ಕನ್ನಡ ಚಿತ್ರರಂಗದ ಸಕಲ ಕಲಾ ವಲ್ಲಭ ನಟ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

hunsur krishnamurthy

   ನಾಟಕಕಾರ, ಚಿತ್ರಕಥೆಗಾರ, ಗೀತೆ ರಚನೆಕಾರ, ನಿರ್ಮಾಪಕ, ನಿರ್ದೇಶಕ ಹೀಗೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸವನ್ನು ನಿರ್ವಹಿಸಿ ಅಪಾರ ಅನುಭವವನ್ನು ಪಡೆದಿದ್ದ ಹುಣಸೂರು ಕೃಷ್ಣಮೂರ್ತಿಯವರು ತಮ್ಮ ವಿಶಿಷ್ಟ ಕೆಲಸದ ನಿರ್ವಹಣೆಗೆ ಅಭಿಮಾನಿಗಳಿಂದ, ಚಿತ್ರಪ್ರೇಮಿಗಳಿಂದ ಸಕಲ ಕಲಾ ವಲ್ಲಭ ಎಂದೇ ಬಿರುದನ್ನು ಪಡೆದಿದ್ದರು. ಹೆಚ್ಚಾಗಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸಿದ್ದು ಅದರಲ್ಲೂ ಇವರೇ ತಯಾರಿಸಿದ್ದ ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ನಟಿಸಿದ್ದ ಸತ್ಯ ಹರಿಶ್ಚಂದ್ರ, ಭಕ್ತ ಕುಂಬಾರ ಮತ್ತು ಬಬ್ರುವಾಹನ ಚಿತ್ರಗಳ ಯಶಸ್ಸನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ, ಅಲ್ಲದೇ ಕನ್ನಡ ಚಿತ್ರರಂಗದ ಮತ್ತು ಡಾ.ರಾಜಕುಮಾರ್ ರವರ ವೃತ್ತಿ ಜೀವನದಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿಸಿದ್ದವು.

hunsur krishnamurthy
hunsur krishnamurthy


      ಫೆಬ್ರುವರಿ 9, 1914 ರಂದು ಹುಣಸೂರಿನಲ್ಲಿ ಎಂ.ರಾಜಾರಾವ್ ಮತ್ತು ಪದ್ಮಾವತಮ್ಮ ದಂಪತಿಯ ಮಗನಾಗಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಶ್ಲೋಕ,ಕಥೆ, ಜನಪದ ಸಾಹಿತ್ಯ ನಿತ್ಯ ಮಂತ್ರವಾಗಿತ್ತು. ಇವರ ತಂದೆ ಎಂ.ರಾಜಾರಾವ್ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ತಮ್ಮ ಹುಟ್ಟೂರು ಹುಣಸೂರಿನಲ್ಲಿ   ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದ ಇವರು ನಂತರ ಮುಂದಿನ ಶಿಕ್ಷಣಕ್ಕಾಗಿ ಮೈಸೂರಿನ ಶಾರದಾ ವಿಲಾಸ ಶಾಲೆಗೆ ಸೇರಿದರು. ಹೀಗೆಯೇ ಒಂದು ದಿನ ಇವರ ಶಾಲೆಯ ಕಾರ್ಯಕ್ರಮದಲ್ಲಿ ವಿಲಿಯಂ ಷೇಕ್ಸ್ ಪಿಯರ್ ಒಥಲೋ ಎಂಬ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತಲ್ಲದೆ ವೀಕ್ಷಿಸಲು ಮುಂಬೈನ ಖ್ಯಾತ ತಂತ್ರಜ್ಞ ಕಪಾಡಿಯಾವರನ್ನು ಆಹ್ವಾನಿಸಲಾಗಿತ್ತು. ಈ ನಾಟಕದಲ್ಲಿ ಇವರು ನಿರ್ವಹಿಸಿದ್ದ ಇಯಾಗೋ ಪಾತ್ರಕ್ಕೆ ಮನಸೋತಿದ್ದರಲ್ಲದೆ ನಟನೆಯನ್ನು ಮೆಚ್ಚಿ ತಮ್ಮ ಜೊತೆಗೆ ಮುಂಬೈಗೆ ಕರೆದುಕೊಂಡು ಹೋದರು. ಅಲ್ಲಿ ಸಿಂಹ ಸುಂದರಿ ಎಂಬ ಮೂಕಿ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸುವುದರ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಇವರಿಗೆ ಆಗ ವಯಸ್ಸು ಕೇವಲ ಹತ್ತು ವರ್ಷ.

ಈ ಚಿತ್ರದ ನಂತರ ಮೈಸೂರಿಗೆ ಹಿಂತಿರುಗಿ ಬಸವ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರೂ ಇವರಿಗೆ ಚಿತ್ರ ರಂಗದ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷಗಳ ನಂತರ ತಮ್ಮ 14 ನೇ ವಯಸ್ಸಿನಲ್ಲಿ ಪುನಃ ಮುಂಬೈಗೆ ಹೋಗಿ ಅಲ್ಲಿಯ ಮುಂಬಯಿ ಟಾಕೀಸ್ ನ್ನು ಸೇರಿ ಚಿತ್ರ ರಂಗದ ಎಲ್ಲ ಕೆಲಸವನ್ನು ಕಲಿತು ತಮ್ಮ ಕನ್ನಡ ನಾಡಿಗೆ ಹಿಂತಿರುಗಿ ಚಂದ್ರ ಕಲಾ ನಾಟಕ ಮಂಡಳಿಯನ್ನು ಸೇರಿದರು. ಆದರೆ ಫೀರ್ ಸಾಬ್ ರ ಅಕಾಲಿಕ ಮರಣ, ಗುಬ್ಬಿ ಕಂಪನಿಗೆ ಆಗಮಿಸಿ ಹಲವಾರು ನಾಟಕಗಳನ್ನು ರಚಿಸಿದ್ದರು. ಅದರಲ್ಲೂ ಇವರೇ ರಚಿಸಿದ್ದ ರಾಜಾ ಗೋಪಿಚಂದ್ ನಾಟಕ ಅಪಾರ ಪ್ರಸಿದ್ಧಿಯನ್ನು ಪಡೆದಿತ್ತು. ಸಂಸಾರ ನೌಕೆ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ಇವರು 1945 ರಲ್ಲಿ ತೆರೆ ಕಂಡ ಗುಬ್ಬಿ ವೀರಣ್ಣನವರ ಹೇಮ ರೆಡ್ಡಿ ಮಲ್ಲಮ್ಮ ಚಿತ್ರಕ್ಕೆ ಸಂಭಾಷಣೆಯನ್ನು ಬರೆಯುವ ಮೂಲಕ ಚಿತ್ರ ಸಾಹಿತಿಯಾಗಿ ಬಡ್ತಿಯನ್ನು ಪಡೆದರು. ಸುಮಾರು 50 ರ ದಶಕದ ಬಹುತೇಕ ಕಥೆಗಳ ರಚನಾಕಾರರು ಇವರೇ ಆಗಿದ್ದರು. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕನ್ನಡ ಚಿತ್ರರಂಗದ 50 ರ ದಶಕವನ್ನು ಹುಣಸೂರು ಯುಗವೆಂದೇ ಕರೆಯಲಾಗುತ್ತಿತ್ತು. ಇವರ ರಚನೆಯಲ್ಲಿ ಮೂಡಿ ಬಂದ ಜಗನ್ಮೋಹಿನಿ ಚಿತ್ರವು ಐತಿಹಾಸಿಕ ಗೆಲುವನ್ನು ಪಡೆದಿತ್ತಲ್ಲದೆ ನಾಗ ಕನ್ನಿಕಾ,ಶ್ರೀ ಶ್ರೀ ನಿವಾಸ ಕಲ್ಯಾಣ, ಚಂಚಲ ಕುಮಾರಿ, ದಳ್ಳಾಳಿ, ಗಂಧರ್ವ ಕನ್ಯೆ, ಕನ್ಯಾದಾನ, ರಾಜ ವಿಕ್ರಮ, ನಳ ದಮಯಂತಿ ಮತ್ತು ಮಹಾನಂದ ಸೇರಿ ಅನೇಕ ಚಿತ್ರಗಳು ಇವರ ಸಾಹಿತ್ಯದಿಂದ ಶ್ರೀಮಂತಗೊಂಡಿದ್ದವು.

1958 ರಲ್ಲಿ ತೆರೆ ಕಂಡ ನಂದಿ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಎಂ.ನಾಗಣ್ಣನವರು ನಿರ್ಮಿಸಿದ್ದ ಶ್ರೀ ಕೃಷ್ಣ ಗಾರುಡಿ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಕೂಡ ಮುಂಬಡ್ತಿಯನ್ನು ಪಡೆದರಲ್ಲದೇ ಆಗಿನ ಕಾಲದಲ್ಲಿ ಸಲಿಂಗ ಕಾಮದಂತಹ ಸೂಕ್ಷ್ಮ ವಸ್ತುವನ್ನು ಆಧಾರವಾಗಿಟ್ಟುಕೊಂಡು ಆಶಾ ಸುಂದರಿ ಎಂಬ ತಮ್ಮ ಎರಡನೇಯ ಚಿತ್ರವನ್ನು ನಿರ್ದೇಶಿಸಿದ್ದರು. ಅದರಲ್ಲೂ ವೀರ ಸಂಕಲ್ಪ ಚಿತ್ರವು ಇವರ ಪ್ರತಿಭೆಯನ್ನು ಸಂಪೂರ್ಣ ಅನಾವರಣ ಮಾಡಿತಲ್ಲದೆ ಅದುವರೆಗಿನ ಕನ್ನಡ ಚಿತ್ರರಂಗದ ಸ್ವರೂಪಕ್ಕಿಂತ ಅತೀ ವಿಭಿನ್ನವಾಗಿ ಮೂಡಿ ಬಂದಿತ್ತಲ್ಲದೆ ಇವರೇ ಕಂಡು ಕೊಂಡಂತೆ ವಿಶ್ವಾಮಿತ್ರನ ಸೃಷ್ಟಿಯಾಗಿತ್ತು. ವಿಜಯನಗರದ ಅವನತಿಯ ಸಂದರ್ಭದಲ್ಲಿ ಬಂದ ಎಚ್ಚಮ್ಮ ನಾಯಕ ಎಂಬ ಸ್ವಾಮಿ ಭಕ್ತನ ಕಥೆಯನ್ನು ಆಧರಿಸಿತ್ತಲ್ಲದೆ ಚಿತ್ರದ ನಾಯಕನ ಪಾತ್ರವನ್ನು ಸ್ವತಃ ಇವರೇ ನಿರ್ವಹಿಸಿದ್ದರು. ಉಜ್ವಲ ಸಂಭಾಷಣೆ, ಉತ್ತಮ ಸಶಕ್ತ ಗೀತೆಗಳಿಂದ ಶ್ರೀಮಂತವಾದ ಈ ಚಿತ್ರದ ಮೂಲಕ ಹಲವಾರು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗಿತ್ತು.

ಮುಂದುವರಿಯುವುದು……..

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply