-ಘನಶ್ಯಾಮ್
ಸಿದ್ದಲಿಂಗೇಶ್ವರ ಚಿತ್ರಮಂದಿರದಿಂದ ನೇರ ಪ್ರಸಾರ
ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷಿತ ಚಿತ್ರ – ಕೋಟಿಗೊಬ್ಬ 3 ಇಂದು ದೇಶಾದ್ಯಂತ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಪಾಲಿಗೆ ಹಬ್ಬದ ದಿನವೆಂದೇ ಹೇಳಬಹುದು. ಆಯುಧ ಪೂಜೆ ಹಬ್ಬದ ಜೊತೆಗೆ ಈ ಹಬ್ಬವೂ ಸೇರಿ ಒಂದೇ ದಿನದಲ್ಲಿ ಎರಡು ಹಬ್ಬ ಮಾಡುವ ಸಂಭ್ರಮ ದೇಶಾದ್ಯಂತ ಮನೆಮಾಡಿದೆ. ಚಿತ್ರಮಂದಿರಗಳ ಎದುರು ಅಭಿಮಾನಿಗಳ ಹರ್ಷ, ಜೈಕಾರ, ಸಾಹಸಸಿಂಹ ವಿಷ್ಣುವರ್ಧನ್ ಹಾಗು ಸುದೀಪ್ ಕಟ್ ಔಟ್ ಗಳಿಗೆ ಪೂಜೆ ಮಾಡಿ, ಸಿಹಿ ಹಂಚಿ ಸಂತಸಪಡುತ್ತಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ. ಅಭಿಮಾನಿಗಳಿಗೆಂದೇ ಬೆಳಿಗ್ಗೆ 7.30 ಕ್ಕೆ ವಿಶೇಷ ಬೆಳಗಿನ ಪ್ರದರ್ಶನವನ್ನು ಕೂಡ ಬೆಂಗಳೂರಿನ ಜೆ.ಪಿ.ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು. ನೂರಾರು ಜನ ಅಭಿಮಾನಿಗಳು ಬೆಳಗ್ಗಿನಿಂದಲೇ ಚಿತ್ರಮಂದಿರದ ಎದುರು ಜಮಾಯಿಸಿ, ಕಿಚ್ಚ ಸುದೀಪ್ ಗೆ ಜೈಕಾರ ಕೂಗುತ್ತಿದ್ದರು. ಆದರೆ ಸಿನಿಮಾ ಪ್ರದರ್ಶನಕ್ಕೆ ಬೇಕಾದ ಲೈಸೆನ್ಸ್ ಇನ್ನೂ ದೊರೆಯದ ಕಾರಣ ಬೆಳಗಿನ ಪ್ರದರ್ಶನ ಇನ್ನೂ ಆರಂಭವಾಗದೆ, ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಕಿಚ್ಚ ಸುದೀಪ್ ಅಭಿನಯವನ್ನು ಕಣ್ತುಂಬಿಕೊಳ್ಳಲೆಂದು ಬಂದು, ಚಿತ್ರಮಂದಿರದ ಗೇಟ್ ಬಾಗಿಲು ಇನ್ನೂ ತೆರೆಯದ ಕಾರಣ, ಗೇಟಿನ ಹೊರಗಡೆಯೇ ನಿಂತಿರುವ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಈ ವಿಶೇಷ ಬೆಳಗಿನ ಪ್ರದರ್ಶನವನ್ನು ರದ್ದುಗೊಳಿಸಲಾಗಿದ್ದು, ಸಿನಿಮಾ ಟಿಕೆಟ್ ಹಿಡಿದು ಬೆಳಗಿನಿಂದ ಚಿತ್ರಮಂದಿರದ ಮುಂದೆ ನಿಂತಿದ್ದ ಅಭಿಮಾನಿಗಳಿಗೆ ಇದು ಇನ್ನಷ್ಟು ಬೇಸರವನ್ನುಂಟುಮಾಡಿದೆ. ಟಿಕೆಟ್ ನ ಹಣವನ್ನು ಹಿಂದಿರುಗಿಸುವುದಾಗಿ ಚಿತ್ರಮಂದಿರದ ಮಾಲೀಕರು ಹೇಳಿದರೂ, ಇದಕ್ಕೆ ಒಪ್ಪದೇ, ಸಿನಿಮಾ ನೋಡಬೇಕೆಂಬ ಅಭಿಮಾನಿಗಳ ಘೋಷಣೆಗಳು ಕೇಳಿಬರುತ್ತಿದೆ. ಆದಷ್ಟು ಬೇಗ ನಿರ್ಮಾಪಕರು ಈ ಸಮಸ್ಯೆಯನ್ನು ಬಗೆಹರಿಸಿ, ಕೋಟಿಗೊಬ್ಬ 3 ಶತದಿನೋತ್ಸವ ಆಚರಿಸಲೆಂದು ಚಿತ್ರೋದ್ಯಮ.ಕಾಂ ತಂಡದ ಹಾರೈಕೆ.