ಏಣಗಿ ಬಾಳಪ್ಪ ಕನ್ನಡ ವೃತ್ತಿ ರಂಗಭೂಮಿ ಕಂಡ ಅವಿಸ್ಮರಣೀಯ ರಂಗ ಭೂಮಿ ಕಲಾವಿದರಾಗಿದ್ದು ಪ್ರಯೋಗಗಳ ಹರಿಕಾರರು ಕೂಡ ಅಲ್ಲದೇ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ನಡುವೆ ಇದ್ದ ವ್ಯತ್ಯಾಸವನ್ನು ಹೋಗಲಾಡಿಸಿ ವೃತ್ತಿ ರಂಗಭೂಮಿಯನ್ನು ಬೆಳಕಿಗೆ ತಂದ ಮಹಾನುಭಾವರು ಆಗಿದ್ದರು.
೧೯೧೪ ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಒಕ್ಕಲುತನ ಕುಟುಂಬದಲ್ಲಿ ಲೋಕೋರ ಮನೆತನದ ಕರಿಸಿದ್ಧಪ್ಪ ಮತ್ತು ಬಾಳಪ್ಪ ದಂಪತಿಯ ಮಗನಾಗಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಹಣದ ಸಮಸ್ಯೆಯಿಂದ ಶಿಕ್ಷಣವನ್ನು ಸರಿಯಾಗಿ ಪಡೆಯಲು ಸಾಧ್ಯವಾಗದ ಕಾರಣ ಬೇಸಾಯ ಮತ್ತು ಪಶು ಪಾಲನೆ ಕೆಲಸವನ್ನು ಮಾಡಲು ಆರಂಭಿಸಿದರು. ಮುಂದೆ ಇದೇ ಇವರ ಆದ್ಯತೆಯಾಯಿತು.
ಹಳ್ಳಿಯಲ್ಲಿಯೇ ಇದ್ದ ಕಾರಣ ಸಹಜವಾಗಿ ಹಳ್ಳಿಯ ಬಯಲಾಟ ಮತ್ತು ದೊಡ್ಡಾಟದ ಒಲವು ಇವರ ಮನಸ್ಸನ್ನು ಸೆಳೆದಿತ್ತು. ಹೀಗೆಯೇ ಒಂದು ದಿನ ಲವ ಕುಶ ಎಂಬ ನಾಟಕವನ್ನು ನೋಡಿ ಬಂದ ನಂತರವೂ ಈ ನಾಟಕದ ಪಾತ್ರಗಳು ಸಿನಿಮಾ ರೀಲಿನ ತರಹ ಮನಸ್ಸಿನಲ್ಲಿ ಸುತ್ತುತ್ತಿದ್ದವು. ಚಿಕ್ಕ ವಯಸ್ಸಿನಲ್ಲೇ ಇದ್ದಾಗ ಇವರ ಮೈಮಾಟ ಎಂತಹವರನ್ನೂ ಕೂಡ ಆಕರ್ಷಿಸುತ್ತಿತ್ತು.
ಇವರು ಹತ್ತನೇ ತರಗತಿ ಓದುತ್ತಿರುವ ಸಮಯದಲ್ಲಿ ತಮ್ಮ ಗ್ರಾಮದಲ್ಲಿ ಪ್ರದರ್ಶನ ಗೊಂಡ ಲವ ಕುಶ ನಾಟಕದಲ್ಲಿ ಲವನ ಪಾತ್ರವನ್ನು ನಿರ್ವಹಿಸುವುದರ ಮೂಲಕ ಬಾಲ ಕಲಾವಿದನಾಗಿ ರಂಗ ಭೂಮಿ ಪ್ರವೇಶಿಸಿದ್ದರು. ಗುರುಸಿದ್ಧಯ್ಯ ಎಂಬುವವರು ಈ ನಾಟಕದಲ್ಲಿ ಇವರಿಗೆ ಪಾತ್ರ ದೊರಕಿಸಿಕೊಡಲು ಇವರಿಗೆ ಸಹಾಯ ಮಾಡಿದ್ದರು. ನಂತರ ತಮ್ಮ ಗ್ರಾಮದ ಕಲಾವಿದರೊಡನೆ ಸೇರಿ ಮಾಡಿದ ಪಾದುಕಾ ಪಟ್ಟಾಭಿಷೇಕ ನಾಟಕವು ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.
ನಾಟಕದ ಗುರುಗಳಾದ ಚಿಕ್ಕೋಡಿ ಶಿವಲಿಂಗಪ್ಪ ಸ್ವಾಮಿಗಳು ಇವರ ಅಭಿನಯವನ್ನು ಮೆಚ್ಚಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದ್ದರು. ಇದೇ ಚಿಕ್ಕೋಡಿಯ ಸಿದ್ಧಲಿಂಗ ಸ್ವಾಮಿಗಳ ಕಂಪನಿಯ ಮಹಾ ನಂಜಕ ನಾಟಕದಲ್ಲಿ ಪ್ರಹ್ಲಾದನ ಪಾತ್ರದಲ್ಲಿ ಅದ್ಭುತ ಅಭಿನಯವನ್ನು ತೋರಿದ್ದರು. ಮೈಮಾಟ ಕೂಡ ಸ್ತ್ರೀ ಪಾತ್ರಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ಇದ್ದುದರಿಂದ ಸ್ತ್ರೀ ಪಾತ್ರಗಳ ಮೂಲಕ ಪ್ರಸಿದ್ಧರಾಗಿದ್ದ ಇವರು ಕಿತ್ತೂರು ರುದ್ರಮ್ಮ ಎಂಬ ಪೌರಾಣಿಕ ನಾಟಕದಲ್ಲಿ ಮೊದಲ ಬಾರಿಗೆ ರುದ್ರಮ್ಮ ಎಂಬ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ನಿರ್ವಹಿಸಿದ ಕೌಸಲ್ಯೆ ಪಾತ್ರವೂ ಕೂಡ ಜನಪ್ರಿಯತೆಯನ್ನು ತಂದುಕೊಟ್ಟಿತು.
( ಮುಂದುವರೆಯುವುದು )