“ಕಾರ್”

ಚಿಕ್ಕ ವಯಸ್ಸಿನಲ್ಲಿ ನಮಗೊಂದು ಕನಸಿರುತ್ತದೆ. 

ಅದು ಒಡವೆ-ವಸ್ತುವಿನದ್ದಲ್ಲ..  ದೊಡ್ಡ ಬಂಗಲೆ ಬೇಕು ಅಂತಲ್ಲ.. ಕೈ ತುಂಬಾ ದುಡ್ಡು ಬೇಕು ಅಂತಲೂ ಅಲ್ಲ.. ಕಂಪ್ಯೂಟರ್‌-ಲ್ಯಾಪ್ಟಾಪ್ ಸಹ ಅಲ್ಲ.. ಅವೆಲ್ಲಾ ಯೋಚನೆಗಳೂ ಬರದ ಮುಗ್ಧ ವಯಸ್ಸು ಅದು.. ಆ ಚಿಕ್ಕ ವಯಸ್ಸಿನಲ್ಲಿ ನಾವೇನು ಬಯಸಿರಬಹುದು..?
ಇಲ್ಲೊಬ್ಬ ಪುಟ್ಟಿ ಇದ್ದಾಳೆ.. 

ಆಕೆಗೆ “ಕಾರ್” ಎಂದರೇನೇ ಆಕರ್ಷಣೆ.. ಮೊದಲು ಅದನ್ನು ಕೊಳ್ಳಬೇಕು, ನಂತರ ಅದು ಚಲಿಸಲು ಪೆಟ್ರೋಲ್ ಹಾಕಿಸಬೇಕು.. ಉಹುಂ ಅದೆಲ್ಲ ನಮ್ ಪುಟ್ಟಿಗೆ ಗೊತ್ತಿಲ್ಲ. ಅವಳಿಗೆ ಕಾರ್ ಅಂದ್ರೆ ಕಾರ್ ಅಷ್ಟೇ.. ಸದಾ ಪುಟ್ಟ ಆಟದ ಕಾರ್ ಇಟ್ಕೊಂಡು ಆಟ ಆಡ್ತಿರುತ್ತಾಳೆ.. 
ದೊಡ್ಡ ಕಾರ್ ಹೇಗಿರುತ್ತದೆ ಅಂತಲೇ ಆಕೆಗೆ ಗೊತ್ತಿರುವುದಿಲ್ಲ. ಅದನ್ನು ತನ್ನ ಗೆಳೆಯನ ಬಳಿ ಕೇಳಿದಾಗ ಅವನೋ “ಅದೊಂದು ಬೇರೆಯದೇ ಪ್ರಪಂಚ.. ಕಾರಿನೊಳಗೆ ಚಾಕ್ಲೇಟೂ, ಬಿಸ್ಕೇಟೂ, ಆಟ ಸಾಮಾನೂ ಇರುತ್ತೆ” ಅಂತ ಹೇಳ್ತಾನೆ 😂 ಮಕ್ಕಳೇ ಹಾಗಲ್ವೇ? ಅವರ ಎಲ್ಲಾ ಯೋಚನೆಗಳೂ ಚಾಕ್ಲೇಟೂ-ಬಿಸ್ಕೇಟಿನ ಸುತ್ತಲೇ ಸುತ್ತುವುದು. 

ಒಮ್ಮೆ ಸ್ಕೂಲಿನ ಬಳಿ‌ ಒಂದು ಕಾರ್ ಕಂಡರೂ ಪುಟ್ಟಿ ಅಲ್ಲಿಗೆ ಹೋಗುವಷ್ಟರಲ್ಲಿ ಕಾರ್ ಹೊರಟುಬಿಡುತ್ತದೆ. ಇದು ಪುಟ್ಟಿಯನ್ನು ಮತ್ತೂ ಕೆರಳಿಸುತ್ತದೆ. ಈ ಕಾರ್ ಅನ್ನೋಂಥದ್ದೇನಿದೆ ಅಂತ ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾಳೆ.
ಆ ಊರಿನಲ್ಲಿ ದೆವ್ವದ ಮನೆಯೊಂದಿರುತ್ತೆ.

‘ಅಜ್ಜಯ್ಯನ ಮನೆ’… 
ಊರಿನ ಯಾರೂ ಅಲ್ಲಿಗೆ ಭೂತದ ಹೆದರಿಕೆಯಿಂದ ಹೋಗುತ್ತಿರುವುದಿಲ್ಲ. ಆದರೆ ಅವರ ಮನೆಯ ಅಂಗಳದಲ್ಲಿ‌ ಒಂದು ಹಳೆಯ ಕಾರು ಕೆಟ್ಟು ನಿಂತಿರುತ್ತದೆ. ಕಾರಿನ ಸುತ್ತ ಗಿಡ ಬೆಳೆದುಕೊಂಡಿರುತ್ತದೆ.   ಎಷ್ಟು ವರ್ಷಗಳಿಂದ ಅಲ್ಲಿ ನಿಂತಿತ್ತೋ ಗೊತ್ತಿಲ್ಲ. ಅಂತಹಾ ಕಾರು ಪುಟ್ಟಿಯನ್ನು ಆಕರ್ಷಿಸುತ್ತದೆ. ಆದರೆ ಅಲ್ಲಿಗೆ ಹೋಗಲು ಜನರು ಬಿಡುತ್ತಿರುವುದಿಲ್ಲ. 

ಒಂದು ದಿನ ಭಾನುವಾರ ಮುಂಜಾನೆ ಯಾರಿಗೂ ತಿಳಿಯದಂತೆ ಮೆಲ್ಲನೆ ಆ ಕಾರಿನ ಬಳಿ ಹೋಗುತ್ತಾಳೆ ಪುಟ್ಟಿ. ಕಾರಿನೊಳಗೆ ಕೂರುತ್ತಾಳೆ. ತನ್ನದೇ ಕಲ್ಪನೆಯಲ್ಲಿ ಆಕಾಶದಲ್ಲೆಲ್ಲಾ ವಿಹರಿಸಿದ ಹಾಗೆ ಕನಸು ಕಾಣುತ್ತಾಳೆ.‌ ಕಾರಿಗೆ “ಬಾಯ್” ಹೇಳಿ ‘ಮತ್ತೆ ಬರುತ್ತೇನೆ’ ಅಂತ ಹೇಳಿ ಮನೆಗೆ ಬರುತ್ತಾಳೆ. ಎಲ್ಲರ ದೃಷ್ಟಿಯಲ್ಲಿ ನಿಷ್ಪ್ರಯೋಜಕವಾಗಿರುವ ಕಾರು ಪುಟ್ಟಿಗೆ ಹೊಸ ಲೋಕ ತೋರಿಸಿರುತ್ತದೆ. 

ಆದರೆ ಮಾರನೇ ದಿನವೇ ಕೆಟ್ಟು ನಿಂತಿರುವ ಕಾರನ್ನು ಊರಿನ ಜನ ಅಲ್ಲಿಂದ ಎತ್ತಿ ಒಯ್ಯುತ್ತಾರೆ. ಪುಟ್ಟಿ ಅಂದು ಸಂಜೆ ಶಾಲೆ ಮುಗಿಸಿ ಬಂದಾಗ ಅಲ್ಲಿ ಕಾರನ್ನು ಕಾಣದೇ ಕಂಗಾಲಾಗುತ್ತಾಳೆ. ಅಳುತ್ತಾಳೆ. ಪರದಾಡುತ್ತಾಳೆ. ಇಲ್ಲೇ ಇತ್ತಲ್ಲ, ಎಲ್ಲಿ ಹೋಯ್ತು ಅಂತ ಪರಿತಪಿಸುತ್ತಾಳೆ. ಆಗ ಆ ಮಗುವಿನ ಧ್ವನಿ, ಅಳು ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ನೂರಕ್ಕೆ ನೂರು ಅಂಕ ಕೊಡಬಹುದು.. ❤ 

ಭೂತದ ಅಜ್ಜಯ್ಯನನ್ನೇ “ಕಾರು ಕೊಡು” ಅಂತ ಅಳುತ್ತಾ ಕೇಳುತ್ತಾಳೆ. ಅದು ಭೂತ ಎಂಬ ಭಯವೇ ಇಲ್ಲ ಆಕೆಗೆ. ಒಟ್ಟಿನಲ್ಲಿ ತನಗೆ ಕಾರು ಬೇಕಷ್ಟೇ… ಕಡೆಗೆ ಆ ದೊಡ್ಡ ಕಾರ್ ನಿಂತಿದ್ದ ಜಾಗದಲ್ಲಿ ತನ್ನ ಆಟದ ಕಾರನ್ನೇ ಇಟ್ಟು ಹೊರಡುತ್ತಾಳೆ.

ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಕಾರಿನ ಹಾರ್ನ್ ಕೇಳಿಸಿದಂತಾಗುತ್ತದೆ. ನೋಡಿದರೆ ಅದೇ ಅಜ್ಜಯ್ಯನ ಮನೆಯ ಕಾರ್!!!!

ಬೇಡದ ವಸ್ತು ಎಂಬಂತೆ ಜನರು ಆ ದೊಡ್ಡ “ಕಾರ್” ಅನ್ನು ಊರಾಚೆ ಒಗೆದಿರುತ್ತಾರೆ. ಆದರೆ ಪುಟ್ಟಿಗೆ ಅದೇ ಲೋಕ… ಸಂಭ್ರಮದಿಂದ ಪುಟ್ಟಿ “ತನ್ನ” ಕಾರಿನೊಳಗೆ ಕೂರುತ್ತಾಳೆ….
*************
ಹತ್ತೊಂಭತ್ತು ನಿಮಿಷದ ಈ ಶಾರ್ಟ್ ಮೂವಿ ನಮ್ಮೆಲ್ಲರ ಬಾಲ್ಯ ನೆನೆಸಿಕೊಳ್ಳುವಂತೆ ಮಾಡುತ್ತದೆ. ಸ್ಟೇಟಸ್ ಎಂಬ ಪದದ ಪರಿಚಯವೂ ಇಲ್ಲದಿದ್ದ ನಾವೂ ಸಹ ಹಿಂದೊಮ್ಮೆ ಇದೇ ರೀತಿ ಕನಸು ಕಂಡಿದ್ದೆವು ಎನ್ನುವುದು ಈ ಸಿನೆಮಾವನ್ನು ಮತ್ತಷ್ಟು ಆಪ್ತವಾಗಿಸುತ್ತದೆ. ಈ ಶಾರ್ಟ್ ಮೂವಿ ವಿಶ್ವದರ್ಜೆಯದ್ದಾಗಿದೆ. ಏಕೆಂದರೆ ಪುಟ್ಟಿಯಂತಹಾ ಮುಗ್ಧ ಮನಸ್ಸುಗಳು ಪ್ರಪಂಚದ ಎಲ್ಲಡೆಯಲ್ಲಿಯೂ ಇದ್ದಾರೆ.. ❤❤❤ ಎಲ್ಲಾ ದೇಶ-ಭಾಷೆ-ಕಾಲಮಾನಕ್ಕೂ ಸಲ್ಲುವ ಸಿನೆಮಾ.
ನೋಡಿ ಬಹಳ ಖುಷಿಯಾಯ್ತು..

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply