಾನ್ಯವಾಗಿ ರಲಿಲ್ಲ. ಈ ಚಿತ್ರದ ನಂತರ ಕುಂಠಿತಗೊಂಡಿದ್ದ ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ನಿರೀಕ್ಷೆಗೂ ಮೀರಿ ಏರಿಕೆ ಕಂಡಿತ್ತು. ಸುಮಾರು 65 ಚಿತ್ರಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದ ಇವರು ನಿರ್ದೇಶಕರಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದರು. ಆರಂಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ಇವರು 1975 ನೇ ಇಸ್ವಿ ನಂತರ ಬಾಕ್ಸ್ ಆಫೀಸ್ ನ್ನು ಲೆಕ್ಕಿಸದೇ ಕಲಾತ್ಮಕ ಚಿತ್ರಗಳ ಕಡೆ ಹೊರಳಿದ್ದರು. ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದಿದ್ದ ಇವರು ಸಂಸ್ಕೃತ ಭಾಷೆಯಲ್ಲಿ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದ ರಲ್ಲದೇ ಹಿಂದಿ ಭಾಷೆಯಲ್ಲೂ ಕೂಡ ನಿರ್ದೇಶನವನ್ನು ಮಾಡಿದ್ದರಲ್ಲದೇ 1954 ರಲ್ಲಿ ಬೇಡರ ಕಣ್ಣಪ್ಪ ನಾಟಕವನ್ನು ನಿರ್ದೇಶಿಸಿದ್ದರು. ಇವರ ನಿರ್ದೇಶನದಲ್ಲಿ ಮೂಡಿ ಬಂದ ಆದಿ ಶಂಕರಾಚಾರ್ಯ ಎಂಬ ಪ್ರಪ್ರಥಮ ಸಂಸ್ಕೃತ ಚಿತ್ರ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರವೆಂದು ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದಿತ್ತು.


1975 ರಲ್ಲಿ ಆಚಾರ್ಯ ಎಂಬ ಬಿರುದನ್ನು ಪಡೆದ ಇವರು ತಮ್ಮ ಬದುಕಿನ ಪದ್ಧತಿಯನ್ನು ಬದಲಾಯಿಸಿದರು. ಚಪ್ಪಲಿಯನ್ನು ತ್ಯಜಿಸಿ ಮುಂದೆ ಬರಿಗಾಲಲ್ಲಿ ನಡೆದಾಡಿದ್ದರು. ಆದರೆ ಇವರು ತಮ್ಮ ಬಣ್ಣದ ಬದುಕಿನಲ್ಲಿ ಸದಭಿರುಚಿಯ ಚಿತ್ರಗಳನ್ನೂ ಹೆಚ್ಚು ತಯಾರಿಸಿದ್ದರಲ್ಲದೇ ಕೆಲಸದ ವಿಷಯದಲ್ಲಿ ಎಂದಿಗೂ ರಾಜಿಯಾದವರಲ್ಲ. ತಮ್ಮ ಖಾಸಗಿ ಜೀವನದಲ್ಲಿ ಶಿಸ್ತಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಇವರು ಭಾಣ ಭಟ್ಟನ ಸಂಸ್ಕೃತ ಕೃತಿ ಕಾದಂಬರಿಯನ್ನು ಚಿತ್ರ ಮಾಡುವ ಮತ್ತು ರಾಮಾಯಣ ಮಹಾಕಾವ್ಯವನ್ನು ವೈಜ್ಞಾನಿಕ ದೃಷ್ಟಿ ಕೋನದ ಮೂಲಕ ಚಿತ್ರೀಕರಿಸುವ ಯೋಚನೆಯಲ್ಲಿದ್ದರು. ಈ ವಿಷಯದ ಕುರಿತು ಚರ್ಚಿಸಲು ಮುಂಬೈಗೆ ತೆರೆಳಿದ್ದ ಸಮಯದಲ್ಲಿ 2003, ಡಿಸೆಂಬರ್ 21 ರಂದು ಮೂತ್ರ ಪಿಂಡದ ಸೋಂಕಿನಿಂದ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗುವುದರೊಂದಿಗೆ ಕನ್ನಡ ಚಿತ್ರರಂಗವು ಒಬ್ಬ ಶ್ರೇಷ್ಠ ಆಚಾರ್ಯ ರನ್ನು ಕಳೆದುಕೊಂಡಿತು. ತಮ್ಮ 30 ಕ್ಕೂ ಅಧಿಕ ವರ್ಷದ ಬಣ್ಣದ ಬದುಕಿನಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದು ಅಪಾರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply