ಕನ್ನಡ ಚಿತ್ರರಂಗದ ಸಕಲ ಕಲಾ ವಲ್ಲಭ ನಟ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ಮುಂದುವರಿದ ಭಾಗ:-

ಗೌತಮ ಬುದ್ಧ, ಧರ್ಮ ರತ್ನಾಕರ ಮತ್ತು ರಾಜಾ ಗೋಪಿಚಂದ್ ಸೇರಿ ಅನೇಕ ನಾಟಕಗಳನ್ನು ರಚಿಸಿದ್ದರಲ್ಲದೆ ಇವರ ಸಂಭಾಷಣೆ ಶೈಲಿಗೆ ಎಂತವಹರಾದರೂ ಮರಳಾಗುತ್ತಿದ್ದರು. ಪ್ರೇಕ್ಷಕರನ್ನು ನೇರವಾಗಿ ಮುಟ್ಟುವಂತಹ ಆಡು ಭಾಷೆಯ ಸಂಭಾಷಣೆಗಳು ಪ್ರಸಿದ್ಧಿಯನ್ನು ಪಡೆಯುತ್ತಿದ್ದಂತೆ ನಂತರ ಇವರು ತಮ್ಮ ಗಮನವನ್ನು ಬಹುತೇಕ ಬರವಣಿಗೆ ಕಡೆಗೆ ಕೇಂದ್ರೀಕರಿಸಿದ್ದರು. ಖ್ಯಾತ ನಿರ್ಮಾಪಕ, ನಿರ್ದೇಶಕರಾಗಿದ್ದ ಡಿ.ಶಂಕರ್ ಸಿಂಗ್ ಮತ್ತು ಬಿ. ವಿಠಲಾಚಾರ್ಯ ಇವರ ಬರವಣಿಗೆಯಲ್ಲಿನ ಸತ್ವವನ್ನು ತಿಳಿದುಕೊಂಡು ತಮ್ಮ ಎಲ್ಲ ಚಿತ್ರಗಳಿಗೂ ಸಂಭಾಷಣೆಯನ್ನು ಬರೆಯಲು ಅವಕಾಶವನ್ನು ನೀಡಿದರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರಲ್ಲದೆ ಇವರ ಎಲ್ಲ ಚಿತ್ರಗಳಿಗೂ ಹಾಡು ಮತ್ತು ಸಂಭಾಷಣೆಯನ್ನು ಬರೆದ ಪರಿಣಾಮ ಅದರಲ್ಲೂ ಸರಳ ಆಡು ಭಾಷೆಯ ಮಾತು, ಹಾಡುಗಳು ಆಗಿನ ಕಾಲದಲ್ಲಿ ಪ್ರೇಕ್ಷಕರಿಗೆ ಭರಪೂರ ಮೋಡಿಯನ್ನು ಮಾಡಿದ್ದವು. ಭಕ್ತಿ ಪ್ರಧಾನ, ಜಾನಪದ, ಐತಿಹಾಸಿಕ ಮತ್ತು ಸಾಮಾಜಿಕ ಸೇರಿ ಯಾವುದೇ ಆಗಿದ್ದರೂ ಆ ಪ್ರಕಾರಕ್ಕೆ ಜನ ಸಾಮಾನ್ಯರ ಮನಸ್ಸಿಗೆ ತಲುಪುವಂತಹ ಸರಳ ಸಾಹಿತ್ಯ ಇವರ ಬರವಣಿಗೆಯ ಮೂಲಕವೇ ಮೂಡಿ ಬರುತ್ತಿದ್ದವು.


ಜಗನ್ಮೋಹಿನಿ, ರತ್ನ ಮಂಜರಿ, ಕನ್ಯಾದಾನ, ವೀರ ಸಂಕಲ್ಪ, ಭೂತಯ್ಯನ ಮಗ ಅಯ್ಯು, ಭಕ್ತ ಸಿರಿಯಾಳ, ಭಕ್ತ ಜ್ಞಾನದೇವ, ಭಕ್ತ ಕುಂಬಾರ, ಬಬ್ರುವಾಹನ, ಸತ್ಯ ಹರಿಶ್ಚಂದ್ರ ಮತ್ತು ಎರಡು ವರ್ಷಗಳ ಕಾಲ ಸತತವಾಗಿ ಪ್ರದರ್ಶನಗೊಂಡು ಹಲವು ದಾಖಲೆಗಳನ್ನು ಸೃಷ್ಟಿಸಿದ್ದ ಬಂಗಾರದ ಮನುಷ್ಯ ಸೇರಿ ಅನೇಕ ಚಿತ್ರಗಳಿಗೆ ಹಾಡು ಮತ್ತು ಸಂಭಾಷಣೆಯನ್ನು ಬರೆದಿದ್ದರು.

ಕೆ.ಎಂ.ಹುಣಸೂರು, ಗೌತಮ್ ಸೇರಿ ವಿಭಿನ್ನ ಹೆಸರುಗಳಲ್ಲಿಯೂ ಗೀತೆ ರಚನೆಯನ್ನು ಮಾಡಿರುವ ಇವರು ಬೊಂಬೆಯಾಟವಯ್ಯ,ಮಾನವ ಮೂಳೆ ಮಾಂಸದ ತಡಿಕೆ, ಶಿವ ಶಿವ ಎಂದರೆ ಭಯವಿಲ್ಲ ಸೇರಿ ಅನೇಕ ಭಕ್ತಿ ಪ್ರಧಾನ ಗೀತೆಗಳು, ಗಿಲ್ ಗಿಲ್ ಗಿಲಕ್ಕ ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ ಮಾದರಿಯ ಜಾನಪದ ಛಾಯೆಯ ಗೀತೆ, ಬಾಳ ಬಂಗಾರ ನೀನು- ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವರ್ಯಾರೋ ಭಾವಗೀತಾತ್ಮಕ ಗೀತೆ ಮತ್ತು ಕುಲದಲ್ಲಿ ಕೀಳ್ಯಾವುದೋ…. ನಗು ನಗುತಾ ನಲಿ ಸೇರಿ ಅನೇಕ ಸಾರ್ವತ್ರಿಕ ಮೌಲ್ಯ ಸಾರುವ ಗೀತೆಗಳನ್ನು ರಚಿಸಿದ್ದರು. ಸರಳ ಆಡು ಮಾತಿನ ಸಂಭಾಷಣೆಗಳನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದ ಹೆಗ್ಗಳಿಕೆಯು ಕೂಡ ಇವರಿಗೆ ಸಲ್ಲಿದ್ದು ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಕನ್ನಡಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ. ಆದರೆ ಇಷ್ಟು ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಇವರು 1989, ಜನೆವರಿ 13 ರಂದು ತಮ್ಮ 75 ನೇ ವಯಸ್ಸಿನಲ್ಲಿ ಮರಣ ಹೊಂದುವ ಮೂಲಕ ನಮ್ಮ ಕನ್ನಡ ಚಿತ್ರರಂಗ ಅಪ್ಪಟ ಕನ್ನಡದ ಸಕಲ ಕಲಾ ವಲ್ಲಭನನ್ನು ಕಳೆದುಕೊಂಡಿತು.
ಅಂದ ಹಾಗೆ ಬರೆಯುತ್ತ ಎರಡು ಮುಖ್ಯವಾದ ವಿಷಯಗಳನ್ನು ಹೇಳುವುದನ್ನು ಮರೆತಿದ್ದೆ.
1) ರಾಜ್ಯ ಸರ್ಕಾರವು ಚಿತ್ರ ನಿರ್ದೇಶಕರ ಸೇವೆಯನ್ನು ಗುರುತಿಸಿ ನೀಡಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಹುಣಸೂರು ಕೃಷ್ಣಮೂರ್ತಿ.
2) ನಮ್ಮ ಕನ್ನಡ ಚಿತ್ರರಂಗದ ಕುಳ್ಳ ಎಂದೇ ಪ್ರಸಿದ್ಧಿ ಪಡೆದಿರುವ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇವರ ಸೋದರಳಿಯ ಕೂಡ ಆಗಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply