ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾನ್ವಿತ ಶ್ರೇಷ್ಠ ಚತುರ ನಟರಾಗಿರುವ ರಂಗಾಯಣ ರಘು ತಮ್ಮ ಚಿತ್ರಗಳಲ್ಲಿ ನಿರ್ವಹಿಸದ ಪಾತ್ರಗಳಿಲ್ಲ. ಮೂಲತಃ ರಂಗಭೂಮಿಯಲ್ಲಿ ತಮ್ಮ ನಟನೆಯನ್ನು ಆರಂಭಿಸಿ ಹಾಸ್ಯ, ಪೋಷಕ ಮತ್ತು ಖಳ ನಟನ ಪಾತ್ರವನ್ನು ನಿರ್ವಹಿಸಿದ್ದಲ್ಲದೆ ಕೆಲವು ಚಿತ್ರಗಳಲ್ಲಿ ನಾಯಕ ನಟರಾಗಿಯು ಅಭಿನಯಿಸಿದ್ದಾರೆ.
೧೯೬೫, ಎಪ್ರಿಲ್ ೧೭ ರಂದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊಟ್ಟೂರು ಎಂಬ ಊರಿನಲ್ಲಿ ಚಿಕ್ಕ ರಂಗಪ್ಪ ಮತ್ತು ವೀರಮ್ಮ ದಂಪತಿಯ ಒಂಬತ್ತನೇ ಮಗುವಾಗಿ ಜನಿಸಿದ ಇವರ ಮೊದಲ ಹೆಸರು ಕೊಟ್ಟೂರು ಚಿಕ್ಕ ರಂಗಪ್ಪ ರಘುನಾಥ್. ಒಂದುವರೆ ವರ್ಷದ ವಯಸ್ಸಿನವರಿದ್ದಾಗ ಇವರ ತಾಯಿಯು ತೀರಿಕೊಂಡರು. ನಾಲ್ಕನೇ ತರಗತಿಯವರೆಗೆ ತಮ್ಮ ಊರಿನಲ್ಲಿ ಶಿಕ್ಷಣ ಪಡೆದ ಇವರು ನಂತರ ಬೆಂಗಳೂರಿಗೆ ಬಂದರು.
ಪ್ರೌಢ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿದ್ದಾಗ ನಾಟಕದ ಕುರಿತು ಆಸಕ್ತಿ ಹೊಂದಿದ್ದ ಇವರು ಹತ್ತನೇ ತರಗತಿ ಮುಗಿಸದೇ ಊರಿಗೆ ಹಿಂತಿರುಗಿ ಅಲ್ಲಿ ಕುರಿ ಮೇಯಿಸಿಕೊಂಡು ಇದ್ದವರು ಪುನಃ ಬೆಂಗಳೂರಿಗೆ ಬಂದು ನ್ಯಾಷನಲ್ ಕಾಲೇಜು ಸೇರಿದರು. ೧೯೮೮ ರಲ್ಲಿ ಇಪ್ಪತ್ತು ಮೂರು ವರ್ಷದ ಯುವಕರಾಗಿದ್ದಾಗ ಮೈಸೂರಿನ ಪ್ರಸಿದ್ಧ ರಂಗ ಸಂಸ್ಥೆ ರಂಗಾಯಣದಲ್ಲಿ ತಿಂಗಳಿಗೆ ರೂ. ೮೦೦ ಸಂಭಳದ ಕೆಲಸಕ್ಕೆ ಸೇರಿದರು.
೧೯೮೮ ರಿಂದ ೧೯೯೯ ವರೆಗೂ ಇವರು ಬಿ.ವಿ.ಕಾರಂತರ ರಂಗಾಯಣ ರಂಗ ಭೂಮಿಯಲ್ಲಿ ವೇದಿಕೆಯ ನಟನಾಗಿ ಕೆಲಸ ನಿರ್ವಹಿಸಿದರು. ೧೯೯೫ ರಲ್ಲಿ ಪ್ರಪ್ರಥಮ ಬಾರಿಗೆ ಸಂಗೀತ ಮಾಂತ್ರಿಕ ಹಂಸಲೇಖ ನಿರ್ದೇಶನದಲ್ಲಿ ಬಂದ ಸುಗ್ಗಿ ಎಂಬ ಚಿತ್ರದಲ್ಲಿ ಪಾತ್ರವನ್ನು ನಿರ್ವಹಿಸಿದರು. ಆದರೆ ಕಾರಣಾಂತರಗಳಿಂದ ಚಿತ್ರವು ಬಿಡುಗಡೆಯಾಗಲಿಲ್ಲ.
ಆರು ವರ್ಷಗಳ ನಂತರ ೨೦೦೧ ನೇ ಇಸ್ವಿಯಲ್ಲಿ ಖ್ಯಾತ ನಟ, ನಿರ್ದೇಶಕರಾಗಿರುವ ರಮೇಶ್ ಅರವಿಂದ್, ಎಸ್.ನಾರಾಯಣ್ ಮತ್ತು ಮೋಹನ್ ಅಭಿನಯದ ಸೂಪರ್ ಹಿಟ್ ಹಾಸ್ಯ ಭರಿತ ಕೋತಿಗಳು ಸಾರ್ ಕೋತಿಗಳು ಚಿತ್ರದಲ್ಲಿ ಪೋಲಿಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುವುದರ ಮೂಲಕ ತಮ್ಮ ಚಿತ್ರ ರಂಗದ ಜೀವನವನ್ನು ಆರಂಭಿಸಿದ ಇವರು ೨೦೦೨ ನೇ ಇಸ್ವಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಧಮ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರದ ನಂತರ ತಮ್ಮ ಚಿತ್ರಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು.
( ಮುಂದುವರೆಯುವುದು )