ಚಿತ್ರರಂಗದ ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ಪಂಡರಿಬಾಯಿ

( ಮುಂದುವರೆದ ಭಾಗ )

೧೯೫೪ ರಲ್ಲಿ ಎಚ್.ಎಲ್.ಎನ್.ಸಿಂಹ ನಿರ್ದೇಶನದ ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜಕುಮಾರ್ ಅಭಿನಯದ ಮೊದಲ ಚಿತ್ರ  ಬೇಡರ ಕಣ್ಣಪ್ಪ ಚಿತ್ರದಲ್ಲಿಯು ನಾಯಕಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಈ ಚಿತ್ರವು ಕೂಡ ಜಯಭೇರಿ ಬಾರಿಸಿತು. ಇಲ್ಲಿಂದ ಆರಂಭವಾದ ಪಂಡರಿಬಾಯಿ ಯುಗ ಆರಂಭದ ೧೪ ವರ್ಷಗಳ ಕಾಲ ನಟಿಯಾಗಿ, ನಾಯಕಿಯಾಗಿ ವಿಜ್ರಂಭಿಸಿದ ಪಂಡರಿಬಾಯಿ ೧೯೫೭ ರಲ್ಲಿ  ಹೊಸದಾಗಿ ಆರಂಭಿಸಿದ ತಮ್ಮ ಪಾಂಡುರಂಗ ಪ್ರೊಡಕ್ಷನ್ ಅಡಿಯಲ್ಲಿ ರಾಯರ ಸೊಸೆ ಎಂಬ ಕನ್ನಡ ಚಿತ್ರವನ್ನು ಮೊದಲ ಬಾರಿಗೆ ನಿರ್ಮಾಣ ಮಾಡುವುದರ ಮೂಲಕ ನಿರ್ಮಾಪಕಿಯಾಗಿ ಬಡ್ತಿ ಪಡೆದರು. ಆದರೆ ಇವರ ನಿರ್ಮಾಣದ ಮೊದಲ ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಂಡರೂ ಹೀನಾಯ ಸೋಲನ್ನು ಅನುಭವಿಸಿತು. ಅನಂತರ ಕೂಡ ತಮ್ಮ ಪಾಂಡುರಂಗ ಪ್ರೊಡಕ್ಷನ್ ನಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.

 ೧೯೫೯ ರಲ್ಲಿ ಅಬ್ಬಾ ಆ ಹುಡುಗಿ, ಅನ್ನಪೂರ್ಣ ಇತ್ಯಾದಿ ಹೀಗೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆ ಸೇರಿ ಸುಮಾರು ೧೫೦೦ ಚಿತ್ರಗಳಲ್ಲಿ ನಟಿಸಿರುವ ಇವರ ಪ್ರತಿಭೆಯ ಸಾಮರ್ಥ್ಯ ಹೇಗಿತ್ತು ನೀವೇ ಆಲೋಚಿಸಿ. ಆದರೆ ಈ ತಾಯಿ ಮಾತೃ ಸ್ವರೂಪಿ ಮಾತ್ರವಲ್ಲ ತ್ಯಾಗ ಮಯಿ ಕೂಡ ಆಗಿದ್ದರು. ತಮ್ಮ ಖಾಸಗಿ ಜೀವನವನ್ನು ತಮ್ಮ ಸಹೋದರ, ಸಹೋದರಿ ಮತ್ತು ಅವರ ಮಕ್ಕಳ ಪಾಲನೆ ಪೋಷಣೆಗೆ ಮೀಸಲಿಟ್ಟು ೫೦ ನೇ ವರ್ಷದವರೆಗೂ ಏಕಾಂಗಿಯಾಗಿ ಬದುಕಿದರು. ೫೦-೬೦ ರ ದಶಕದಲ್ಲಿ ಚಿತ್ರ ರಂಗದಲ್ಲಿ ತಾಯಿಯ ಪಾತ್ರ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ನಟಿ ಪಂಡರಿಬಾಯಿ. ಕಾರಣ ತಾಯಿಯ ಪಾತ್ರಕ್ಕೆ ಇವರ ರೀತಿಯಲ್ಲಿ ನಟಿಸಲು ಬರುತ್ತಿರಲಿಲ್ಲ. ಎನ್.ಟಿ.ರಾಮರಾವ್, ಶಿವಾಜಿ ಗಣೇಶನ್,ಎಮ್.ಜಿ.ಆರ್,ಡಾ.ರಾಜಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ನಂತಹ ನಟರಿಗೆ ತಾಯಿಯ ಪಾತ್ರವನ್ನು ನಿರ್ವಹಿಸಿದ ಖ್ಯಾತಿ ಇಂದಿಗೂ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ.

ವರ್ಷಗಳು ಕಳೆದಂತೆ ಚಿತ್ರ ರಂಗದಲ್ಲಿ ತಾಯಿಯ ಮತ್ತು ಸೆಂಟಿಮೆಂಟ್ ಪಾತ್ರಗಳು ಕಡಿಮೆಯಾಗುತ್ತ ಬಂದಿದ್ದರೂ ಆಗಲೇ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದರು. ತಮ್ಮ ೫೦ ನೇ ವಯಸ್ಸಿನಲ್ಲಿ ಡಾ.ಪಿ.ಎಚ್.ರಾಮರಾವ್ ಅವರನ್ನು ವಿವಾಹವಾದರು. ಆದರೆ ಈ ದಂಪತಿಗಳಿಗೆ ಮಕ್ಕಳಿಲ್ಲ. ದುರಾದೃಷ್ಟವೋ ತಿಳಿಯದು ೧೯೯೪ ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ಎಡಗೈಯನ್ನು ಕಳೆದುಕೊಂಡರು. ತಮ್ಮ ಚಿತ್ರಗಳಲ್ಲಿ  ತಾಯಿಯ ಪಾತ್ರಗಳನ್ನು ಹೆಚ್ಚು ನಿರ್ವಹಿಸಿದ್ದ ಇವರು ತಮ್ಮ ಸಹೋದರಿ ಮೈನಾವತಿ ನಿರ್ಮಾಣದ ಕನ್ನಡ ಮೆಗಾ ಧಾರಾವಾಹಿ ಮನೆತನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.

 ಇದೇ ಧಾರಾವಾಹಿಯಲ್ಲಿ ನಟ ಕಲ್ಯಾಣ್ ಕುಮಾರ್ ಕೂಡ ನಟಿಸಿದ್ದರು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ವೈಜಯಂತಿ ಮಾಲಾಬಾರಿ ಎಂಬ ನಟಿಯನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರದಾಗಿದ್ದು ಬಾಹರ್ ಎಂಬ ಹಿಂದಿ ಚಿತ್ರದಲ್ಲಿಯೂ ನಟಿಸಿದ್ದರು. ಪಂಡರಾಪುರದ ಪಾಂಡುರಂಗನ ಭಕ್ತರಾಗಿದ್ದ ಇವರು ಚೆನೈನ ವಡಪಳನಿಯ ತಮ್ಮ ಮನೆಯ ಕಾಂಪೌಂಡ್ ಒಳಗೆಡೆ ಪಾಂಡುರಂಗನ ದೇವಸ್ಥಾನವನ್ನು ಕಟ್ಟಿಸಿ ತಮ್ಮ ದಿನದ ಬಹುಪಾಲು ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು.

ತಾಯಿಯ ಪಾತ್ರದ ಮೂಲಕ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವ ಇವರಿಗೆ ರಸ್ತೆ ಅಪಘಾತದ ನಂತರ ಆರೋಗ್ಯವು ಹದೆಗೆಡಲು ಆರಂಭಿಸಿತು. ಅಲ್ಲದೆ ಆರ್ಥಿಕ ಸ್ಥಿತಿ ಕೂಡ ಹದೆಗಟ್ಟಿತ್ತು. ಅಪಾರ ಪ್ರಮಾಣದ ಅಭಿಮಾನಿಗಳನ್ನು ಮತ್ತು ಜನಪ್ರಿಯತೆಯನ್ನು ಪಡೆದಿದ್ದ ಇವರ ಕಡೆಯ ದಿನಗಳು ಕಷ್ಟಕರವಾಗಿದ್ದವು. ಇವರ ಕಷ್ಟದ ಸ್ಥಿತಿ ತಿಳಿದು ಅದೇ ಸಮಯದಲ್ಲಿ ಆಗಮಿಸಿದ ಅಂದಿನ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ತಮ್ಮ ಅಮ್ಮ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯವನ್ನು ಒದಗಿಸಿದರು.

 ಆದರೆ ಜನವರಿ ೨೯, ೨೦೦೩ ಚಿತ್ರ ರಂಗದ ಪಾಲಿಗೆ ಕರಾಳ ದಿನವಾಯಿತು. ಅದೇ ದಿನ ನಟಿ ಪಂಡರಿಬಾಯಿ ಚೆನೈ ನ ಅಪೊಲೋ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ನಿಧನರಾದರು. ತಾಯಿಯನ್ನು ಕಳೆದುಕೊಂಡ ಮಗು ಅನಾಥವಾದಂತೆ ಚಿತ್ರ ರಂಗ ಇವರ ನಿಧನದಿಂದ ಅಕ್ಷರಶಃ ಅನಾಥವಾಯಿತು.ಇವರ ನಿಧನದ ಸುದ್ದಿ ಕೇಳಿ ಚಿತ್ರ ರಂಗದ ಗಣ್ಯರು ಸೇರಿದಂತೆ ಪೂರ್ತಿ ಚಿತ್ರರಂಗವೇ ಶೋಕಸಾಗರದಲ್ಲಿ ಮುಳುಗಿತ್ತು. ನಂತರ ಇವರಿಗೆ ಕೊಟ್ಟ ಮಾತಿನಂತೆ ನಡೆದ ಇವರ ಪತಿ ಡಾ.ಪಿ.ಎಚ್.ರಾಮರಾವ್ ಚೆನೈನ ವಡಪಳನಿಯ ಜಾಗ ಮತ್ತು ಪಾಂಡುರಂಗ ದೇವಸ್ಥಾನದ ಜವಾಬ್ದಾರಿಯನ್ನು ಉಡುಪಿಯ ಪೇಜಾವರ ಮಠಕ್ಕೆ ಹಸ್ತಾಂತರಿಸಿದ್ದರು. ಆದರೂ ೬೦ ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ತಾಯಿ ಪಂಡರಿಬಾಯಿ ಈ ಶತಮಾನದ ಮಾದರಿ ಹೆಣ್ಣು ಎನ್ನುವುದು ಅಷ್ಟೇ ಸತ್ಯವಾಗಿದೆ. ೭೦ ವರ್ಷಗಳಿಗೂ ಹೆಚ್ಚು ಕಾಲ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಪಂಡರಿಬಾಯಿಯ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಾಗಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪಂಡರಿಬಾಯಿಗೆ ಪಂಡರಿಬಾಯಿಯೇ ಸಾಟಿ ಹೊರತು ಇನ್ಯಾರು ಆಗಲು ಸಾಧ್ಯವಿಲ್ಲ. ಹೆಮ್ಮೆಯ ವಿಷಯವೇನೆಂದರೆ ಈ ಅಪ್ಪಟ ಕನ್ನಡ ಪ್ರತಿಭೆಯನ್ನು ಭಾರತದ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ  ನಮ್ಮ ಕರ್ನಾಟಕದಂತಹ ಅದೃಷ್ಟ ರಾಜ್ಯ ಮತ್ತೊಂದು ಇಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply