ಇನ್ನೊಬ್ಬರ ಸ್ವತ್ತಿನ ಮೇಲೆ ಆಸೆ ಪಟ್ಟು, ಮಾಡಬಾರದ್ದನ್ನೆಲ್ಲಾ ಮಾಡಿದರೆ ಅನುಭವಿಸಬಾರದ್ದನ್ನೆಲ್ಲಾ ಅನುಭವಿಸುತ್ತೀ ಎನ್ನುವ ನೀತಿಪಾಠದ ಕಥೆ 1962ರ ಈ ಬಿ.ಆರ್. ಪಂತುಲು ನಿರ್ಮಾಣ ನಿರ್ದೇಶನದ ಚಿತ್ರ. ಪುಟ್ಟಣ್ಣ ಕಣಗಾಲ್ ಇದರಲ್ಲಿ ಪಂತುಲು ಅವರ ಸಹಾಯಕರು.
ಆರ್. ನಾಗೇಂದ್ರರಾವ್ ಈ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಹಣದಾಸೆ, ತನ್ನ ಮಗನನ್ನು ವಿದ್ಯಾವಂತನಾಗಿಸಬೇಕು, ಅವನನ್ನು ದೊಡ್ಡ ಮನೆಯ ಅಳಿಯನನ್ನಾಗಿ ಮಾಡಬೇಕು ಎನ್ನುವ ದುರಾಶೆ ಅವರಿಂದ ಮಾಡಬಾರದ್ದನ್ನೆಲ್ಲಾ ಮಾಡಿಸುತ್ತದೆ.
ಕ್ಷಯರೋಗಿ ಅಶ್ವತ್ಥ್ ಸಾಯುವಂತಾಗಿದ್ದಾಗ ತನ್ನ ಮಗನನ್ನೂ, ಒಂದಿಷ್ಟು ಇಡುಗಂಟನ್ನೂ ಕೊಟ್ಟು ಆಸ್ಪತ್ರೆಗೆ ಹೋದಾಗ ಆ ಹಣದಿಂದ ಭೂಮಿ ಕೊಂಡುಕೊಂಡದ್ದೂ ಅಲ್ಲದೇ ಅಶ್ವತ್ಥ್ ಮಗನನ್ನು ವಿದ್ಯಾಬುದ್ಧಿ ಇಲ್ಲದಂತೆ ಮಾಡುತ್ತಾನೆ ನಾಗೇಂದ್ರರಾವ್. ಆತನ ಹೆಂಡತಿ ರಾಜಮ್ಮ ಮತ್ತೊಂದು ಮಗುವನ್ನು ಹೆತ್ತಾಗ ತನ್ನ ಗಮನವನ್ನೆಲ್ಲಾ ಆ ಮಗು ಮೋಹನ್ (ಕಲ್ಯಾಣ್‍ಕುಮಾರ್)ಗೆ ಕೊಡುತ್ತಾನೆ. ಅಶ್ವತ್ಥ್ ಮಗ ಕೃಷ್ಣ (ರಾಜ್‍ಕುಮಾರ್) ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ. ಕೃಷ್ಣನನ್ನು ನಿಕೃಷ್ಟವಾಗಿ ನೋಡುತ್ತಾನೆ ಅವನ ‘ಅಪ್ಪ’.
ಡಿಕ್ಕಿ ಮಾಧವರಾವ್ ಮಗಳು ಗೌರಿಗೆ (ಲೀಲಾವತಿ) ಕೃಷ್ಣ ಎಂದರೆ ಇಷ್ಟ. ಆದರೆ ಬಲವಂತವಾಗಿ ಅವಳ ಮದುವೆ ಮೋಹನ್ ಜೊತೆಗೆ ನಿಶ್ಚಯವಾಗುತ್ತದೆ.
ಅಷ್ಟರಲ್ಲಿ ಶ್ರೀಮಂತ ಬಾಲಕೃಷ್ಣ ರಮಾದೇವಿ ಮಗಳು ಚಿಂದೋಡಿ ಲೀಲಾಳ ಕಡೆಗೆ ಗಮನ ಹರಿಸಿದ ನಾಗೇಂದ್ರರಾವ್ ಕೃಷ್ಣನನ್ನು ಜೋರಿನಿಂದ, ಗೌರಿಯನ್ನು ಉಪಾಯವಾಗಿ ಹಳ್ಳಿಯಿಂದ ನಗರಕ್ಕೆ ಓಡಿಸುತ್ತಾನೆ.
ತನ್ನ ಮಗನ ಏಳ್ಗೆಗಾಗಿಯೇ ಎಲ್ಲವನ್ನೂ ಮಾರಿ ಮೋಹನನ ಮನೆಗೆ ಬಂದ ತಾಯ್ತಂದೆಯರನ್ನು ಮೋಹನ ಓಡಿಸುತ್ತಾನೆ. ರಸ್ತೆಯಲ್ಲಿ ಬೀಳುತ್ತಾರೆ ನಾಗೇಂದ್ರರಾವ್, ರಾಜಮ್ಮ.
ಅಶ್ವತ್ಥ್ ಕಾಯಿಲೆ ವಾಸಿಯಾಗಿ ಮಗನನ್ನು ಹುಡುಕಿದಾಗ ಕಾಲಿಗೆ ತೊಡರಿದ ಬಳ್ಳಿಯಂತೆ ಕೃಷ್ಣ ಕೆಲಸಗಾರನಾಗಿ ಸಿಗುತ್ತಾನೆ. ಮೋಹನ್ ಇಲ್ಲಿಯೂ ಆಸ್ತಿ ಲಪಟಾಯಿಸಲು ನೋಡಿದಾಗ… ನಂತರ ಶುಭಂ!
ಉದಯಕುಮಾರ್ ಅತ್ಯಂತ ಪುಟ್ಟ ಪಾತ್ರವೊಂದರಲ್ಲಿ ಮೂರು ನಿಮಿಷ ಬರುತ್ತಾರೆ. ರಾಜ್ ಕಲ್ಯಾಣ್ ಉದಯ್ ಕುಮಾರತ್ರಯರು ಒಟ್ಟಿಗೆ ನಟಿಸಿದ ಮೊದಲ ಚಿತ್ರ ಇದು!
ಆರರಲ್ಲಿ ನಾಲ್ಕು ಹಾಡುಗಳು ಜನಪ್ರಿಯ.
ಕಲ್ಯಾಣ್ ಚಿಂದೋಡಿಯವರಿಗೆ ‘ಅನುರಾಗದೆ ನೀ ಪಾಡಲೇಕೆ’ , ರಾಜ್ ಲೀಲಾವತಿಯವರಿಗೆ ‘ನನ್ಯಾಕೆ ನೀ ಹಾಗೆ ನೋಡುವೆ ಮಾತಾಡೆ’ , ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿಯವರಿಗೆ ‘ನೀನೇ ಕಿಲಾಡಿ ಹೆಣ್ಣು’ , ಘಂಟಸಾಲ ಅವರು ಹಾಡಿರುವ ದಾಸರ ಪದ ‘ಯಾರಿಗೆ ಯಾರುಂಟು ಎರವಿನ ಸಂಸಾರ’ .
‘ಬಾಳೇ ಬಂಗಾರ’ ಎನ್ನುವ ಹಾಡು ಲೀಲಾವತಿಗೆ, ‘ಸಂಸಾರ ಛಿದ್ರವಾದಾಗ ಧೂಳಿಯಾಯಿತು ಗಾಳಿ ಗೋಪುರ’ ಎಂಬ ಹಾಡುಗಳೂ ಇವೆ.