“ಚಲೋ” (ತೆಲುಗು)

chalo telugu

ಚಲೋ ಅಂದ್ರೆ ಹೊರಡು. ಎಲ್ಲಿಗೆ ಹೊರಡುವುದು? ಮತ್ತೆಲ್ಲಿಗೆ? ತಿರಪೂರಿಗೆ. ಅದು ಆಂಧ್ರ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಅರ್ಧ ಊರು ತೆಲುಗಿನವರದ್ದಾದರೆ, ಇನ್ನರ್ಧ ತಮಿಳರದ್ದು. ಇಡೀ ಊರನ್ನು ಎರಡೂ ಭಾಷಿಕರು ಹರಿದು ಹಂಚಿಕೊಂಡು ಇಬ್ಭಾಗ ಮಾಡಿಟ್ಟಿದ್ದಾರೆ. ಇವೆರೆಡೂ ಗಡಿಗಳ ನಡುವೆ ಹಸೀ ಹುಲ್ಲು ಹಾಕಿದರೂ ‘ಭಗ್’ ಅಂತ ಹತ್ಕೊಂಡು ಉರಿಯುತ್ತದೆ.

ಅಂತಹಾ ದ್ವಿಭಾಷಾ ಊರಿಗೆ ಬರುತ್ತಾನೆ ನಾಯಕ!!

ಅದು ಅವನಿಗೆ ಪನಿಷ್ಮೆಂಟು. ಚಿಕ್ಕಂದಿನಿಂದಲೂ ಆತ ಅತ್ತಾಗಲೆಲ್ಲ ಆತನ ತಂದೆ ಮತ್ತೊಬ್ಬರನ್ನು ದಂಡಿಸಿ ಇವನನ್ನು ನಗಿಸುತ್ತಿದ್ದರು. ದೊಡ್ಡವನಾದ ಮೇಲೆಯೂ ಅದೇ ಮುಂದುವರೆಯಿತು. ದಿನನಿತ್ಯ ಏನಾದರೊಂದು ಜಗಳ, ಮಾರಾಮಾರಿ ಮಾಡಿಕೊಂಡು ಬರುತ್ತಿದ್ದ ಮಗನಿಗೆ ಪಾಠ ಕಲಿಸಲು ಆತನ ಪೋಷಕರು ಅವನನ್ನು ಈ ಊರಿಗೆ ಕಳಿಸುತ್ತಾರೆ.

ಈ ವಿಷಯ ಗೊತ್ತಿಲ್ಲದ ನಾಯಕ ಬಸ್ಸಿನಿಂದಿಳಿದು ಆ ಊರಿನ ತಪ್ಪಾದ ಭಾಗಕ್ಕೆ ಹೋಗಿ, ಹೇಗೋ ಜೀವ ಉಳಿಸಿಕೊಂಡು ಮತ್ತೊಂದು ಭಾಗಕ್ಕೆ ಜೀವಸಹಿತ ಬರುತ್ತಾನೆ. ಆದರೆ ಅವನ ಅಭ್ಯಾಸ ಬಲದಂತೆ ಅವರಿಬ್ಬರ ಜಗಳ-ಗಲಾಟೆ ನೋಡಿ ಖುಷಿಪಡುತ್ತಿರುತ್ತಾನೆ.

ಆದರೆ ಅಷ್ಟರಲ್ಲೇ ಆತನಿಗೆ ನಾಯಕಿ (ರಶ್ಮಿಕಾ ಮಂದಣ್ಣ) ಎದುರಾಗುತ್ತಾಳೆ..!!

ಅವಳು ಆ ಊರಿನ ವಿರುದ್ಧ ದಿಕ್ಕಿನವಳು. ಈ ದಿಕ್ಕಿನ ನಾಯಕ, ಆ ದಿಕ್ಕಿನ ಯುವತಿಯನ್ನು ಮದುವೆಯಾಗುವುದು ಕಷ್ಟ ಮಾತ್ರವಲ್ಲ… ಅದು ಅಸಾಧ್ಯ!! ಈಗ ಅವಳನ್ನು ಮದುವೆಯಾಗಬೇಕೆಂದರೆ ಆ ಊರಿನ ಎರಡೂ ಭಾಷಿಕರು ಒಂದಾಗಲೇಬೇಕು. ಹಾಗೆ ಅವರಿಬ್ಬರನ್ನೂ ಒಂದು ಮಾಡಬೇಕಾದ ಜವಾಬ್ದಾರಿ ನಾಯಕನದ್ದು.

ಈಗೇನು ಮಾಡುತ್ತಾನೆ ‌ನಾಯಕ?? ಆ ಊರಿನವರು ಒಂದಾದರೇ?? ಇವರನ್ನು ಮದುವೆಯಾಗಲು ಬಿಟ್ಟರೇ?? ಇದನ್ನು ಸಿನೆಮಾ ನೋಡಿ ತಿಳಿಯಬೇಕು‌. ಇಡೀ ಸಿನೆಮಾ ಹಾಸ್ಯಮಯವಾಗಿದೆ. ನಕ್ಕು ನಕ್ಕು ನಮಗೆ ಸುಸ್ತಾಗುತ್ತದೆ.

ಸಿನೆಮಾ (ಹಿಂದಿ ವರ್ಷನ್) ಯೂ ಟ್ಯೂಬಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply