ಕನ್ನಡ ಚಿತ್ರರಂಗದ ಸೃಜನ ಶೀಲ ಹಿರಿಯ ನಟ ಸಿ.ಆರ್.ಸಿಂಹ

ಸಿ.ಆರ್.ಸಿಂಹ ಕನ್ನಡ ಚಿತ್ರರಂಗದ ಅಪರೂಪದ ಹಿರಿಯ ನಟರಾಗಿದ್ದರೂ ಮೂಲತಃ ತಮ್ಮ ಬಣ್ಣದ ಬದುಕನ್ನು ರಂಗ ಭೂಮಿಯ ಮುಖಾಂತರವೇ ಆರಂಭಿಸಿದ್ದರು. ಇನ್ನೊಂದು ರೀತಿ ಹೇಳುವುದಾದರೆ ಈ ಸೃಜನ ಶೀಲ ನಟನಿಗೆ ಪ್ರತಿಭೆಗಳ ಬರವೇನು? ಇರಲಿಲ್ಲ.

ಇಂದಿನ  ಪರಿಸ್ಥಿತಿಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಕೆಲಸವನ್ನು ಮಾಡಲು ಹರಸಾಹಸ ಪಡುತ್ತಿದ್ದಾರೆ. ಅಂತಹುದರಲ್ಲಿ ಇವರು ರಂಗ ಭೂಮಿ, ಚಿತ್ರರಂಗ ಮತ್ತು ದೂರದರ್ಶನ ಮೂರು ಕ್ಷೇತ್ರಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದಲ್ಲದೆ ಹಲವು ನಾಟಕಗಳಿಗೆ, ಚಲನಚಿತ್ರಗಳಿಗೆ ನಿರ್ದೇಶನವನ್ನು ಮಾಡಿದ್ದರು. ರಾಘವೇಂದ್ರ ರಾಜಕುಮಾರ್ ಅಭಿನಯದ ಟುವ್ವಿ, ಟುವ್ವಿ, ಟುವ್ವಿ ಹಾಸ್ಯ ಪ್ರಧಾನ ಚಿತ್ರದಲ್ಲಿ ಇವರ ಶಿಪ್ ಕ್ಯಾಪ್ಟನ್ ಪಾತ್ರವನ್ನಾಗಲಿ,ಆಹಾ ಚಿತ್ರದಲ್ಲಿ ಇವರ ಮತ್ತು ದೊಡ್ಡಣ್ಣ ಜೋಡಿಯ ಹಾಸ್ಯವನ್ನಾಗಲಿ ಮರೆಯಲು ಸಾಧ್ಯವೇ?

ಎಂತಹ ಪಾತ್ರವನ್ನಾದರೂ ಲೀಲಾಜಾಲವಾಗಿ ನಟಿಸುವ ಸಾಮರ್ಥ್ಯವನ್ನು ಹೊಂದಿದ್ದ ಇವರನ್ನು ಕನ್ನಡದ ಒಂದು ಆಸ್ತಿ ಎಂದು ಹೇಳಿದರೆ ತಪ್ಪಾಗಲಾರದು.

      ಜೂನ್ ೧೬, ೧೯೪೨ ರಂದು ಚನ್ನಪಟ್ಟಣದಲ್ಲಿ ರಾಮಸ್ವಾಮಿ ಶಾಸ್ತ್ರಿ ಮತ್ತು ಲಲಿತಮ್ಮ ದಂಪತಿಯ ಮಗನಾಗಿ ಜನಿಸಿದ ಇವರು ಅತೀ ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿಯನ್ನು ಪ್ರವೇಶಿಸಿದ್ದರು. ಇವರು ಕನ್ನಡ ಚಿತ್ರರಂಗದ ಹಿರಿಯ ಜನಪ್ರಿಯ ನಟ ಶ್ರೀನಾಥ್ ಸಹೋದರ ಕೂಡ. ಚಿಕ್ಕಂದಿನಿಂದಲೂ ರಂಗ ಭೂಮಿಯಲ್ಲಿ  ಅಪಾರ ಆಸಕ್ತಿಯನ್ನು ಹೊಂದಿದ್ದ ಇವರು ದಿ.ಜೂರಿ ಸ್ಟೋರಿ,ಸೂರ್ಯ ಶಿಕಾರಿ ಮತ್ತು ತುಘಲಕ್ ಸೇರಿ ಅನೇಕ ನಾಟಕಗಳಲ್ಲಿ ನಟಿಸಿದ್ದರು. ಅದರಲ್ಲೂ ನಾಟಕ ಪ್ರೇಮಿಗಳ ಮನಸ್ಸನ್ನು ಸೆಳೆದ ಪಾತ್ರವೆಂದರೆ ತುಘಲಕ್ ನಾಟಕದಲ್ಲಿ ಇವರು ನಿರ್ವಹಿಸಿದ ತುಘಲಕ್ ಪಾತ್ರ.

ಈ ನಾಟಕದಲ್ಲಿ ತುಘಲಕ್ ಪಾತ್ರ ಮಾಡಿದ ಮೋಡಿ ಅಂತಿಂಥದ್ದಲ್ಲ. ಅಪಾರ ಜನಪ್ರಿಯತೆ ಪಡೆದ ಪಾತ್ರವೂ ಆಗಿತ್ತು. ಮುಖ್ಯವಾದ ವಿಷಯವೇನೆಂದರೆ ಈ ನಾಟಕದ ನಿರ್ದೇಶನವನ್ನು ಇವರೇ ಮಾಡಿದ್ದರು. ಇದಲ್ಲದೇ ಕಾಕನಕೋಟೆ, ಸಂಕ್ರಾಂತಿ, ಮಿಡ್ ಸಮ್ಮರ್ ನೈಟ್ ಡ್ರೀಮ್ ಮತ್ತು ಬ್ರೆಕ್ಟನ್ ದಿ.ಕಕೇಷಿಯನ್ ಚಾರ್ ಸರ್ಕಲ್ ನಾಟಕಗಳನ್ನು ನಿರ್ದೇಶಿಸಿದ್ದರು. ೧೯೭೨ ರಲ್ಲಿ ಮೊದಲ ಬಾರಿಗೆ ನಟರಂಗ ಎಂಬ ಕಲಾ ತಂಡವನ್ನು ಮತ್ತು ೧೯೮೩ ರಲ್ಲಿ ವೇದಿಕೆ ಎಂಬ ತಂಡವನ್ನು ಕಟ್ಟಿದ್ದರು. ಇವರ ಖ್ಯಾತಿ ಕೇವಲ ನಾಟಕ ರಂಗಕ್ಕೆ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿಯು ವ್ಯಾಪಿಸಿತ್ತು.

ಸಂಸ್ಕಾರ ಎಂಬ ಕನ್ನಡ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ಇಂದಿನ ರಾಮಾಯಣ,ನೀ ಬರೆದ ಕಾದಂಬರಿ, ಕರ್ನಾಟಕ ಸುಪುತ್ರ, ಪರಮೇಶಿ ಪ್ರೇಮ ಪ್ರಸಂಗ,ರಾಯರು ಬಂದರು ಮಾವನ ಮನೆಗೆ, ನೀ ತಂದೆ ಕಾಣಿಕೆ, ಪ್ರೇಮ ಪ್ರಸಂಗ, ನಮ್ಮೂರ ಹಮ್ಮೀರ,  ರಾಮಾಪುರದ ರಾವಣ,ಕುಬೇರ, ಗಂಡುಗಲಿ ಕುಮಾರರಾಮ, ಜಾಕಿಚಾನ್,ಆಹಾ, ಟುವ್ವಿ, ಟುವ್ವಿ, ಟುವ್ವಿ, ಜೀವನ ಚಕ್ರ, ಭೂಮಿಗೆ ಬಂದ ಭಗವಂತ,ಅಜಿತ್,ಕನ್ನೇಶ್ವರ ರಾಮ, ಸೇರಿ ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ  ವಿವಿಧ ಪಾತ್ರಗಳಲ್ಲಿ ನಟಿಸಿದ್ದರು.

ಕನಸಿನ ರಾಣಿ ಮಾಲಾಶ್ರೀ ಅಭಿನಯದ ಸಾಹಸ ಪ್ರಧಾನ ವೀರ ಚಿತ್ರ ಇವರು ನಟಿಸಿದ ಕೊನೆಯ ಚಿತ್ರವಾಗಿದ್ದು ಇದರಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟಲ್ಲದೆ ಕಿರುತೆರೆಯಲ್ಲಿಯು ತಮ್ಮ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಇವರು ಕರಾಟೆ ಕಿಂಗ್ ನಟ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.ಇಂತಹ ಪ್ರತಿಭೆಗಳ ಗೂಡನ್ನು ಹೊಂದಿದ್ದ ಇವರನ್ನು  ನೋಡಿ ವಿಧಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆದರೆ  ಇವರನ್ನು ಕಾಡಿದ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿರಲಿಲ್ಲ.

ಬಹಳ ವರ್ಷಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಸೇವಾ ಕ್ಷೇತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ  ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರುವರಿ ೨೮,೨೦೧೪ ರಂದು ತಮ್ಮ ೭೧ ನೇ ವಯಸ್ಸಿನಲ್ಲಿ ನಿಧನರಾದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply