ವಿಜಯಪುರಿಯ ಬಲಹೀನ ರಾಜ, ತನ್ನ ಮಗನನ್ನೂ ಬಂಧಿಸಿಟ್ಟಿರುತ್ತಾನೆ, ಏಕೆಂದರೆ ಅವನು ಕ್ರಾಂತಿ ಕ್ರಾಂತಿ ಎನ್ನುತ್ತಿರುತ್ತಾನೆ.
ರಾಜನ ದೀವಾನ ಮಾರ್ತಾಂಡ ಮಹಾಕ್ರೂರಿ. ಅನೇಕರನ್ನು ಮಾತೆತ್ತಿದರೆ ಕೊಲ್ಲುತ್ತಿರುತ್ತಾನೆ.
ಒಂದು ಗುಂಪು, ಗಂಗಾಧರ, ಮಾಧವ, ತಾರಾ ಎಲ್ಲಾ ಸೇರಿ ಕ್ರಾಂತಿ ನಡೆಸುತ್ತಿರುತ್ತಾರೆ. ಅವರ ಜೊತೆಗೆ ವಿಜಯ್ (ರಾಜ್‍ಕುಮಾರ್) ಬಂದು ಸೇರುತ್ತಾನೆ. ಅವನು ಆ ದೇಶದ ರಾಜಕುಮಾರ ಚಂದ್ರಕುಮಾರ ಎಂದು ತಿಳಿದುಬಂದಾಗ ಅವನನ್ನು ದ್ವೇಷಿಸುತ್ತಾರೆ ಎಲ್ಲರೂ.
ಅವನನ್ನು ಅವನ ತಂದೆಯ ಗೂಢಚಾರನೆಂದುಕೊಳ್ಳುತ್ತಾರೆ.
ತಾರಾ ಅವನನ್ನು ಪ್ರೇಮಿಸುತ್ತಾಳೆ.
ಮಾರ್ತಾಂಡನ ವಿಷಯದಲ್ಲಿ ರಾಜ ಕುರುಡನಾಗಿರುತ್ತಾನೆ. ಆದರೆ ಅರ್ಜುನ್ ಎಂಬ ಸೈನ್ಯಾಧಿಕಾರಿ ರಾಜಕುಮಾರನಿಗೆ ಸಹಾಯ ಮಾಡುತ್ತಿರುತ್ತಾನೆ.
ಕೊನೆಗೆ ದೇಶದಲ್ಲಿ ಮಿಲಿಟರಿ ಆಡಳಿತ ಬರುವ ಸೂಚನೆ ಕಂಡಾಗ ಗಂಗಾಧರ ರಾಜನನ್ನು ಕೊಂದು ಆತ್ಮಾಹುತಿ ಮಾಡಿಕೊಳ್ಳುತ್ತಾನೆ. ತಾರಾ ವಿಜಯ್‍ನನ್ನು ಕೊಲ್ಲಲು ಬಂದು ಅವನು ಮರುದಿನ ಪ್ರಜಾಪ್ರಭುತ್ವ ಜಾರಿಗೊಳಿಸುವನೆಂದು ತಿಳಿದು ಸಂತೋಷಿಸುತ್ತಾಳೆ. ಮಾಧವನೂ ತನ್ನ ಅವಸರಕ್ಕೆ ಪಶ್ಚಾತ್ತಾಪ ಪಟ್ಟು ವಿಜಯ್‍ನನ್ನು ಒಪ್ಪಿಕೊಳ್ಳುತ್ತಾನೆ.
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು, ಕರಿನಾಗ ಮರಿನಾಗ, ಮೊಳಗಲಿ ಕ್ರಾಂತಿ ಕಹಳೆ ಮೊಳಗಲಿ ಮತ್ತು ಕಣಿವೆಯ ಕೆಳಗಿನ ಹೆಣ್ಣು ಹಾಡುಗಳಿವೆ.
ದಿನೇಶ್ ಮಾರ್ತಾಂಡನಾಗಿ, ರಂಗ ಗಂಗಾಧರನಾಗಿ, ರಾಜೇಶ್ ಮಾಧವನಾಗಿ, ತಾರಾ ಆಗಿ ಜಯಂತಿ, ನಂದಿನಿ ಆಗಿ ಬಿ.ವಿ.ರಾಧ, ವಿನೋದ್ ಆಗಿ ದ್ವಾರಕೀಶ್, ಮಲ್ಲಿಕಾ ಆಗಿ ಜಯಕುಮಾರಿ ಮತ್ತು ರಾಜನಾಗಿ ಸಂಪತ್.
ರಾಜ್ ಮತ್ತು ಜಯಂತಿ ಬ್ರಿಟಿಷರ ವೇಷ ಧರಿಸಿ ಬಂದು ಆಂಗ್ಲಮಿಶ್ರಿತ ಕನ್ನಡ ಮಾತಾಡುವುದು ಮಜಾ ಕೊಡುತ್ತದೆ.
ಚಿತ್ರದ ಹೈಲೈಟ್ : ರಾಜ್ ಹರಿಕಥೆ. ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಡಿದ್ದಾರೆ. ನಡುನಡುವೆ ರಾಜ್ ಮಾತಾಡುವಾಗ ಎಷ್ಟು ಚೆನ್ನಾಗಿ ರಾಗವಾಗಿ ಕತೆ ಹೇಳುವರೆಂದರೆ ಅವರ ರಾಗಜ್ಞಾನ ಅದ್ಭುತ ಎನಿಸದಿರದು.