ಕನ್ನಡ ಚಿತ್ರರಂಗದ ಪ್ರಮುಖ ಗೀತರಚನೆಕಾರ ಮತ್ತು ನಿರ್ದೇಶಕ ಗೀತಪ್ರಿಯ

ಗೀತಪ್ರಿಯ

ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಆರಾಧ್ಯ ದೈವ ನಟ ಸಾರ್ವಭೌಮ ಡಾ.ರಾಜಕುಮಾರ್ ಹಾಗೂ ಮಿನುಗುತಾರೆ ಕಲ್ಪನಾ ನಟಿಸಿದ್ದ ಹಳ್ಳಿ ಸೊಗಡಿನ ಹಿನ್ನಲೆಯ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಮಣ್ಣಿನ ಮಗ   ಚಿತ್ರವನ್ನು ನೋಡಿದ ಕೂಡಲೇ ಚಿತ್ರ ಪ್ರೇಮಿಗಳಿಗೆ ಮೊದಲು ನೆನಪಿಗೆ ಬರುವುದೇ ನಿರ್ದೇಶಕ ಗೀತಪ್ರಿಯ. ತಮ್ಮ ಮೊದಲ ಚಿತ್ರವನ್ನು ಅನುಭವಿ ನಿರ್ದೇಶಕರ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದ ಇವರು ಕೇವಲ ನಿರ್ದೇಶಕ ಮಾತ್ರವಲ್ಲ ಗೀತ ರಚನೆಕಾರ ಕೂಡ.

         1931, ಜೂನ್ 15 ರಂದು ರಾಮರಾವ್ ಮೋಹಿತೆ ಮತ್ತು ಲಕ್ಷ್ಮಿ ಬಾಯಿ ದಂಪತಿಯ ಮಗನಾಗಿ ಜನಿಸಿದ ಇವರ ಮೂಲ ಹೆಸರು ಲಕ್ಷ್ಮಣರಾವ್ ಮೋಹಿತೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದ ಇವರಿಗೆ ಅಲ್ಲಿ ಕವಿ ಹೊಯಿಸಳರು ಗುರುಗಳಾದರೆ ಇಂಟರ್ ಮೀಡಿಯೇಟ್ ನಲ್ಲಿ ಜೆ.ಪಿ.ರಾಜರತ್ನಂ ಗುರುಗಳಾಗಿ ದೊರೆತಿದ್ದರು. ಸಾಹಿತ್ಯ ದಿಗ್ಗಜರ ಪರಿಚಯದ ಪ್ರಭಾವವೋ ತಿಳಿಯದು, ಇವರಲ್ಲಿ ಅಡಗಿದ್ದ ಸಾಹಿತ್ಯವನ್ನು ರಚಿಸಲು ಪ್ರೇರೇಪಿಸಿತು. ಪ್ರೌಢಶಾಲೆಯ ದಿನಗಳಲ್ಲಿ ಪದ್ಯ, ನಾಟಕಗಳನ್ನು ರಚಿಸಲು ಆರಂಭಿಸಿದರಲ್ಲದೇ ಅಂದಿನ ತಾಯಿ ನಾಡು ಪತ್ರಿಕೆಯಲ್ಲಿ ಕೂಡ ಪ್ರಕಟವಾಗುತ್ತಿದ್ದವು. ಆದರೆ  ಶಾಲಾ ದಿನಗಳಲ್ಲಿ  ಉರ್ದು ಶಾಯರಿಗಳು ಇವರನ್ನು ವಿಶೇಷವಾಗಿ ಆಕರ್ಷಿಸಿದ್ದವಲ್ಲದೇ ನಾಟಕದತ್ತ ಕೂಡ ತಮ್ಮ ಒಲವನ್ನು ಹೊಂದಿದ್ದರು. ಇದರ ಪರಿಣಾಮ ಹವ್ಯಾಸಿ ಕಲಾವಿದರ ಸಂಪರ್ಕವೂ ದೊರೆಯಿತು. 

  ಇದೇ ಸಮಯದಲ್ಲಿ ಇವರು ರಚಿಸಿದ್ದ ಮದುವೆ ಮಾರ್ಕೆಟ್ ನಾಟಕ ಅಂದಿನ ದಿನಗಳಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಿತ್ತು. ಅಲ್ಲದೇ ನಾಟಕಗಳಲ್ಲಿ ಕೂಡ ನಟಿಸಿದ್ದರು. ಅಂದ ಹಾಗೆ ಬರೆಯುತ್ತ ಒಂದು ಮುಖ್ಯವಾದ ವಿಷಯ ಹೇಳುವುದನ್ನು ಮರೆತಿದ್ದೆ. ಇವರಿಗೆ ಚಿತ್ರರಂಗದ ಯಾವುದೇ ಹಿನ್ನೆಲೆಯಾಗಲಿ ಇಲ್ಲ. ವೀರ ಯೋಧರ ಕುಟುಂಬದಿಂದ ಬಂದವರು. ಇವರ ತಂದೆ ರಾಮರಾವ್ ಮೋಹಿತೆ ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಸೇನಾನಿ. ಇವರ ತಾತಾ ಕೂಡ ಸೇನೆಯಲ್ಲಿಯೇ ಸೇವೆ ಸಲ್ಲಿಸಿದ್ದರು. ಇವರ ತಂದೆ ಮೊದಲ ಮಹಾ ಯುದ್ದದ ನಂತರ ಕುಟುಂಬ ಸಮೇತರಾಗಿ ಬೆಂಗಳೂರಿನ ದಂಡು ಪ್ರದೇಶಕ್ಕೆ ಬಂದು ನೆಲೆಸಿದರು. ನಂತರ ಪು.ತಿ.ನ. ಅವರಿಂದ ಪ್ರೇರಿತರಾಗಿ ಅವರಿಂದ ಕನ್ನಡವನ್ನು ಕಲಿತು ಮೊದಲ ಬಾರಿಗೆ ಲವ ಕುಶ ಎಂಬ ನಾಟಕವನ್ನು ರಚಿಸಿದ್ದರು.  

ಗೀತಪ್ರಿಯ

      1956 ರಲ್ಲಿ ತೆರೆ ಕಂಡ ಭಾಗ್ಯ ಚಕ್ರ ಎಂಬ ಚಿತ್ರಕ್ಕೆ ಇವರು ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸುವ ಮೂಲಕ ಇವರು ತಮ್ಮ ವೃತ್ತಿಯನ್ನು ಆರಂಭಿಸಿದರು. ಆದರೆ ಮನುಷ್ಯನ ಜೀವನ ಒಂದೇ ರೀತಿಯಿರುವುದಿಲ್ಲ. ಬದಲಾಗುತ್ತಲೇ ಇರುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ಇವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಕರ್ನಾಟಕ ಫಿಲಂ ಸಂಸ್ಥೆಯಲ್ಲಿದ್ದ ಎಂ.ವಿ.ವೆಂಕಟಾಚಲಂ ಎಂಬ ಪ್ರಸಿದ್ಧ ನಿರ್ಮಾಪಕರು ಮಣ್ಣಿನ ಮಗ ಎಂಬ ಚಿತ್ರವನ್ನು ನಿರ್ಮಿಸಲು ಪೂರ್ವ ತಯಾರಿಯನ್ನು ಆರಂಭಿಸಿದ್ದರು. ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿಸಿದ್ದ ನಟ ಸಾರ್ವಭೌಮ ಡಾ.ರಾಜಕುಮಾರ್ ಈ ಚಿತ್ರಕ್ಕೆ ನಾಯಕ ನಟರಾಗಿ ಆಯ್ಕೆಯಾಗಿದ್ದರೂ ನಿರ್ದೇಶಕನ ಆಯ್ಕೆಯಾಗಿರಲಿಲ್ಲ, ಸೂಕ್ತ ಪ್ರತಿಭೆಯ ಹುಡುಕಾಟ ನಡೆದಿತ್ತು. ಇವರು (ಗೀತಪ್ರಿಯ) ಆಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರೂ  ಅದುವರೆಗೂ ಇವರಲ್ಲಿನ ಪ್ರತಿಭೆಯನ್ನು ಯಾರೂ ಗುರ್ತಿಸಿರಲಿಲ್ಲ. ಆದರೆ ನಿರ್ಮಾಪಕ ಎಂ.ವಿ.ವೆಂಕಟಾಚಲಂ ರವರು ಇವರಲ್ಲಿನ ಪ್ರತಿಭೆಯನ್ನು ಗುರುತಿಸಿ ತಮ್ಮ ಮಹತ್ವಾಕಾಂಕ್ಷೆಯ ಮಣ್ಣಿನ ಮಗ ಚಿತ್ರವನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ವಹಿಸಿದರು. ಅದರಲ್ಲೂ ಡಾ.ರಾಜಕುಮಾರ್ ನಟನೆಯ ಚಿತ್ರವೆಂದರೆ ಸಾಮಾನ್ಯವೇ?

ಇವರ ಚಿತ್ರಗಳು ಆರಂಭವಾಗುವುದ ರಿಂದ ತೆರೆ ಕಾಣುವವರೆಗೂ ನಿರೀಕ್ಷೆ, ಅಷ್ಟೇ ಕುತೂಹಲವನ್ನು ಹುಟ್ಟಿಸುತ್ತಿದ್ದವು. ಮುಖ್ಯವಾಗಿ ಒಬ್ಬ ಜನಪ್ರಿಯ ನಟನ ಚಿತ್ರವನ್ನು ನಿರ್ದೇಶಿಸುತ್ತಿರುವುದು ಅಷ್ಟು ಸುಲಭದ ಕೆಲಸವೇನಲ್ಲ, ಸಹಜವಾಗಿ ಒತ್ತಡ ಇದ್ದೇ ಇರುತ್ತದೆ. ಆದರೆ ಇವರಿಗೆ ನಿರ್ದೇಶನ ಹೊಸದಾಗಿದ್ದರೂ ನಿರ್ದೇಶನದ ಕಲೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ದೊರೆತ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಅನುಭವಿ ನಿರ್ದೇಶಕನ ರೀತಿಯಲ್ಲಿ ಚಿತ್ರವನ್ನು ನಿರ್ದೇಶಿಸಿ ಪ್ರಥಮ ಪ್ರಯತ್ನದಲ್ಲೇ ಇತಿಹಾಸವನ್ನು ನಿರ್ಮಿಸಿದ್ದರು. 1968 ನೇ ಇಸ್ವಿಯಲ್ಲಿ ತೆರೆ ಕಂಡ ಈ ಚಿತ್ರವು ನಂತರ ಯಶಸ್ವಿ ಪ್ರದರ್ಶನವನ್ನು ಕಂಡಿತಲ್ಲದೇ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಶತ ದಿನೋತ್ಸವವನ್ನು ಕಂಡ ಪ್ರಥಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿತ್ತು. 

ಮುಂದುವರೆಯುವುದು

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply