ಛೇ! ಶಿವನಂಜೇಗೌಡ (ಉದಯಕುಮಾರ್) ಪುರೋಹಿತರಿಗೆ ತನ್ನೂರು ಚಂದವಳ್ಳಿಗೊಬ್ಬ ಪುರೋಹಿತ ಬೇಕು ಎಂದು ಕೇಳಬಾರದಿತ್ತು. ಹಾಗೆ ಬಂದ ಪುರೋಹಿತ ಮತ್ತು ಅವನ ಹೆಂಡತಿ (ಪಾಪಮ್ಮ) ಅಷ್ಟೊಂದು ದುರಾಸೆಯವರಾಗಬಾರದಿತ್ತು. ನರಹರಪ್ಪನ ಹೆಂಡತಿ ಪಾರ್ವತಿ (ಶಾಂತಮ್ಮ) ಶಿವನಂಜೇಗೌಡನ ಹೆಂಡ್ತಿ ಪುಟ್ತಾಯಿ (ಬಿ.ಜಯಶ್ರೀ) ಬಳಿ ಪಾಪಮ್ಮ ನಿಮ್ಮನೆ ಅಲ್ಲದೇ ನಮ್ಮ ಮನೆಯಲ್ಲೂ ಹಾಲು ಮೊಸರು ತುಪ್ಪ ಕೇಳೋಕ್ಕೆ ಬರ್ತಾಳೆ ಅಂತ ಹೇಳ್ಬಾರ್ದಿತ್ತು. ಪಾರ್ವತಿ ಆ ವಿಷಯವನ್ನ ಪಾಪಮ್ಮನ ಬಳಿ ಆಡಿ ತೋರಿಸಬಾರದಿತ್ತು.
ಪಾಪಮ್ಮ ಈ ವಿಷಯಕ್ಕೆ ಸಿಟ್ಟಾಗಿ ಪುಟ್ತಾಯಿ ಬಳಿ ಪಾರ್ವತಿ ಮೇಲೆ ಇಲ್ಲಸಲ್ಲದ ಅಪವಾದ ಹೊರೆಸಬಾರದಿತ್ತು. ಪುಟ್ತಾಯಿ ತನ್ನ ಪತಿಗೆ ಈ ವಿಷಯ ಹೇಳ್ಬಾರದಿತ್ತು. ಶಿವನಂಜೇಗೌಡ ಹೋಗಿ ಪಾಪಮ್ಮನಿಗೆ ಎಚ್ಚರಿಕೆ ಕೊಡಬಾರದಿತ್ತು. ಪಾಪಮ್ಮ ಅತ್ತು ಗಂಡನನ್ನು ಎತ್ತಿ ಕಟ್ಟಬಾರದಿತ್ತು. ಆ ಪುರೋಹಿತ ಶಿವನಂಜೇಗೌಡನ ಸಂಸಾರವನ್ನು ನಾಶ ಮಾಡುವ ಶಪಥ ಮಾಡಬಾರದಾಗಿತ್ತು.
ಊರಿನ ಕಪ್ಪುಕುರಿ ಕರಿಯಣ್ಣ (ಬಾಲಕೃಷ್ಣ) ತನ್ನ ಜಮೀನು ಕಜ್ಜಾ ಮಾಡಿದ ಚಂಪಾಳನ್ನು(ರಾಜಶ್ರೀ) ಕೆಣಕಬಾರದಿತ್ತು. ಅವಳು ಹೋಗಿ ಪಂಚಾಯತಿಯಲ್ಲಿ ದೂರು ಕೊಡಬಾರದಾಗಿತ್ತು. ಪುರೋಹಿತನ ಮನೆಯ ಹಿಂದಿನ ಮನೆಯೇ ಕರಿಯಣ್ಣನ ಮನೆ ಆಗಬಾರದಿತ್ತು. ಅವರಿಬ್ಬರೂ ಒಂದಾಗಬಾರದಿತ್ತು. ಹಾವುಗಳೆರಡೂ ಸೇರಿ ಶಿವನಂಜೇಗೌಡನ ಎರಡನೇ ಮಗ ರಾಮನನ್ನು ಬುಟ್ಟಿಗೆ ಹಾಕಿಕೊಂಡು ಇಸ್ಪೀಟು ಕಲಿಸಬಾರದಿತ್ತು. ಮೊದಲ ಮಗ ಹನುಮ(ರಾಜ್‍ಕುಮಾರ್) ಮತ್ತು ಚೆನ್ನಿ (ಜಯಂತಿ) ಹಾಡುತ್ತಾ ಹಾಯಾಗಿದ್ದಾಗ ಚೆನ್ನಿ ರಾಮನ ನಡವಳಿಕೆ ಬಗೆಗೆ ಹೇಳಬಾರದಿತ್ತು.
ಹನುಮ ತಮ್ಮನನ್ನು ಹೊಡೆಯಬಾರದಿತ್ತು. ಇಷ್ಟು ತಲೆಮಾರಿನಿಂದ ಇಲ್ಲದ ಆಸ್ತಿಭಾಗ ಈಗ ಆಗಬಾರದಿತ್ತು. ಅತ್ತೆಯನ್ನು ಕಂಡರೆ ಸಿಡಿಮಿಡಿಗುಟ್ಟುವ ಲಕ್ಷ್ಮಿಯನ್ನು (ಆದವಾನಿ ಲಕ್ಷ್ಮೀದೇವಿ) ರಾಮನಿಗೆ ಮದುವೆ ಮಾಡಬಾರದಾಗಿತ್ತು. ಹನುಮನನ್ನು ರಾಮನ ‘ಹಿತೈಷಿಗಳು’ ಯಾವುದೋ ಕುಂಟು ನೆಪ ಮಾಡಿ ಮೂರು ತಿಂಗಳು ಜೈಲಿಗೆ ಕಳಿಸಬಾರದಿತ್ತು.
ನೆಮ್ಮದಿಯಾಗಿ ಮಗುವಿನೊಂದಿಗೆ ಆಡಿಕೊಳ್ಳುತ್ತಿದ್ದ ಚೆನ್ನಿಯ ಸಂಸಾರದ ಮೇಲೆ ಮತ್ತೆ ಪುರೋಹಿತ ಮತ್ತು ಕರಿಯಣ್ಣ ಕಣ್ಣು ಹಾಕಬಾರದಾಗಿತ್ತು. ಪಾಪಮ್ಮನ ಮಾತು ಕೇಳಿ ತಿಪ್ಪಿ ಚೆನ್ನಿ ಹನುಮರ ಮಗುವಿಗೆ ವಿಷ ಹಾಕಿ ಕೊಲ್ಲಬಾರದಾಗಿತ್ತು.
ಲಕ್ಷ್ಮಿಯನ್ನು ಕೊಲ್ಲಲು ಹೋದ ಹನುಮನ ಮಚ್ಚಿಗೆ ಬಲಿಯಾದವನು ತಮ್ಮ ರಾಮ. ಲಕ್ಷ್ಮಿ ಹನುಮನಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಬಿದ್ದು ಸತ್ತಳು. ಹನುಮನಿಗೆ ಜೀವಾವಧಿ ಶಿಕ್ಷೆ. ಜೊತೆಗೆ ಪುರೋಹಿತ, ಕರಿಯಣ್ಣ ಮತ್ತು ಪಾಪಮ್ಮನಿಗೆ ಜೀವಾವಧಿ ಶಿಕ್ಷೆ.
ವಿಷಯ ಕೇಳಿ ಚೆನ್ನಿ ಹೃದಯಸ್ತಂಭನ.
ಅಬ್ಬಾ… ಅರ್ಧ ನೋಡಿ ನಿಲ್ಲಿಸಿದಾಗ, ಮೊದಲೇ ಸಿನಿಮಾದ ಕೊನೆ ಗೊತ್ತಿದ್ದರೂ (ಶಿವನಂಜೇಗೌಡ ಮೊದಲೇ ಹುಚ್ಚನಾಗಿ ನಮ್ಮ ಮುಂದೆ ಬರುತ್ತಾನೆ. ಇಡೀ ಮನೆ ನಾಶವಾಗಿರುತ್ತದೆ) ಏನೋ ಒಂದು ರೀತಿಯ ತಳಮಳ.
ತರಾಸು ಅವರ ಕಾದಂಬರಿ, ಚಿತ್ರಕಥೆ ಮತ್ತು ಸಂಭಾಷಣೆ. ಅನ್ಯಾಯವನ್ನು ನೋಡಿ ಉರಿಯುವವರಿಗೆ ಈ ಬಾಲಕೃಷ್ಣ ಮತ್ತು ಗ್ಯಾಂಗಿನ ಕರಾಮತ್ತುಗಳು ಇನ್ನೂ ಉರಿಸುತ್ತವೆ.
ಸುಂದರ ಹಾಡುಗಳಿವೆ. ಪೀಠಾಪುರಂ ಹಾಡಿರುವ ಓ ನನ್ನ ಬಾಂಧವರೇ ಕನ್ನಡ ಕುಲ ಪುತ್ರರೇ ಉದಯಕುಮಾರ್‍ಗೆ. ಒಂದಾಗುವ ಮುಂದಾಗುವ (ಎಲ್ ಆರ್ ಈಶ್ವರಿ ಮತ್ತು ಯೇಸುದಾಸ್) ಹಳ್ಳಿಯ ಒಂದು ನೃತ್ಯಜೋಡಿಗೆ. ಸುಮಬಾಲೆಯ ಪ್ರೇಮದ (ಎಲ್ ಆರ್ ಈಶ್ವರಿ) ರಾಜಶ್ರೀಗೆ ಬಾಲಕೃಷ್ಣ ಕೆಣಕುವ ಮೊದಲು, ಚೆನ್ನಿ ಹನುಮರ ಬಳ್ಳಿ ಹಂಗೆ ಬಳುಕುತಲಿ (ಜಾನಕಿ ಮತ್ತು ಪಿಬಿಎಸ್), ಜೈಲಿನಲ್ಲಿ ರಾಜ್ ಈ ನೀತಿ ಈ ನ್ಯಾಯ (ಪಿಬಿಎಸ್) ಮತ್ತು ಚೆನ್ನಿಗೆ ನಮ್ಮ ಮನೆಯ ನಂದನ ಇದುವೇ ಬೃಂದಾವನ (ಜಾನಕಿ).
ಶಿವನಂಜೇಗೌಡನಾಗಿ ಇಡೀ ಸಿನಿಮಾವನ್ನು ಆವರಿಸುತ್ತಾರೆ ಉದಯಕುಮಾರ್. ರಾಜ್ ಪ್ರೇಮ, ಕೋಪ, ದುಃಖ ಎಲ್ಲವೂ ಚೆನ್ನ. ಜಯಂತಿ ಬಲು ಫಳಫಳವಾಗಿ ಕಾಣುತ್ತಾರೆ. ದುಷ್ಟರು ನಿಜಕ್ಕೂ ನಿಜವಾಗಿಯೂ ದುಷ್ಟರಂತೆಯೇ ಇದ್ದಾರೆ.
ಬಹಳ ದಿನಗಳ ನಂತರ ಸಿನಿಮಾ ನೋಡಿದ ನಂತರವೂ ಕಾಡಿದ ಚಿತ್ರವಿದು.
ಅಂದ ಹಾಗೆ 1964ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಚಿತ್ರ ಚಂದವಳ್ಳಿಯ ತೋಟ.