ಕನ್ನಡ ಚಿತ್ರರಂಗದ ಪ್ರಮುಖ ಗೀತರಚನೆಕಾರ ಮತ್ತು ನಿರ್ದೇಶಕ ಗೀತಪ್ರಿಯ

ಮುಂದುವರಿದ ಭಾಗ

1969 ರಲ್ಲಿ ತೆರೆ ಕಂಡ ಕಾಡಿನ ರಹಸ್ಯ ಇವರ ನಿರ್ದೇಶನದಲ್ಲಿ ಮೂಡಿ ಬಂದ ಎರಡನೇ ಚಿತ್ರವಾದರೆ ಅದೇ ವರ್ಷ ಮದುವೆ ಮದುವೆ ಮದುವೆ ಎಂಬ ಹಾಸ್ಯ ಪ್ರಧಾನ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಇವರು ನಿರ್ದೇಶಿಸಿದ ಬಹುತೇಕ ಚಿತ್ರಗಳಿಗೆ ಇವರೇ ಗೀತೆಗಳನ್ನು ರಚಿಸಿದ್ದರು. ಇನ್ನೂ ನಮ್ಮ ಚಿತ್ರರಂಗವನ್ನು ಪ್ರವೇಶಿಸುವ ಪ್ರತಿಯೊಬ್ಬರಿಗೂ ಅವರದೇ ಆದ ಕಾರಣವೋ, ಹಿನ್ನಲೆಯೋ ಇದ್ದು ಇದನ್ನು ನಾನು ಹಲವಾರು ಲೇಖನಗಳಲ್ಲಿ ತಿಳಿಸಿದ್ದೇನೆ. ಅದೇ ರೀತಿ ಇವರು ಕೂಡ ಚಿತ್ರ ರಂಗವನ್ನು ಪ್ರವೇಶಿಸಲು ಪ್ರಮುಖ ಕಾರಣವಿದೆ. ಇದು ಸುಮಾರು 1943 ನೇ ಇಸ್ವಿಯಲ್ಲಿ  ನಡೆದ ಘಟನೆಯಾಗಿದ್ದು ಆ ಸಮಯದಲ್ಲಿ ಸತ್ಯ ಹರಿಶ್ಚಂದ್ರ ಎಂಬ ಚಿತ್ರವು ತೆರೆ ಕಂಡಿತ್ತು. ಈ ಚಿತ್ರವನ್ನು ನೋಡಿದ ಇವರಿಗೆ ಏನು ಅನಿಸಿತೋ ತಿಳಿಯದು ಚಿತ್ರನಟನಾಗಬೇಕೆಂಬ ಹಂಬಲವು ಉಂಟಾಗಿತ್ತು. ಆದರೂ ಅಷ್ಟಕ್ಕೇ ಬಿಡದೇ ನಟನಾಗಬೇಕೆಂಬ ಉದ್ದೇಶದಿಂದ ಮದ್ರಾಸ್ ಗೆ ಪ್ರಯಾಣವನ್ನು ಬೆಳೆಸಿದರು. ಅಲ್ಲಿ ಕಥಕ್ ಡ್ಯಾನ್ಸ್ ನ್ನು ಕಲಿತು ನಾಟಕ ಕಂಪನಿಗಳಲ್ಲಿ ನಟಿಸಿ ಅನುಭವವನ್ನು ಪಡೆದುಕೊಂಡರು. ನಂತರ ಕೂಡ ಒಂದೆರಡು ತೆಲುಗು ಚಿತ್ರಗಳಲ್ಲಿ ಡ್ಯಾನ್ಸ್ ರ್  ಆಗಿಯೂ ಕಾಣಿಸಿಕೊಂಡಿದ್ದರು.  ಹೀಗಿರುವಾಗ ಆರ್.ನಾಗೇಂದ್ರರಾಯರು  ಒಂದು ಸಿನಿಮಾವನ್ನು ತಯಾರಿಸಲಿರುವ ಸುದ್ದಿಯು ಇವರ ಕಿವಿಗೆ ಬಿತ್ತು. ತಕ್ಷಣವೇ ಅಲ್ಲಿಗೆ ಹೋಗಿ ಇವರು ನನಗೂ ಒಂದು ಪಾತ್ರವನ್ನು ಕೊಡಿ ಎಂದು ಕೇಳಿದರಂತೆ, ಅದಕ್ಕೆ ಆರ್.ನಾಗೇಂದ್ರರಾಯರು ಈಗಾಗಲೇ ಎಲ್ಲ ಪಾತ್ರಗಳ ಆಯ್ಕೆ ಮುಗಿದಿದ್ದು ಮುಂದೆ ನೋಡೋಣ, ಈಗ ನೀನು ಬೆಂಗಳೂರಿಗೆ ಹೊರಡು ಎಂದಾಗ ಬೇಸರದಿಂದ ಬೆಂಗಳೂರಿಗೆ ಹಿಂತಿರುಗಿದರು.

ಆದರೆ ವಿಧಿ ಇವರ ಜೀವನದಲ್ಲಿ ಇನ್ನೊಂದು ರೀತಿಯಲ್ಲಿ ಆಟವನ್ನು ಆಡಿತು. ಬೆಂಗಳೂರಿಗೆ ಹಿಂತಿರುಗಿ ಹೋದ ಕೆಲವೇ ದಿನಗಳಲ್ಲಿ ಇವರ ತಂದೆಯು ಅನಾರೋಗ್ಯದಿಂದ ಮರಣವನ್ನು ಹೊಂದಿದರು. ಮುಂದೆ ಅನುಕಂಪದ ಆಧಾರದ ಮೇಲೆ ಇವರ ತಂದೆಯವರು ಕೆಲಸವನ್ನು ನಿರ್ವಹಿಸುತ್ತಿದ್ದ ಲ್ಯಾನ್ಸರ್ಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡರು. ಆದರೆ ದುರದೃಷ್ಟವಶಾತ್ ಕೆಲವೇ ದಿನಗಳಲ್ಲಿ ಕಂಪನಿ ಕೂಡ ಮುಚ್ಚಿ ಹೋಯಿತು. ಆದರೂ ತಾಯಿ, ಇಬ್ಬರು ತಂಗಿಯರು ಹಾಗೂ ಮೂವರು ಸಹೋದರರನ್ನು ಸಾಕುವ ಜವಾಬ್ದಾರಿಯಿದ್ದುದ್ದರಿಂದ ಇವರು ಕಬ್ಬನ್ ಪಾರ್ಕ್ ಬಳಿಯಿದ್ದ ಬಾರ್ ಒಂದರಲ್ಲಿ ಬಿಲ್ ರೈಟರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದರೂ ಸಿನಿಮಾದ ಗೀಳು ಇದ್ದುದರಿಂದ ದಿನದ ಕೆಲಸಗಳನ್ನು ಮುಗಿಸಿ ರಾತ್ರಿ ಎನ್ನದೆ ಕುಳಿತು ಸಿನಿಮಾಕ್ಕೆ ಹಾಡು, ಚಿತ್ರ ಕಥೆಯನ್ನು ಬರೆಯುತ್ತಿದ್ದರು. ಒಂದು ದಿನ ಇವರ ಪ್ರತಿಭೆಯನ್ನು ಕಂಡ ವಿಜಯಭಾಸ್ಕರ್ ನಿನಗೆ ಇಲ್ಲಿ ಎಷ್ಟು ಸಂಬಳ ಸಿಗುತ್ತೆ? 40ರೂ ಕೊಡುತ್ತೇನೆ ನನ್ನ ಜೊತೆ ಮದ್ರಾಸಿಗೆ ಬಂದು ಬಿಡು ಎಂದರು. ಇವರು ಕೇವಲ 5 ರೂ ಹೆಚ್ಚಿನ ಸಂಬಳಕ್ಕಾಗಿ ಮದ್ರಾಸಿಗೆ ಹೋಗಿ ಅಲ್ಲಿ ತಮಿಳು, ತೆಲುಗು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸುತ್ತ ಸಂಭಾಷಣೆ,ಗೀತ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ನಂತರ 1967 ರಲ್ಲಿ ವನ ಮಾಲಾ ಎಂಬುವರು ನಟ ಕೆ.ಎಸ್.ಅಶ್ವಥ್, ರಾಜಾಶಂಕರ್, ಪಂಡರಿಬಾಯಿ ಮತ್ತು ಅಭಿನಯ ಶಾರದೆ ಜಯಂತಿ ತಾರಾಗಣದಲ್ಲಿ ಒಂದೇ ಬಳ್ಳಿಯ ಹೂಗಳು ಎಂಬ ಚಿತ್ರವನ್ನು ನಿರ್ಮಿಸಲು ಸಿದ್ಧರಾದರು. ಈ ಚಿತ್ರವನ್ನು ಎಂ.ಎಸ್.ನಾಯ್ಕ ನಿರ್ದೇಶನದ್ದಾದರೆ ಇವರಿಗೆ ಚಿತ್ರ ಕಥೆ ಹಾಗೂ ಹಾಡನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಇವರು ರಚಿಸಿದ್ದ ಈ ಚಿತ್ರದಲ್ಲಿ ಬರುವ ನೀನೆಲ್ಲಿ ನಡೆವ ದೂರ ಗೀತೆಗೆ  ಒಂದು ವಿಶೇಷತೆಯಿದೆ. ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ಗಾಯಕ ಮಹಮ್ಮದ್  ರಫಿ ಅವರು ಹಾಡಿರುವ ಏಕೈಕ ಕನ್ನಡ ಗೀತೆಯಾಗಿದೆ. ಅಲ್ಲದೇ ಇವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಆಕ್ರೋಶ,ಬಡವರ ಪರ ದನಿ, ದೇವರ ಮೇಲಿನ ಸಿಟ್ಟು ಇವುಗಳೆಲ್ಲ ಜನ ಸಾಮಾನ್ಯರ ದನಿಯೆನಿಸಿ ಪ್ರಸಿದ್ಧಿಯಾಗಿವೆ. ಮತ್ತು ಕನ್ನಡದಲ್ಲಿ ಬಂದ ಪ್ರಚಂಡ ಪುಟಾಣಿಗಳು ಚಿತ್ರವನ್ನು ಹಿಂದಿಯಲ್ಲಿ ಅನ್ ಮೋಲ್ ಸಿತಾರೆ ಹೆಸರಿನಲ್ಲಿ ನಿರ್ದೇಶಿಸಿದ್ದರು.


ಇವರು ಹೊಂಬಿಸಿಲು ಚಿತ್ರದ ನೀರ ಬಿಟ್ಟು ನೆಲದ ಮೇಲೆ, ಭಾವಗೀತೆ ಭಾಳಿನೊಲುಮೆಯ ಸಂಕೇತ, ಹೂವಿಂದ ಹೂವಿಗೆ ಹಾರುವ ದುಂಬಿಯು ಏನೋ ಹೇಳುತಿದೆ? ಬೆಸುಗೆ ಚಿತ್ರದ ಬೆಸುಗೆ,ಬೆಸುಗೆ, ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ, ಮತ್ತು ಅನುರಾಗ ಬಂಧನ ಚಿತ್ರದ ನಿನ್ನ ಸವಿ ಸವಿ ನೆನಪೇ ಮನದಲ್ಲಿ ಆರಾಧನೆ, ಪ್ರೀತಿಯ ಸವಿ ಮಾತೆ ಉಪಾಸನೆ ಸೇರಿ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದು ಗೀತೆಗಳ ಸಂಖ್ಯೆ 2000 ದಾಟಿದೆ. ಇವರ 2 ಕಾದಂಬರಿ ಮತ್ತು 9 ನಾಟಕಗಳು ಪ್ರಕಟಿಸಲ್ಪಟ್ಟಿದ್ದಲ್ಲದೇ ಬಾಳ ಲಹರಿ ಎಂಬ ಹೆಸರಿನ ತಮ್ಮ ಆತ್ಮ ಕಥನ ಪುಸ್ತಕವನ್ನು ಬರೆದಿದ್ದಾರೆ. ಇಂತಹ ಅಗಾಧ ಪ್ರತಿಭೆಯನ್ನು ಹೊಂದಿದ್ದ ಇವರು ಜನೆವರಿ 17, 2016 ರಂದು ತಮ್ಮ 84 ನೇ ವಯಸ್ಸಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು.
   

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply