1950 ರ ದಶಕದಲ್ಲಿ ರಂಗಭೂಮಿ ಕಂಡ ಅಪ್ರತಿಮ ಕಲಾವಿದ, ಗಾಯಕ,ನಟ ಹೊನ್ನಪ್ಪ ಭಾಗವತರು ರಂಗಭೂಮಿಗೆ ಒಂದು ವಿಶೇಷ ಮೆರುಗನ್ನು ತಂದವರು, ಅಲ್ಲದೇ ಕಠಿಣ ಪರಿಶ್ರಮದ ಮೂಲಕ ಚಿತ್ರರಂಗದಲ್ಲಿ ನಾಯಕನಾಗಿ, ನಿರ್ಮಾಪಕನಾಗಿ ಮತ್ತು ನಿರ್ದೇಶಕರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಅದರಲ್ಲೂ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ನಟಿ ಬಿ.ಸರೋಜಾದೇವಿಯವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಇವರ ಕುರಿತು ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಮಾಹಿತಿಗಳ ಸಂಗ್ರಹಣೆ ಮತ್ತು ಅಧ್ಯಯನ ಆಧಾರದ ಮೇಲೆ ಈ ಲೇಖನವನ್ನು ರಚಿಸಿದ್ದೇನೆ.
ಇವರು 1915 ನೇ ಇಸ್ವಿ, ಜನೆವರಿ 14 ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಎಂಬ ಕುಗ್ರಾಮದಲ್ಲಿ ಚಿಕ್ಕ ಲಿಂಗಪ್ಪ ಮತ್ತು ಕಲ್ಲಮ್ಮ ದಂಪತಿಯ ಮಗನಾಗಿ ಜನಿಸಿದರು. ಇವರು ಜನಿಸಿದ ಸಮಯದಲ್ಲಿ ಇವರ ಕುಟುಂಬವು ಕಡು ಬಡತನವನ್ನು ಎದುರಿಸುತ್ತಿತ್ತು. ನೇಯ್ಗೆ ಇವರ ಮನೆತನದ ವಂಶ ಪಾರಂಪರಿಕ ವೃತ್ತಿಯಾಗಿದ್ದರಿಂದ ಇದರಲ್ಲಿ ಜೀವನವು ಸಾಗುತ್ತಿತ್ತು. ಆರಾಧ್ಯ ದೈವ ಹೊನ್ನಾ ದೇವಿಯ ನೆನಪಿಗಾಗಿ ಇವರ ಪಾಲಕರು ಇವರಿಗೆ ಹೊನ್ನಪ್ಪ ಎಂದು ನಾಮಕರಣ ಮಾಡಿದರು. ಆದರೆ ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಗ್ರಾಮದಲ್ಲಿ ಆವರಿಸಿದ ಪ್ಲೇಗ್ ಎಂಬ ಮಾರಿಗೆ ಇವರ ತಂದೆಯು ಬಲಿಯಾದರು. ಕೇವಲ ಐದನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಇವರಿಗೆ ತಾಯಿಯೇ ಎಲ್ಲವೂ ಆಗಿದ್ದರು,ಮನೆಯ ಆರ್ಥಿಕ ಸ್ಥಿತಿಯು ತೀರ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾರಣ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಇವರ ತಾಯಿ ಹೇಳುತ್ತಿದ್ದ ಭಜನೆ, ಸಂಗೀತವನ್ನು ಕೇಳುವುದೆಂದರೆ ಇವರಿಗೆ ಆಗುತ್ತಿದ್ದ ಸಂತಸ ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಲ್ಲಿ ಹಾಡುವುದನ್ನು ಕಲಿತಿದ್ದರಲ್ಲದೇ ಭಜನಾ ಮಂಡಳಿಗಳಲ್ಲಿ, ಮಂದಿರಗಳಲ್ಲಿ ತಪ್ಪದೇ ಹಾಡುತ್ತಿದ್ದರು. ಅಲ್ಲದೇ ತಮ್ಮ ಹಾಡುಗಳ ಮೂಲಕವೇ ಜನಪ್ರಿಯತೆಯನ್ನು ಪಡೆದಿದ್ದರು. ಹಳ್ಳಿಗಳಲ್ಲಿ ಕಾಮನ ಹಬ್ಬದ ಸಮಯದಲ್ಲಿ ಹುಲಿವೇಷ, ಇನ್ನಿತರ ವೇಷವನ್ನು ಹಾಕುತ್ತ ಕುಣಿಯುತ್ತ ಯಕ್ಷಗಾನ, ಬಯಲಾಟಗಳಲ್ಲಿ ಪಾತ್ರಧಾರಿಗಳಾಗಿದ್ದ ಇವರಿಗೆ ನಾಟಕ ಮಧ್ಯದಲ್ಲಿ ಹಾಡುವುದಕ್ಕೆ ಅವಕಾಶ ಸಿಗುತ್ತಿದ್ದದ್ದು ಕೂಡ ಒಂದು ರೀತಿಯಲ್ಲಿ ರಂಗ ಭೂಮಿ ಪ್ರವೇಶಕ್ಕೆ ಕಾರಣವೂ ಆಯಿತು.

ಆದರೆ ಇದುವರೆಗೂ ಹೊನ್ನಪ್ಪ ಎಂದೇ ಗುರ್ತಿಸಲ್ಪಡುತ್ತಿದ್ದ ಇವರಿಗೆ ಭಾಗವತರ್ ಎಂಬ ಬಿರುದು ಹೇಗೆ ಬಂದಿತು? ಎಂದು ತಿಳಿಯಲು ಒಂದು ಚಿಕ್ಕ ಮಾಹಿತಿ ನಿಮಗಾಗಿ,
ಹೀಗೆಯೇ ಒಂದು ದಿನ ಸೇಲಂನಲ್ಲಿ ಇವರ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿತ್ತು. ಅದೇ ಸಮಯದಲ್ಲಿ ಸೇಲಂನ ಶಂಕರ್ ಫಿಲಂಸ್ ನವಿರು ಚಲನಚಿತ್ರ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದರು. ಆಗ ಎಂ.ಕೆ.ತ್ಯಾಗರಾಜ ಭಾಗವತರ್ ನಾಯಕ ನಟರಾಗಿ ನಟಿಸುತ್ತಿದ್ದ ತಮ್ಮ ಅಂಬಿಕಾ ಪತಿ ಎಂಬ ತಮಿಳು ಚಿತ್ರಕ್ಕೆ ನಾಯಕನ ಗೆಳೆಯನ ಪಾತ್ರಕ್ಕೆ ಸೂಕ್ತ ಕಲಾವಿದನನ್ನು ಹುಡುಕುತ್ತಿದ್ದರು. ಒಂದು ಸಂದರ್ಭದಲ್ಲಿ ಹೊನ್ನಪ್ಪನವರನ್ನು ಕಂಡ ನಂತರ ಈ ಪಾತ್ರಕ್ಕೆ ಇವರೇ ಸೂಕ್ತ ಎಂದು ನಿರ್ಧರಿಸಿ ತಮ್ಮ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕೊಟ್ಟಿದ್ದರು. ನಂತರ ಸೇಲಂ ನಲ್ಲಿ ಅದ್ಭುತ ಸಂಗೀತ ಕಛೇರಿಯನ್ನು ಮಾಡಿದ್ದ ಇವರಿಗೆ ಎಲ್ಲರ ಕಡೆಯಿಂದ ಮೆಚ್ಚುಗೆಯ ಸುರಿಮಳೆಯೇ ಉಂಟಾಯಿತು. ಅಲ್ಲದೇ ಇವರನ್ನು ಸನ್ಮಾನಿಸಿ ಇವರ ಹೆಸರಿನ ಮುಂದೆ ಭಾಗವತರ್ ಎಂಬ ಬಿರುದನ್ನು ನೀಡಿ ಗೌರವಿಸಿದರು. ನಂತರವೇ ಇವರು ಅಂಬಿಕಾ ಪತಿಯ ಹೊನ್ನಪ್ಪ ಭಾಗವತರ್ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದರು.