ಕನ್ನಡ ಚಿತ್ರರಂಗದ

ಸುಮಾರು ಎಂಬತ್ತು ವರ್ಷಗಳಿಗೂ ಅಧಿಕ ಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗ ಮೂಲತಃ ರಂಗಭೂಮಿಯನ್ನು ಅವಲಂಬಿಸುವುದರ ಮೂಲಕ ತನ್ನ ಕೆಲಸವನ್ನು ಪ್ರಾರಂಭಿಸಿತು. ನಮ್ಮ ಈ ಕನ್ನಡ ಚಿತ್ರರಂಗದ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಮಾಹಿತಿಯ ಸಂಗ್ರಹಣೆ ಮತ್ತು ಅಧ್ಯಯನದ ಆಧಾರದ ಮೇಲೆ ಈ ಲೇಖನವನ್ನು ರಚಿಸಿದ್ದೇನೆ. ಅಲ್ಲದೇ ಇದು ನನ್ನ ರಚನೆಯ ೧೦೦ ನೇಯ ಲೇಖನ ಕೂಡ ಆಗಿದೆ.    

ಆಳೆತ್ತರದ ಜೀವಂತ ಚಿತ್ರಗಳ ಪ್ರದರ್ಶನ, ಸಿನಿಮಾಟೋಗ್ರಫಿಯ ಆರು ಕಿರುಚಿತ್ರಗಳು ಇವುಗಳೆಲ್ಲದರ ಸಂಗಮ ೧೮೯೬ ಜುಲೈ ೭ ರಂದು ಮುಂಬಯಿನ ವಾಟ್ಸನ್ ಹೋಟೇಲ್ ನಲ್ಲಿ ಒಂದು ಸುಂದರ ಪ್ರದರ್ಶನ ನಡೆಯಿತು. ಅಲ್ಲದೇ ಈ ಪ್ರದರ್ಶನವು ಮನೋರಂಜನೆಯ ಹೊಸ ಮಾಧ್ಯಮದ ಅನಾವರಣಕ್ಕೆ ಕಾರಣವೂ ಆಯಿತು. ನಮ್ಮ ದೇಶದಲ್ಲಿ ಮೂಕಿ ಚಿತ್ರಗಳ ಪ್ರದರ್ಶನ ಆರಂಭಗೊಂಡ ಒಂಬತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಸ್ಥಳೀಯ ಉದ್ಯಮಿಗಳು ಸೇರಿ ೧೯೦೫ ರಲ್ಲಿ ಪ್ಯಾರಾ ಮೌಂಟ್ ಎಂಬ ಚಿತ್ರ ಮಂದಿರವನ್ನು ಕಟ್ಟಿಸಿದ್ದರು.

ಈ ಚಿತ್ರಮಂದಿರವು ಚಿತ್ರರಂಗದ ಜೊತೆ ಬೆಸೆದ ಮೊದಲ ಬಾಂಧವ್ಯ ಕೂಡ ಆಗಿದ್ದು ಸುಮಾರು ೭೦ ವರ್ಷಗಳ ಕಾಲ ಕಾರ್ಯವನ್ನು ನಿರ್ವಹಿಸಿತ್ತು. ಅಲ್ಲದೇ ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಚಿತ್ರವು ಕೂಡ ಈ ಚಿತ್ರಮಂದಿರದಲ್ಲಿ ತೆರೆ ಕಂಡಿತ್ತು. ಹಲವಾರು ನಾಟಕಗಳನ್ನು ಪ್ರದರ್ಶಿಸಿ ರಂಗ ಪ್ರೇಮಿಗಳ ಮನಸ್ಸನ್ನು ಗೆದ್ದಿರುವ ಗುಬ್ಬಿ ನಾಟಕ ಮಂಡಳಿಯ ಮಾಲೀಕರಾದ ಜಿ.ಎಚ್.ವೀರಣ್ಣನವರು ಪ್ರಯೋಗಗಳನ್ನು ಮಾಡುವುದರಲ್ಲಿ ನಿಸ್ಸೀಮರು ಆಗಿದ್ದರು. ಆ ಸಮಯದಲ್ಲಿ ಸಿನಿಮಾಗಳು ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದವು.

ಈ ಸಿನಿಮಾದ ಜನಪ್ರಿಯತೆಯನ್ನು ಕಂಡ ಜಿ.ಎಚ್.ವೀರಣ್ಣ ತಾವು ನಟಿಸುತ್ತಿದ್ದ ಭಕ್ತಿ ಕಬೀರ್ ನಾಟಕವನ್ನು ಚಿತ್ರವನ್ನಾಗಿ ಮಾಡುವ ಒಂದು ಹೊಸ ವಿನೂತನ ಪ್ರಯೋಗಕ್ಕೆ ಮುಂದಾದರು. ಹಾಗೂ ನಾಟಕದಲ್ಲಿ ನಟಿಸುತ್ತಿದ್ದ ನಟರೇ ಚಿತ್ರದಲ್ಲಿ ನಟಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಳಗಿನ ಸಮಯದಲ್ಲಿ ಹೊರಾಂಗಣದಲ್ಲಿ ಚಿತ್ರದ ಚಿತ್ರೀಕರಣ, ಸಂಜೆ ಸಮಯ ಥಿಯೇಟರಿನಲ್ಲಿ ನಾಟಕ. ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು. ದುರದೃಷ್ಟವಶಾತ್ ಜೋರಾದ ಮಳೆಯ ಪರಿಣಾಮ ರಂಗ ಮಂದಿರವೇ ಕೊಚ್ಚಿ ಹೋಗಿತ್ತು. ಚಿತ್ರೀಕರಣಗೊಂಡ ಫಿಲಂ  ನೀರು ಪಾಲಾಗಿತ್ತಲ್ಲದೆ ಚಿತ್ರೀಕರಣದ ಪ್ರಯತ್ನ ಕೂಡ ವಿಫಲಗೊಂಡಿತ್ತು. 

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply