ಜಗ ಮೆಚ್ಚಿದ ಮಗ

ಮಹಾರಾಜ ಕೆ ಎಸ್ ಅಶ್ವತ್ಥ್ ಜ್ಯೋತಿಷ್ಯ ಬಲ್ಲ ಹಿತ್ತಾಳೆ ಕಿವಿಯ ರಾಜ. ಆತನ ಬಳಿ ಒಂದು ಖಡ್ಗ ಇರುತ್ತದೆ. ಅದನ್ನು ಒಂದೆಡೆ ಗೋಡೆಯಲ್ಲಿ ಸಿಗಿಸಿ ಕೇವಲ ತನ್ನ ಮಗ ಅದೂ ನ್ಯಾಯವಾಗಿದ್ದರೆ ಮಾತ್ರ ಹೊರಗೆಳೆಯಬಹುದು ಎಂದಿರುತ್ತಾನೆ.

ಜ್ಯೋತಿಷ್ಯದ ಪ್ರಕಾರ ತನಗೆ ಹೆಣ್ಣು ಮಗು ಎಂದುಕೊಂಡಾಗ ಆದಿತ್ಯ (ರಾಜ್‍ಕುಮಾರ್) ಎಂಬ ಗಂಡು ಮಗು ಆಗುತ್ತದೆ. ಅಣ್ಣನ ಸಿಂಹಾಸನದ ಮೇಲೆ ಕಣ್ಣು ಇಟ್ಟಿರುವ ತಮ್ಮನ (ಎಂ ಪಿ ಶಂಕರ್) ಮಾತುಗಳಿಗೆ ಕಿವಿಗೊಟ್ಟು ತನ್ನ ಪತ್ನಿಗೂ (ಎಂ ವಿ ರಾಜಮ್ಮ) ತನ್ನ ಸುಬುದ್ಧಿಯ ಮಂತ್ರಿಗೂ ಹುಟ್ಟಿದ ಅನೈತಿಕ ಮಗ ಎಂದು ನಂಬಿ ಮಂತ್ರಿಯನ್ನು ಜೈಲಿಗೆ ಹೆಂಡತಿ ಮತ್ತು ಅವಳ ಮಗನನ್ನು ಕಾಡಿಗೆ ಅಟ್ಟುತ್ತಾನೆ. ಗುರುವೊಬ್ಬ ಆದಿತ್ಯನಿಗೆ 64 ವಿದ್ಯೆಗಳನ್ನೂ ಕಳಿಸುತ್ತಾನೆ.

ಮಹಾರಾಜ ತನ್ನ ತಂಗಿಯ ಮಗಳು ಯಾಮಿನಿಯನ್ನು (ಬೆಡಗಿನ ನಟಿ ಭಾರತಿ) ಕರೆಸುತ್ತಾನೆ. ಹೇಗೆ ದುಷ್ಟಕೂಟವನ್ನು ಆದಿತ್ಯ ಸದೆಬಡಿದು ಅಮ್ಮನ ಕಳಂಕ ಅಳಿಸಿ, ಅಪ್ಪನಿಗೆ ನಂಬಿಕೆ ಉಂಟು ಮಾಡಿ… ಇದು ಕಥೆ.


ಒಳಗಿನ ಆಸೆ… ಪಿಬಿಎಸ್ ಹಾಡು ನೆನಪಿದ್ದ ಹಾಡು. ಎಲ್ ಆರ್ ಈಶ್ವರಿ ಹಾಡಿರುವ ಏರಿ ಮೇಲೆ ಏರಿ ಹಾಡಲ್ಲಿ ಎಸ್ ಪಿಬಿ ಛದ್ಮವೇಷದ ಅಣ್ಣಾವ್ರಿಗೆ ವಾಯ್ಸ್ ಕೊಟ್ಟಿದ್ದಾರೆ.
ನರಸಿಂಹರಾಜು, ಬಿ ಜಯಾ, ಶಕ್ತಿಪ್ರಸಾದ್, ರಾಮಚಂದ್ರ ಶಾಸ್ತ್ರಿ ಗುರುತಿಸಲ್ಪಟ್ಟ ಮುಖಗಳು.

ಅಣ್ಣಾವ್ರು ಲೀಲಾಜಾಲವಾಗಿ ಕತ್ತಿ ಫೈಟು, ಕೈ ಕೈ ಫೈಟು ಮಾಡಿದ್ದಾರೆ. ಬಹದ್ದೂರ್ ಗಂಡು ನೆನಪಿಸುವ ವೇಷ. ಥೈಥೈ ಎಂದು ಕುಣಿದು ಹಾಡಿ ಭಾರತಿಯಿಂದ ಕತ್ತಿ ಚುಚ್ಚುವಿಕೆ ತಪ್ಪಿಸಿಕೊಳ್ಳುವ ಹಾಡು ನೋಡಲು ಚಂದ. ಸೈರಂಧ್ರಿಯಂತೆ ವೇಷ ಧರಿಸಿದ ಭೀಮನನ್ನು ನೆನಪಿಸುವ ದೃಶ್ಯ ಇದೆ. ಲಂಗ ದಾವಣಿ ರವಿಕೆಯಲ್ಲಿ ವಸ್ತ್ರಾಪಹರಣಕ್ಕೆ ಒಳಗಾಗಿ ಕುಡುಕ ಎಂ ಪಿ ಶಂಕರನನ್ನು ಆಟವಾಡಿಸೋ ದೃಶ್ಯವನ್ನು ಅವರೂ ಎಂಜಾಯ್ ಮಾಡಿ ನಟಿಸಿದ್ದಾರೆ. ನಮಗೂ ಮಜಾ ಕೊಡುವ ದೃಶ್ಯ.

ಅಮ್ಮನ ಸೆಂಟಿಮೆಂಟ್ಸ್ ಇವೆ. ಕಬ್ಬಿಣದ ಸರಪಳಿ ಕಿತ್ತು ಆದಿತ್ಯ ಬಂಧಮುಕ್ತ ಆಗುವ ದೃಶ್ಯ ಇದೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply