ಕನ್ನಡ ಚಿತ್ರರಂಗದ ಸಾಮಾಜಿಕ ಚಲನಚಿತ್ರಗಳ ನಿರ್ದೇಶಕ ಸಿದ್ದಲಿಂಗಯ್ಯ

  ಸಿದ್ಧಲಿಂಗಯ್ಯ ಕನ್ನಡ ಚಿತ್ರರಂಗ ಕಂಡ ಒಬ್ಬ ಶ್ರೇಷ್ಠ ನಿರ್ದೇಶಕರು ಆಗಿದ್ದರು. ನಿರ್ದೇಶಿಸಿದ ಮೊದಲ ಚಿತ್ರದಲ್ಲಿ ಅಭೂತಪೂರ್ವ ಯಶಸ್ಸನ್ನು ಪಡೆದ ಇವರು ಗ್ರಾಮೀಣ ಕಥೆಯಾಧಾರಿತ ಚಿತ್ರಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಇವರ ಬಹುತೇಕ ಚಿತ್ರಗಳು ಸಾಮಾಜಿಕ ಕಥಾವಸ್ತುವನ್ನು ಒಳಗೊಂಡಿದ್ದರಿಂದ ಸಾಮಾಜಿಕ ಚಿತ್ರಗಳ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು.

       ಸಿದ್ಧಲಿಂಗಯ್ಯ ಡಿಸೆಂಬರ್ ೧೫,೧೯೩೬ ರಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಎಂಬ ಊರಿನಲ್ಲಿ ಲಿಂಗಣ್ಣ ಮತ್ತು ಸಿದ್ಧ ಬಸಮ್ಮ ದಂಪತಿಯ ಮಗನಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ತಾತಾ ಮತ್ತು ಸೋದರ ಮಾವನಲ್ಲಿದ್ದ ಕಲೆಯ ಕುರಿತ ಆಸಕ್ತಿ ಇವರ ಮೇಲೆ ಅತೀವ ಪ್ರಭಾವ ಬೀರಿತ್ತು.

ಚಿತ್ರ ರಂಗವನ್ನು ಪ್ರವೇಶಿಸುವ ಉದ್ದೇಶದಿಂದ ಮೈಸೂರಿಗೆ ಆಗಮಿಸಿದ ಇವರು ಅಲ್ಲಿಯ ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿಯೇ ತಮ್ಮ ಕೆಲಸವನ್ನು ನಿರ್ವಹಿಸುತ್ತ ಚಿತ್ರ ರಂಗದ ಸ್ಥಿತಿ ಗತಿಯ ಕುರಿತು ತಿಳಿದುಕೊಂಡ ನಂತರ ಶಂಕರ್ ಸಿಂಗ್ ಮತ್ತು ವಿಠಲಾಚಾರ್ಯರ ಬಳಿ ಅವರ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ನಿರ್ವಹಿಸಿದ್ದರು. ಕೆಲಸದಲ್ಲಿನ. ಶ್ರದ್ಧೆ ನಿಷ್ಠೆಯನ್ನು ಗಮನಿಸಿದ್ದ ಅಂದಿನ ಪ್ರಸಿದ್ಧ ಹಾಸ್ಯ ನಟ ಬಾಲಕೃಷ್ಣರವರು ನೀಡಿದ ಪ್ರೋತ್ಸಾಹ ಇವರ ಜೀವನವನ್ನು ಬದಲಿಸಿತು. ಅದೇ ಸಮಯದಲ್ಲಿ ಕರ್ನಾಟಕದ ಕುಳ್ಳ ಎಂದು ಪ್ರಸಿದ್ಧಿ ಪಡೆದಿರುವ ನಟ,ನಿರ್ಮಾಪಕ ದ್ವಾರಕೀಶ್ ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜಕುಮಾರ್ ನಾಯಕತ್ವದಲ್ಲಿ ಮೇಯರ್ ಮುತ್ತಣ್ಣ ಎಂಬ ಚಿತ್ರ ನಿರ್ಮಾಣದ ಸಿದ್ಧತೆಯಲ್ಲಿದ್ದರು. ಆದರೆ ಈ ಚಿತ್ರಕ್ಕೆ ನಿರ್ದೇಶಕರ ಆಯ್ಕೆಯಾಗಿರಲಿಲ್ಲ.

ಇದೇ ಸಮಯದಲ್ಲಿ ನಟ ಬಾಲಕೃಷ್ಣರ ಬೆಂಬಲದಿಂದ ದ್ವಾರಕೀಶ್ ನಿರ್ಮಾಣದ ಡಾ.ರಾಜಕುಮಾರ್ ನಟನೆಯ ಮೇಯರ್  ಮುತ್ತಣ್ಣ ಚಿತ್ರವನ್ನು ನಿರ್ದೇಶಿಸುವ ಮತ್ತು ಯಾರು ನಿರೀಕ್ಷಿಸದ ಸುವರ್ಣ ಅವಕಾಶವು ಇವರಿಗೆ ಲಭಿಸಿತು. ಸಿಕ್ಕ ಅವಕಾಶ ಸದುಪಯೋಗದ ಫಲ ಮೊದಲ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದ ಮೇಯರ್ ಮುತ್ತಣ್ಣ ಚಿತ್ರವು  ಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡು ಶತದಿನೋತ್ಸವವನ್ನು ಆಚರಿಸಿತು.

ಮೊದಲ ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿದ್ದ ಇವರು ನಂತರ ನಿರ್ದೇಶಿಸಿದ ೧೯೭೦ ರಲ್ಲಿ ತೆರೆ ಕಂಡ ಡಾ.ರಾಜಕುಮಾರ್ ದ್ವೀಪಾತ್ರದಲ್ಲಿ ನಟಿಸಿದ ಸಾಂಸಾರಿಕ ಮತ್ತು ಪತ್ತೆದಾರಿ ಕಥೆಯನ್ನು ಹೊಂದಿದ್ದ ಚಿತ್ರ ಬಾಳು ಬೆಳಗಿತು, ೧೯೭೧ ರಲ್ಲಿ ಡಾ.ರಾಜಕುಮಾರ್ ನಟಿಸಿದ ಸಾಂಸಾರಿಕ ಕಥೆಯನ್ನು ಹೊಂದಿದ್ದ ನಮ್ಮ ಸಂಸಾರ,ಇದೇ ವರ್ಷ ತೆರೆ ಕಂಡ ಡಾ.ರಾಜಕುಮಾರ್ ನಟನೆಯ  ನ್ಯಾಯವೇ ದೇವರು ಚಿತ್ರವು ಕೂಡ ಯಶಸ್ಸನ್ನು ಪಡೆದಿದ್ದವು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply