ಚಿತ್ರರಂಗದ ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ಪಂಡರಿಬಾಯಿ

ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಿತ್ರ ರಂಗ ಕಂಡ ಅಪರೂಪದ ಪ್ರತಿಭಾನ್ವಿತ ಕಲಾವಿದೆ ಪಂಡರೀಬಾಯಿ ನಿಜ ಜೀವನದಲ್ಲಿ ಕೂಡ ಮಾತೃ ಸ್ವರೂಪಿ. ಇವರು ತಮ್ಮ ೬೦ ವರ್ಷಗಳ ಚಿತ್ರ ರಂಗದ ಜೀವನದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆ ಸೇರಿ ಸುಮಾರು ೧೫೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರ ಪ್ರತಿಭೆಯ ಸಾಮರ್ಥ್ಯ, ಸಾಧನೆ ಎಷ್ಟು ಅಮೂಲ್ಯವಾದುದು ಎಂದು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.

            ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾದ ಪಂಡರಿಬಾಯಿ ೧೯೨೬ ನೇ ಇಸ್ವಿಯಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಮೊದಲ ಹೆಸರು ಗೀತಾ. ಇವರ ತಂದೆ ರಂಗಭೂಮಿ ಕಲಾವಿದರು,ನಟರು, ಚಿತ್ರ ಕಲೆ ಶಿಕ್ಷಕರು ಅಲ್ಲದೇ ಹರಿಕಥೆಯಲ್ಲಿ ಉತ್ತಮ ಹೆಸರನ್ನು ಗಳಿಸಿದ್ದರು. ಇವರ ಸಹೋದರಿ ಮೈನಾವತಿ ಕೂಡ ಹೆಸರಾಂತ ಕಲಾವಿದರು ಕೂಡ ಆಗಿದ್ದರು. ಇವರಿಗೆ ಕಲೆ ಎನ್ನುವುದು ರಕ್ತಗತವಾಗಿ ಒಲಿದು ಬಂದ ವರ. ಅಲ್ಲದೇ ಇವರ ತಂದೆ ೮ ವರ್ಷದ ಚಿಕ್ಕ ಬಾಲಕಿಯಾಗಿದ್ದ ಪಂಡರಿಬಾಯಿಗೆ ಹರಿಕಥೆ ಹೇಳುವ ಕಲೆಯನ್ನು ಕಲಿಸಿದ್ದರು.

ಆದರೆ ಸೃಷ್ಟಿ ಕರ್ತ ಭಗವಂತನು ಇವರ ಕುರಿತು ಬರೆದಿದ್ದ ಲಿಖಿತವೇ ಬೇರೆಯಾಗಿತ್ತು. ಈ ಭಗವಂತನ ಯೋಜನೆಗಳೇ ವಿಚಿತ್ರವಾಗಿರುತ್ತವೆ. ಆದರೆ ಅಷ್ಟು ಬೇಗ ಯಾರಿಗೂ ಅರ್ಥವಾಗುವುದಿಲ್ಲ. ಇಂತಹುದೇ ಒಂದು ಘಟನೆ ಇವರ ಜೀವನದಲ್ಲಿ ನಡೆಯಿತು. ಸುಮಾರು ೮ ರಿಂದ ೯ ವರ್ಷದ ಚಿಕ್ಕ ಬಾಲಕಿಯಾಗಿದ್ದ ಪಂಡರಿಬಾಯಿ ಒಂದು ದಿನ ಮೈಸೂರಿನಲ್ಲಿ ಹರಿಕಥೆಯನ್ನು ಮಾಡುತ್ತಿದ್ದರು. ತುಂಬಿದ್ದ ಅಪಾರ ಜನಸ್ತೋಮ ಚಿಕ್ಕ ಬಾಲಕಿಯ ಆಕರ್ಷಣೀಯ ಹರಿಕಥೆಗೆ ಮನಸೋತಿದ್ದರು. ಅಂದು ಅಲ್ಲಿಯೇ ಇದ್ದ ಅಂದಿನ ದಂತ ಕಥೆ, ದೈತ್ಯ ಪ್ರತಿಭೆ ವಿದ್ವಾಂಸ ಪಿಟೀಲು ಚೌಡಯ್ಯನವರಿಗೆ ಇವರ ಹರಿಕಥೆ ಯಾವ ರೀತಿ ಮೋಡಿ ಮಾಡಿತ್ತೆಂದರೆ ಇವರಿಗಾಗಿ ಚಿತ್ರ ನಿರ್ಮಾಣ ಮಾಡಿ ಅವಕಾಶ ಕೊಡಲು ನಿರ್ಧರಿಸಿದ್ದರು.

ಈ ಪಿಟೀಲು ಚೌಡಯ್ಯನವರ ನಿರ್ಧಾರ ಬಾಲಕಿ ಪಂಡರಿಬಾಯಿಗೆ ಇದ್ದ ಪ್ರತಿಭೆಯೇ ಸಾಕ್ಷಿ. ಇಲ್ಲೇ ಇವರ ಬದುಕು ಮಹತ್ತರ ತಿರುವನ್ನು ಪಡೆಯಿತು. ನುಡಿದಂತೆ ನಡೆದ ಪಿಟೀಲು ಚೌಡಯ್ಯನವರು ೧೯೪೩ ರಲ್ಲಿ ನಿರ್ಮಿಸಿದ ಕೆ.ಹಿರಣ್ಣಯ್ಯ ಮತ್ತು ಎಮ್.ಎನ್.ಗೋಪಾಲ್ ಜಂಟಿ ನಿರ್ದೇಶನದಲ್ಲಿ ಮೂಡಿ ಬಂದ ವಾಣಿ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರ ರಂಗ ಪ್ರವೇಶಿಸಿದರು. ಆಗ ಇವರ ವಯಸ್ಸು ಕೇವಲ ೧೩ ವರ್ಷ.

 ಬಳ್ಳಾರಿಯ ಲಲಿತಾ, ಬಳ್ಳಾರಿ ರತ್ನಮಾಲಾ ಮತ್ತು ಮುಸುರಿ ಕೃಷ್ಣಮೂರ್ತಿಯಂತಹ ನಟರು ನಟಿಸಿದ್ದರೂ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿತು. ಆದರೂ ಅದೃಷ್ಟ ವೆಂಬಂತೆ ೧೯೪೪ ರಲ್ಲಿ ಸುಂದರ್ ರಾವ್ ನಿರ್ದೇಶನದಲ್ಲಿ ಬಂದ ತಮಿಳು ಚಿತ್ರ ಶ್ರುತಿ ಹರಿದಾಸದಲ್ಲಿ ನಟಿಸುವ ಮೂಲಕ ತಮಿಳು ಚಿತ್ರ ರಂಗವನ್ನು ಕೂಡ ಪ್ರವೇಶಿಸಿದರು. ಎಮ್.ಕೆ.ತ್ಯಾಗರಾಜ್,ಭಾಗವತರ್, ಟಿ.ಆರ್.ರಾಜಕುಮಾರಿ ಮತ್ತು ಎನ್.ಸಿ.ವಸಂತ ಕೋಕಿಲರಂತಹ ನಟರ ಜೊತೆ ನಟಿಸಿದ್ದ ಈ ಚಿತ್ರ ತಮಿಳು ನಾಡಿನ ಒಂದೇ ಚಿತ್ರಮಂದಿರದಲ್ಲಿ ಸತತ ೧೧೦ ವಾರಗಳ ಕಾಲ ಪ್ರದರ್ಶನ ಕಂಡು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೆ ಆ ಕಾಲದಲ್ಲಿ ಇತಿಹಾಸವನ್ನು ನಿರ್ಮಿಸಿತ್ತು.

ಈ ಚಿತ್ರದ ಮೂಲಕವೇ ನಟಿ ಪಂಡರಿಬಾಯಿ ಮೊದಲ ಬಾರಿಗೆ ಗೆಲುವಿನ ಖಾತೆಯನ್ನು ತೆರೆದರು. ೧೯೪೮ ರಲ್ಲಿ ಎ.ವಿ.ಮೇಯಪ್ಪನ್ ನಿರ್ಮಿಸಿ ನಿರ್ದೇಶಿಸಿದ ವೇತಾಳ ಉಳಗಂ ಎಂಬ ತಮಿಳು ಚಿತ್ರದಲ್ಲಿ ಕಾಳಿದೇವಿಯ ಪಾತ್ರವನ್ನು ನಿರ್ವಹಿಸಿದ್ದರು. ೧೯೪೯ ರಲ್ಲಿ ಪಂಡರಾಪುರದ ಪಾಂಡುರಂಗನ ಭಕ್ತನಾಗಿದ್ದ ಗೋರಾ ಕುರಿತು ತಯಾರಾದ ಗೋರಾ ಕುಂಬಾರ ಕನ್ನಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.ಈ ಚಿತ್ರವು ಕೂಡ ಜಯಭೇರಿ ಬಾರಿಸಿತು. ಪುನಃ ೧೯೭೪ ರಲ್ಲಿ ಕನ್ನಡದಲ್ಲಿ ಡಾ.ರಾಜಕುಮಾರ, ಲೀಲಾವತಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಭಕ್ತ ಕುಂಬಾರ, ಅನಂತರ ೧೯೭೭ ರಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಅಭಿನಯದಲ್ಲಿ ಬಂದ ತೆಲುಗು ಚಿತ್ರ ಚಕ್ರಧಾರೆ ಹೆಸರಿನಲ್ಲಿ ತೆರೆ ಕಂಡಿತ್ತು.

೧೯೫೦ ರಲ್ಲಿ ಎ.ವಿ.ಎಮ್. ಸ್ಟುಡಿಯೋ ನಿರ್ಮಿಸಿದ ರಾಜಾ ವಿಕ್ರಮ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು. ೧೯೫೨ ರಲ್ಲಿ ಎಮ್.ಕರುಣಾನಿಧಿ ರಚಿಸಿದ ಚಿತ್ರ ಕಥೆ, ಕೃಷ್ಣ – ಪಂಜು ನಿರ್ದೇಶನದಲ್ಲಿ ನಟ ಶಿವಾಜಿ ಗಣೇಶನ್,ಎಸ್.ವಿ.ಸಹಸ್ರನಾಮಂ,ಎಸ್.ಎಸ್.ರಾಜೇಂದ್ರನ್ ಮತ್ತು ಪಂಡರಿಬಾಯಿ ನಟಿಸಿದ  ಇನ್ನೊಂದು ತಮಿಳು ಚಿತ್ರ ಪರಾಶಕ್ತಿ ತೆರೆ ಕಂಡು ಯಶಸ್ಸು ಪಡೆಯಿತಲ್ಲದೆ ಪಂಡರಿಬಾಯಿಯ ಜನಪ್ರಿಯತೆ ಉನ್ನತ ಮಟ್ಟಕ್ಕೆ ಏರಿತು, ಮತ್ತು ಈ ಚಿತ್ರವು ರಜತಮಹೋತ್ಸವವನ್ನು ಆಚರಿಸಿತು. ನಂತರ ತಮಿಳಿನ ಏಕಥಾ ರಾಜಾ,ಮರ್ಮಯೋಗಿ ತೆಲುಗಿನಲ್ಲಿ ಗುಮಾಸ್ತ, ಗುಣಸಾಗರಿ, ಪೊಂಗೋತಾಯ್, ತಿರುಂಬಿಪಾರ್, ಅಂಧನಾಳ್ ಇವರು ನಟಿಸಿದ ಚಿತ್ರಗಳೆಲ್ಲ ವೂ ಜಯಭೇರಿ ಗಳಿಸಿದ್ದವು. ಸತತ ೧೦ ವರ್ಷಗಳ ಕಾಲ ತಮಿಳು ಚಿತ್ರ ರಂಗವನ್ನಾಳಿದ್ದ ಪಂಡರಿಬಾಯಿ ೧೯೫೪ ರಲ್ಲಿ ಎಚ್.ಎಲ್.ಎನ್.ಸಿಂಹ ನಿರ್ದೇಶನದ ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜಕುಮಾರ್ ಅಭಿನಯದ ಮೊದಲ ಚಿತ್ರ  ಬೇಡರ ಕಣ್ಣಪ್ಪ ಚಿತ್ರದಲ್ಲಿಯು ನಾಯಕಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಈ ಚಿತ್ರವು ಕೂಡ ಜಯಭೇರಿ ಬಾರಿಸಿತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply