ಕರುಣೆಯೇ ಕುಟುಂಬದ ಕಣ್ಣು

ಬಹುಶಃ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರವಿದು. ಧರ್ಮದೇವತೆ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ. 1962ರ ಚಿತ್ರ.

ಇಲ್ಲೂ ಕಪ್ಪು ಬಿಳುಪು ಪಾತ್ರಗಳು. ತಂದೆ, ತಾಯಿ, ಮಗ ಮೂವರೂ ಒಳ್ಳೆಯವರಿರುವ ಒಂದು ಕುಟುಂಬ. ತಂದೆ ಕೆಟ್ಟವನಾಗುವ ಆದರೆ ಅವನ ಪತ್ನಿ ಮತ್ತು ಪುತ್ರ ಕೆಟ್ಟವರೇ ಆಗಿರುವ ಮತ್ತೊಂದು ಕುಟುಂಬ.

ಒಳ್ಳೆಯ ಕುಟುಂಬದವರಿಗೆ ಬಲು ಕೆಟ್ಟದು ಮಾಡುತ್ತದೆ ಕೆಟ್ಟ ಕುಟುಂಬ. ಕೊನೆಗೆ ಕೆಟ್ಟ ಕುಟುಂಬ ನಾನಾ ಕೋಟಲೆಗಳಿಗೆ ಸಿಲುಕಿ ನರಳುತ್ತದೆ. ಎಲ್ಲವೂ ನಂತರ ಶುಭಂ.

ಕೆ.ಎಸ್.ಅಶ್ವತ್ಥ್ ಆದವಾನಿ ಲಕ್ಷ್ಮೀದೇವಿ ಬಲು ಒಳ್ಳೆಯ ಜೋಡಿ. ಆದವಾನಿಯೇ ಈ ಚಿತ್ರದ ಧರ್ಮದೇವತೆ. ಇವರ ಮಗ ರಾಜಾಶಂಕರ್. ಇವನು ಲಾಯರ್ ಒಬ್ಬರ ಮಗಳನ್ನು (ಹರಿಣಿ) ಮೋಹಿಸುತ್ತಾನೆ. ರಾಜಾಶಂಕರನ ಗೆಳೆಯ ನರಸಿಂಹರಾಜು, ಮತ್ತೊಬ್ಬ ದುಷ್ಟ ಬಾಲಕೃಷ್ಣ.

ಉದಯಕುಮಾರ್ ಅತ್ತಿಗೆ ಆದವಾನಿಯನ್ನು ದೇವರೆಂದು ನೋಡುತ್ತಿದ್ದವನು ಬದಲಾಗುತ್ತಾನೆ. ಇವನ ಹೆಂಡತಿ ಜಯಶ್ರೀ ಮಹಾ ದುಂದುವೆಚ್ಚದ ವ್ಯಂಗ್ಯವಾಡುವ ಹೆಂಗಸು. ಇವರಿಬ್ಬರ ಮಗ ಕುಮಾರ್ (ರಾಜ್‍ಕುಮಾರ್).

ಅಪ್ಪನನ್ನು ಹೀಯಾಳಿಸುವ, ಅಮ್ಮನ ದಿಂಬಿನಡಿಯಿಂದ ಬೀಗದಕೈ ಕದ್ದು ಹಣ ಲಪಟಾಯಿಸುವ, ಸಾಧ್ವಿ ಪತ್ನಿ (ಲೀಲಾವತಿ) ಮಲಗಿರುವಾಗ ಅವಳ ಕುತ್ತಿಗೆಯಿಂದ ಸರವನ್ನು ಸೆಳೆದುಕೊಳ್ಳುವ, ಅವಳು ರಾಜಾಶಂಕರನೊಂದಿಗೆ ಮಾತನಾಡಿದಳೆಂದು ಅಪವಾದ ಹೊರೆಸುವ, ಆಸ್ತಿ ಬರಲೆಂದು ದೊಡ್ಡಮ್ಮ ಆದವಾನಿಯ ಕುತ್ತಿಗೆ ಹಿಚುಕುವ, ಹೆಂಡತಿಯನ್ನು ಬಡಿಯುವ, ನೂಕುವ, ದುಷ್ಟ ಬಾಲಕೃಷ್ಣನೊಂದಿಗೆ ಸೇರಿ ನರ್ತಕಿಯ ಮನೆಯಲ್ಲಿ ಸಿಗರೇಟ್ ಸೇದುವ, ನಂತರ ಕುರುಡನಾಗಿ ಪಶ್ಚಾತ್ತಾಪ ಪಟ್ಟು, ಹೆಂಡತಿಯ ಆರೋಗ್ಯ ಸರಿಹೋಗಲೆಂದು ಹಲುಬುವ ಬಹಳ ಅಪರೂಪದ ಪಾತ್ರದಲ್ಲಿ ರಾಜ್‍ಕುಮಾರ್ ಇದ್ದಾರೆ. ಅವರು ದಶಾವತಾರದಲ್ಲಿ ರಾಕ್ಷಸ ಪಾತ್ರಗಳನ್ನು ಮಾಡಿರುವುದುಂಟು. ಸಾಮಾಜಿಕ ಚಿತ್ರದಲ್ಲಿ ಇಷ್ಟು ವೆರೈಟಿ ವಿಲನ್ ಪಾತ್ರದಲ್ಲಿ ಇವರು ಕಾಣಿಸಿಕೊಂಡಿರುವುದು ಬಹಳ ಅಪರೂಪ.

ರಾಜಶ್ರೀಯ ಎರಡು ನೃತ್ಯಗಳಿವೆ. ಕಥಕ್ (ಭಲೆ ಭಲೆ ಭಲೆ ನಾಗರೀಕನೆ ನಿನ್ನ), ಮರಾಠಿ ಶೈಲಿ (ಝಣ್ ಝಣ್ ಝಣ್ ಝಣ್ ಝಣ್ ಝಣ್ ಝಣ್ ಕಾಲಗೆಜ್ಜೆ ಝಣ್ ಝಣ್ ಝಣ್){ಎರಡೂ ಖವ್ವಾಲಿ ಶೈಲಿ} ಹರಿಣಿಗೆ ಒಂದು ಹಾಡು (ಪ್ರೇಮಗಾನ ತಂದ), ಲೀಲಾವತಿಗೆ ಒಂದು (ಆಶಾಗಾನ ಮೋಹನ). ರಾಜ್‍ಗೆ ಒಂದು (ಕಣ್ಣೆರಡೂ ಕಾಣೊಲ್ಲ) ಮತ್ತು ಹರಿಣಿ-ರಾಜಾಶಂಕರ್‍ಗೆ ಒಂದು ಹಾಡು (ನಿಜವೋ ಸುಳ್ಳೋ ನಿರ್ಧರಿಸಿ)[ಮತ್ತೆ ಖವ್ವಾಲಿ] ಆದವಾನಿ ಲಕ್ಷ್ಮೀದೇವಿಗೆ ಇರುವ ಬಾರಮ್ಮ ಗುರು ಸೇವೆ ಮಾಡುವಾ… ಚಿತ್ರದ ಕೊನೆಯಲ್ಲಿ ಮತ್ತೆ ಬಂದು ಪವಾಡ ಮಾಡುವ ಹಾಡು.

ಪಿ.ಬಿ.ಎಸ್ ಮತ್ತು ಎಸ್. ಜಾನಕಿ  ಹಾಡುಗಳನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಶೀರ್ಷಿಕೆ ಗೀತೆ ಹಾಡಿದ್ದಾರೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply