ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ

sadashiva brahmavar

    ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರೀಯರಾಗಿದ್ದ ನಟ ಸದಾಶಿವ ಬ್ರಹ್ಮಾವರ  ತಂದೆ, ಮೇಷ್ಟ್ರು ಪಾತ್ರಗಳ ಮೂಲಕವೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದರು. ಇನ್ನೊಂದು ಆಸಕ್ತಿಕರ ಅಂಶವೆಂದರೆ ನಟ ಕೆ.ಎಸ್.ಅಶ್ವಥ್ ನಂತರ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರಲ್ಲದೇ ಕನ್ನಡ ಚಿತ್ರರಂಗದ ಖಾಯಂ ಪೋಷಕ ನಟ ಕೂಡ ಆಗಿದ್ದರು.
    ಕ್ರಿ.ಶ.1929 ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಇವರು ಬೈಲಹೊಂಗಲದ ಪರಿಸರದಲ್ಲಿದ್ದರೂ ಉಡುಪಿಯಲ್ಲಿ ಬೆಳೆದರು. ಇವರಿಗೆ ಚಿಕ್ಕವಯಸ್ಸಿನಿಂದಲೂ ನಾಟಕಗಳೆಂದರೆ ತುಂಬ ಇಷ್ಟ, ಅದರಲ್ಲೂ ನಟನೆಯಲ್ಲಿ  ಆಸಕ್ತಿಯನ್ನು ಹೊಂದಿದ್ದರೂ ಕಾರಣಾಂತರಗಳಿಂದ ನಟಿಸಲು ಅವಕಾಶ ಸಿಗಲಿಲ್ಲ. ಆದರೆ ಎಷ್ಟು ಪ್ರಯತ್ನಿಸಿದರೂ ರಂಗಭೂಮಿಯನ್ನು ಮರೆಯಲು ಸಾಧ್ಯವಾಗಲಿಲ್ಲ. ಬದಲಾಗಿ ಸೆಳೆತ ಇನ್ನೂ ಹೆಚ್ಚು ಆಯಿತು. ರಂಗ ಭೂಮಿಯ ಸೆಳೆತ ಇವರ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ನಾಟಕಗಳಲ್ಲಿ ನಟಿಸಲು ಮನೆಯನ್ನು ಬಿಟ್ಟು ಬಂದರಲ್ಲದೇ ಹುಲಿಮನೆ ಸೀತಾರಾಮ ಶಾಸ್ತ್ರಿ ಮಾಲೀಕತ್ವದ ಜಯ ಕರ್ನಾಟಕ ನಾಟಕ ಸಂಘ ಕಂಪನಿಯ ನಾಟಕದಲ್ಲಿ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸುವ ಮೂಲಕ ರಂಗಭೂಮಿಯನ್ನು ಪ್ರವೇಶಿಸಿ ನಂತರ ಹಲವಾರು ಜನಪ್ರಿಯ ನಾಟಕಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿ ಅಪಾರ ಜನಪ್ರಿಯತೆಯನ್ನು ಪಡೆದಿದ್ದರು.
     1997 ರಲ್ಲಿ ತೆರೆ ಕಂಡ ಕರಾವಳಿ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ಇವರು ನಂತರ 1981 ರಲ್ಲಿ ತೆರೆ ಕಂಡ ನಟ ರೆಬೆಲ್ ಸ್ಟಾರ್ ಅಂಬರೀಷ್, ಅಶೋಕ್ ಮತ್ತು ನಟಿ ಆರತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ರಂಗನಾಯಕಿ ಎಂಬ ಎವರ್ ಗ್ರೀನ್ ಕ್ಲಾಸಿಕಲ್ ಚಿತ್ರದಲ್ಲಿ ಆರತಿ ಮನೆಯ ವಾಚ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಡಾ. ರಾಜಕುಮಾರ್ ನಟಿಸಿದ ಬ್ಲಾಕ್ ಬಸ್ಟರ್ ಧ್ರುವತಾರೆ ಚಿತ್ರದಲ್ಲಿ ಪುನಃ ವಾಚ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದರು. ಈ ಚಿತ್ರದ ಯಶಸ್ಸಿನ  ಪರಿಣಾಮ ಇವರಿಗೆ  ಪೋಷಕ ಪಾತ್ರಗಳಿಗೆ ಬಡ್ತಿ ಪಡೆಯಲು ಕಾರಣವಾಯಿತು. ಡಾ.ರಾಜಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಚಿತ್ರಗಳಾದ ಧ್ರುವತಾರೆಯಲ್ಲಿ ರಂಗಣ್ಣ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡರೆ ಗುರಿ ಚಿತ್ರದಲ್ಲಿ ಊರಿಗೆ ಊರೇ ಗೌರವಿಸುವ ನಿವೃತ್ತ  ಸ್ಕೂಲ್ ಮಾಸ್ಟರ್ ಪಾತ್ರ, ಈ ಚಿತ್ರದಲ್ಲಿ ಒಂದು ದೃಶ್ಯವಿದ್ದು ಈ ಚಿತ್ರವನ್ನು ನೋಡಿದವರಿಗೆ ಗೊತ್ತೇ ಇರುತ್ತದೆ. ಒಂದು ದೃಶ್ಯದಲ್ಲಿ ರಸ್ತೆಯಲ್ಲಿ ಈ ಮಾಸ್ಟರ್ ನಡೆದುಕೊಂಡು ಬರುತ್ತಿದ್ದ ಸಮಯದಲ್ಲಿ ವಾಹನಗಳ ಸಂಚಾರ ಜೋರಾಗಿರುತ್ತದೆ, ಅಲ್ಲದೇ ಇವರಿಗೆ ರಸ್ತೆ ದಾಟಲು ಕೂಡ ತೊಂದರೆಯಾಗುತ್ತಿರುತ್ತದೆ.

ಇದನ್ನು ಗಮನಿಸಿದ ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸ್ ಇವರ ವಿದ್ಯಾರ್ಥಿ ಕೂಡ. ಇವರು ಬರುತ್ತಿರುವುದನ್ನು ನೋಡಿ ರಸ್ತೆಯ ಮೇಲೆ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ತನ್ನ ಗುರುಗಳು ರಸ್ತೆಯನ್ನು ದಾಟಲು ಸಹಾಯ ಮಾಡುವುದನ್ನು ಈ ದೃಶ್ಯವು  ಒಬ್ಬ ವಿದ್ಯಾರ್ಥಿ ತನ್ನ ಗುರುವಿಗೆ ಕೊಡುವ ಗೌರವವನ್ನು ಎತ್ತಿ ತೋರಿಸುತ್ತದೆ. ಮೇಲಾಗಿ ಚಲನಚಿತ್ರಗಳಲ್ಲಿ ಇಂತಹ ದೃಶ್ಯಗಳು ಕಾಣಿಸುವುದು ತುಂಬ ಅಪರೂಪ ಕೂಡ. ಅದರಲ್ಲೂ ಈ ಚಿತ್ರದಲ್ಲಿ ಇವರು ನಾಯಕನ ತಂದೆಯ ಪಾತ್ರವನ್ನು ನಿರ್ವಹಿಸಿದ್ದರಲ್ಲದೇ ಡಾ.ರಾಜ್ ಕುಮಾರ್ ಅವರ ಬ್ಯಾನರ್ ಚಿತ್ರಗಳಿಗೆ ಖಾಯಂ ಪೋಷಕ ನಟರಾಗಿದ್ದರು. ಮುಖ್ಯವಾಗಿ ಸದ್ಗುಣ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲಕಲಾವಿದರಾಗಿ ನಟಿಸಿದ್ದ ಬೆಟ್ಟದ ಹೂವು, ನಾಯಕ ನಟ ಜಗ್ಗೇಶ್ ನಟನೆಯ ಇಂದ್ರನ ಗೆದ್ದ ನರೇಂದ್ರ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರ, ದೇವರಾಜ್ ನಾಯಕ ನಟನಾಗಿ ನಟಿಸಿದ್ದ ಗ್ರಹ ಪ್ರವೇಶ ಚಿತ್ರದಲ್ಲಿ ನಾಯಕನ ಮಾವನ ಪಾತ್ರ, ಡಾ.ರಾಜಕುಮಾರ್ ನಟಿಸಿದ್ದ ಶ್ರುತಿ ಸೇರಿದಾಗ, ಅನುರಾಗ ಅರಳಿತು,ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದ ಸಕಲಕಲಾ ವಲ್ಲಭ ಚಿತ್ರದಲ್ಲಿ ಮನೆಯ ಹಿರಿಯ ವ್ಯಕ್ತಿ ಪಾತ್ರ, ಕನಸಿನ ರಾಣಿ ಮಾಲಾಶ್ರೀ ದ್ವೀ ಪಾತ್ರದಲ್ಲಿ ನಟಿಸಿದ್ದ ರಾಣಿ ಮಹಾರಾಣಿ ಚಿತ್ರದಲ್ಲಿ ಮನೆಯ ಆಳಿನ ಪಾತ್ರವನ್ನು ನಿರ್ವಹಿಸಿದ್ದರೆ ಸಮಯದ ಗೊಂಬೆ ಚಿತ್ರದಲ್ಲಿ ಹೋಟೆಲ್ ಅಡುಗೆ ಭಟ್ಟ ನ ಪಾತ್ರ, ವೈಜನಾಥ್ ಬಿರಾದಾರ ನಟಿಸಿದ್ದ ಕನಸೆಂಬ ಕುದುರೆಯೇರಿ ಚಿತ್ರದಲ್ಲಿ ಇವರು ನಿರ್ವಹಿಸಿದ್ದ ಪ್ರಮುಖ ಪಾತ್ರವನ್ನು ಯಾರಾದರೂ ಮರೆಯಲು ಸಾಧ್ಯವೇ? ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟಿಸಿದ್ದ ಬ್ಲಾಕ್ ಬಸ್ಟರ್ ಹಾಲುಂಡ ತವರು ಚಿತ್ರದಲ್ಲಿ ಇವರು ನಿರ್ವಹಿಸಿದ್ದ ದೇವಸ್ಥಾನದ ಅರ್ಚಕನ ಪಾತ್ರ, ಚಿಕ್ಕದಾಗಿದ್ದರೂ ಬಹಳ ಜನಪ್ರಿಯತೆಯನ್ನು ಪಡೆದಿತ್ತು.  ಕೇವಲ ಸದ್ಗುಣ ಪಾತ್ರಗಳನ್ನು ಮಾತ್ರವಲ್ಲದೇ ಗರುಡ ಧ್ವಜ ಮತ್ತು ನಿಗೂಢ ರಹಸ್ಯ ಚಿತ್ರದಲ್ಲಿ  ಖಳನ ಪಾತ್ರವನ್ನು ನಿರ್ವಹಿಸಿದ್ದನ್ನು ನೋಡಿ ಚಿತ್ರ ಪ್ರೇಮಿಗಳು, ಅಭಿಮಾನಿಗಳು ಕೂಡ ಆಶ್ಚರ್ಯಪಟ್ಟಿದ್ದರು. ಕರುನಾಡ ಚಕ್ರವರ್ತಿ ನಟ ಡಾ.ಶಿವರಾಜಕುಮಾರ್ ನಟಿಸಿದ್ದ ಪುರುಷೋತ್ತಮ ಚಿತ್ರದಲ್ಲಿ ನಟಿಸಿದ್ದ ಇವರು ರೆಬೆಲ್ ಸ್ಟಾರ್ ಡಾ.ಅಂಬರೀಷ್, ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸಪ್ತ ಭಾಷಾ ನಟ ಅನಂತನಾಗ್ ಸೇರಿ ಅನೇಕ ಕಲಾವಿದರ ಚಿತ್ರಗಳಲ್ಲಿ ನಟಿಸಿದ್ದರಲ್ಲದೇ 2005 ನೇ ಇಸ್ವಿಯವರೆಗೂ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದರು.ಈ ರೀತಿಯಾಗಿ ಹೇಳುತ್ತ ಹೋದರೆ ಇವರ ಪಾತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾವುದೇ ಪಾತ್ರವಾದರೂ ಸರಿ ಸಮರ್ಥವಾಗಿ ನಿರ್ವಹಿಸಿದ್ದರಲ್ಲದೇ ಆ ಪಾತ್ರಕ್ಕೆ ಸೂಕ್ತ ನ್ಯಾಯವನ್ನು ಒದಗಿಸುತ್ತಿದ್ದ ಇವರು ಡಾ.ಶಿವರಾಜಕುಮಾರ್ ನಟಿಸಿದ್ದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಅತಿಯಾದ ವಯಸ್ಸಿನ ಕಾರಣದಿಂದ ಕೆಲವು ವರ್ಷಗಳಿಂದ ಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು.  ತಮ್ಮ ಖಾಸಗಿ ಜೀವನದಲ್ಲಿ ಕೂಡ ಸ್ವಾಭಿಮಾನಿಯಾಗಿದ್ದ ಇವರು ಎಂದಿಗೂ ಯಾರ ಬಳಿಯೂ ಸಹಾಯವನ್ನು ಕೇಳಲಿಲ್ಲ, ಏನೇ ಕಷ್ಟ ಬಂದರೂ ಸಹನೆಯಿಂದ ಎದುರಿಸುತ್ತಿದ್ದರಲ್ಲದೆ ಮಹಾನ್ ದೈವ ಭಕ್ತ ಕೂಡ ಆಗಿದ್ದರು. ತಮ್ಮ ಮೂವತ್ತು ವರ್ಷಗಳಿಗೂ ಅಧಿಕ ಕಾಲದ ಬಣ್ಣದ ಬದುಕಿನಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಇವರು ಸೆಪ್ಟೆಂಬರ್ 20, 2018 ರಂದು ತಮ್ಮ 90 ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣವನ್ನು ಹೊಂದಿದರು.
  ಈ ರೀತಿಯಾಗಿ  ಮತ್ತೋರ್ವ ಪ್ರಮುಖ ನಟನ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿತು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply