ಒಂದು ವಿಶಿಷ್ಟ ಪಾತ್ರದಲ್ಲಿ ಅಶ್ವತ್ಥ್. ಜೂಜಿನಲ್ಲಿ ಹೆಂಡತಿ(ಪಂಢರಿಬಾಯಿ)ಯನ್ನೇ ಮಾರಿರುತ್ತಾನೆ ರಾಮನಾಥ್(ಕೆ. ಎಸ್. ಅಶ್ವತ್ಥ್). ಮಾನ ಉಳಿಸಿಕೊಳ್ಳಲು ಆರು ತಿಂಗಳ ಮಗುವಿನ ಸಹಿತ ನೀರಿಗೆ ಹಾರಿದ ಆಕೆಗೆ ಮೂರೂವರೆ ವರ್ಷ ಶಿಕ್ಷೆ. ಜಡ್ಜ್ ಕೈಗೇ ಮಗುವನ್ನು ಒಪ್ಪಿಸುತ್ತಾಳೆ. ದೂರದಿಂದ ಅವನ ಅಭಿವೃದ್ಧಿ ನೋಡಿ ಸಂತಸ ಪಡುತ್ತಾಳೆ. ಜಡ್ಜ್‍ನ ಹೆಂಡತಿ ಆದವಾನಿ ಲಕ್ಷ್ಮೀದೇವಿ. ಕುಮಾರ್ (ರಾಜ್‍ಕುಮಾರ್) ಆಕೆಯ ಮಗನಾಗಿ ಬೆಳೆಯುತ್ತಾನೆ. ಮತ್ತೊಬ್ಬ ಮಗ ಮನು (ದಿನೇಶ್) ಕೂಡ ಜನಿಸುತ್ತಾನೆ.
ಶಾಂತಿ(ಭಾರತಿ)ಯನ್ನು ಒಮ್ಮೆ ಕಾಪಾಡಿದ ಕುಮಾರ್ ಆಕೆಯನ್ನು ಮದುವೆ ಆಗುತ್ತಾನೆ. ಶಾಂತಿಗೆ ತನ್ನ ಮೈದುನ ಮನುವೇ ದಾಡಿ ಮುಖವಾಡದ ಬಾಸ್ ಎಂದು ತಿಳಿಯುತ್ತದೆ. ಅವಳಿಗೆ ಅನುಮಾನ ಬರುವ ಹಾಗೆ ಮನು ನಡೆದುಕೊಳ್ಳುತ್ತಾನೆ. ಅವಳು ತನ್ನ ಪತಿಗೆ ಹೇಳಲಾರಳು. ಹೇಳದೇ ಇರಲಾರಳು. ಇಂತಹ ಸಂದರ್ಭದಲ್ಲಿ ಕುಮಾರ್‍ಗೆ ತನ್ನ ನಿಜವಾದ ತಾಯಿ ತಂದೆಯರು ಯಾರೆಂಬ ರಹಸ್ಯ ತಿಳಿಯುತ್ತದೆ.
ಮನಸ್ಸಿದ್ದರೆ ಮಾರ್ಗದಲ್ಲಿ ಅಣ್ಣನಾಗಿ ತಮ್ಮನಿಂದ ಕೋಳ ತೊಡಿಸಿಕೊಳ್ಳುವ ರಾಜ್, ಇಲ್ಲಿ ಅಣ್ಣನಾಗಿ ತಮ್ಮನಿಗೆ ಕೋಳ ತೊಡಿಸುತ್ತಾರೆ.
ಜಾನಕಿಯಮ್ಮ ಮಗುವಿನ ದನಿಯಲ್ಲಿ ಹಾಡಿರುವ ಕಾವೇರಿ ತೀರದಲ್ಲಿ ಒಂದು ಕಾಡು, ರಾಜ್‍ರ ಅನೇಕ ಸಿನಿಮಾಗಳ ಹೆಸರು ಹೇಳುವ ಸೊಗಸುಗಾರ ಶಾಮಣ್ಣ, ಪಿಬಿಎಸ್ ಎಸ್‍ಜಾನಕಿ ಬೀಸೋ ಗಾಳಿಯಲೆ ಹರಿವ ನೀರ ಅಲೆ, ಎಲ್ ಆರ್ ಈಶ್ವರಿ ಹಾಡು ‘ದುಮ್ಮಾನವೆಲ್ಲ ಏಕೆ ಎಲ್ಲ ಬಲ್ಲೆ’ ಜ್ಯೋತಿಲಕ್ಷ್ಮಿಯವರ ವಿಶಿಷ್ಟ ಕ್ಯಾಬರೆಗೆ. ದ್ವಾರಕೀಶ್ ಕಾಮಿಡಿ ಇದೆ. ಆದರೆ ಮುಖ್ಯ ಕಥೆಗೆ ಸಹಾಯಕವಾಗಿದೆ.
ಒಟ್ಟಿನಲ್ಲಿ ಪಕ್ಕಾ ಮನರಂಜನೆ. ಬೋರ್ ಎನ್ನುವ ಕ್ಷಣಗಳು ಇಲ್ಲವೇ ಇಲ್ಲವೆನ್ನಬಹುದು.
ಲೇಖಕರು: ಯತಿರಾಜ್ ವೀರಾಂಬುಧಿ