ಈ ಅಣ್ಣ ಸೀರೀಸ್ ಸಿನಿಮಾಗಳನ್ನು ಇಬ್ಬರು ಮಾಡಿದರು. ಪಂತುಲು ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ (ಇದರಲ್ಲಿ ರಾಜ್ ಇಲ್ಲ). ಹಾಗೆಯೇ ಆರ್. ರಾಮಮೂರ್ತಿಯವರು ರೌಡಿ ರಂಗಣ್ಣ, ಚೂರಿ ಚಿಕ್ಕಣ್ಣ, ಸಿಐಡಿ ರಾಜಣ್ಣ…
ಚೂರಿ ಚಿಕ್ಕಣ್ಣ ಈ ಸೀರೀಸ್‍ನ ಎರಡನೆಯ ಚಿತ್ರ. ಚೂರಿ ಹಿಡಿದ ಗುಂಗುರು ತಲೆಕೂದಲು ಉಳ್ಳ ಚಿಕ್ಕಣ್ಣನಂತೆ ನಮಗೆ ಮೊದಲು ಪರಿಚಯವಾಗುವ ರಾಜ್, ವೇಷಧಾರಿ ದಿನೇಶ್‍ನನ್ನು ಬೆನ್ನತ್ತುತ್ತಾರೆ. ದಿನೇಶ್ ಚಿಕ್ಕಣ್ಣನನ್ನು ಸೇತುವೆಯಿಂದ ಕೆಳಕ್ಕೆ ತಳ್ಳಿ ಮೇಲೆ ಒಂದು ಬಂಡೆ ಎತ್ತಿಹಾಕುವುದರೊಂದಿಗೆ ಟೈಟಲ್ಲುಗಳು ಶುರುವಾಗ್ತವೆ.
ಜಯಂತಿ ಮತ್ತು ಜಯಕುಮಾರಿ ಇಬ್ಬರೂ ಗೆಳತಿಯರು. ಅವರು ಕಾರಲ್ಲಿ ಬರುತ್ತಾ ‘ಸೈಕಲ್ ಮೇಲೆ ಬಂದ ನಮ್ಮ ಮೈನರ್’ ಎಂದು ಸೈಕಲ್ ಮೇಲೆ ಬಂದ ಭಾಸ್ಕರನನ್ನು (ರಾಜ್‍ಕುಮಾರ್) ರೇಗಿಸುತ್ತಾರೆ. ನಂತರ ಭಾಸ್ಕರ ‘ಕಾರನೇರಿ ಬಂದ ನಮ್ಮ ಮೇಡಂ’ ಎಂದು ಹಾಡುತ್ತಾನೆ. ಬಾಡಿಗೆ ರೌಡಿಗಳನ್ನು ಫೈಟ್ ಮಾಡಿ ಜಯಂತಿಯ ಹೃದಯ ಗೆಲ್ಲುತ್ತಾನೆ ಭಾಸ್ಕರ.
ಜಯಕುಮಾರಿಯ ತಂದೆಯ ಮಡಿಕೇರಿ ಎಸ್ಟೇಟಿನಲ್ಲಿ ಮ್ಯಾನೇಜರ್ ಕೆಲಸಕ್ಕೆ ಬಂದು ಅನೇಕ ಸಲ ಪ್ರಾಣಾಪಾಯದಿಂದ ಪಾರಾಗುತ್ತಾನೆ. ಇವನಿಗೆ ಸಹಾಯ ಮಾಡಲು ಬಿ.ವಿ.ರಾಧ ಮತ್ತು ಒಂದು ಚಿಂಪಾಂಜಿ.
ನರಸಿಂಹರಾಜುವಿಗೆ ಕನ್ನಡಕ ಇಲ್ಲದಿದ್ದರೆ ಕಣ್ಣೇ ಕಾಣುವುದಿಲ್ಲ. ಅದು ಕೆಲವು ಕಾಮಿಡಿ ದೃಶ್ಯಗಳನ್ನು ಸೃಷ್ಟಿಸಿದೆ. .
ವಿಜಯಲಲಿತಾ ‘ಮಾದಯ್ಯಾ ಬಂದೆಯಾ ಕುಶಲವೇ ಹೇಳಯ್ಯ’ ಎಂದು ಎಲ್ ಆರ್ ಈಶ್ವರಿ ಧ್ವನಿಯಲ್ಲಿ ಕುಣಿದು ಹಾಡುತ್ತಾರೆ ಅಥವಾ ಹಾಡಿ ಕುಣಿಯುತ್ತಾರೆ.
‘ಮೆಲ್ಲಗೆ ನಡೆ ಮೆಲ್ಲಗೆ ಈ ಕೋಪವೇಕೆ ಚಿನ್ನ’ ಒಂದು ಜನಪ್ರಿಯ ಹಾಡು ಇಂದಿಗೂ.
ವಿಶೇಷವಾದ ಹಾಡೆಂದರೆ ‘ನೀ ಮೊದಲು ಮೊದಲು ನನ್ನ ನೋಡಿದಾಗ’. ಇದರಲ್ಲಿನ ಎಸ್‍ಪಿಬಿ ಅವರ ಧ್ವನಿಗೆ ರಾಜ್ ಮತ್ತು ಬೆಂಗಳೂರು ಲತಾ ಧ್ವನಿಗೆ ಜಯಂತಿ ಮೂಕಾಭಿನಯ ಮಾಡುತ್ತಾರೆ. ರಾಜ್ ಜಯಂತಿಯ ರೂಮಿನಲ್ಲಿ ಸಿಕ್ಕಿಕೊಂಡು ದಿನೇಶನಿಗೆ ಚಳ್ಳೆಹಣ್ಣು ತಿನ್ನಿಸಲು ರೇಡಿಯೋ ಉದ್ಘೋಷಕನ ಧ್ವನಿ ಮಾಡುವುದು ಕೇಳಲು ಚೆನ್ನ.
ರಾಜ್‍ಕುಮಾರ್ ಕಳ್ಳನಾಗಿ, ನರಸಿಂಹರಾಜು ಸದಾರಮೆಯಾಗಿ ‘ಕೇಳೆ ಕೇಳೆ ನನ್ನ ಕಥೆ ಹೇಳುವೆ’ ನಗಿಸುತ್ತದೆ.
ದಿನೇಶ್ ಮತ್ತು ರಾಜ್ ಇಬ್ಬರ ನಡುವಣ ಘರ್ಷಣೆ, ಅವರಿಬ್ಬರ ಸಂಭಾಷಣೆ ಬಹಳ ಚೆನ್ನಾಗಿದೆ.
ಮನರಂಜನೆಗೆ ಮೋಸವಿಲ್ಲದ ಚಂದದ ಚಿತ್ರ ಚೂರಿ ಚಿಕ್ಕಣ್ಣ.
ಲೇಖಕರು: ಯತಿರಾಜ್ ವೀರಾಂಬುಧಿ