ಮನುಷ್ಯನ ಅದೃಷ್ಟದ ವ್ಯಾಪ್ತಿ ಮತ್ತು ಅವನಿಗೆ ಆಗುವ ಪ್ರಾಪ್ತಿಯ ಬಗ್ಗೆ ಈ ಚಿತ್ರ.
1972ರಲ್ಲಿ ಯುವಕ ರಾಜೀವ ಪಶ್ಚಿಮದ ಸೂರ್ಯನತ್ತ ನಡೆದಂತೆ 20 ವರ್ಷಗಳ ನಂತರ ಪ್ರೌಢ ವಿಶ್ವನಾಥ ಪಡುವಣಕ್ಕೆ ನಡೆಯುವ ದೃಶ್ಯ. ಮತ್ತೆ ಕರುಳು ಕೊಯ್ಯುವ ಹಾಗಾಗುತ್ತದೆ. ಆದರೆ ಮನದಲ್ಲಿ ಧನ್ಯತಾಭಾವ ಬಂದಿದ್ದು ಅಚ್ಚರಿ ಎನ್ನಿಸಲಿಲ್ಲ.
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ‘ವ್ಯಾಪ್ತಿ ಪ್ರಾಪ್ತಿ’ ಕಾದಂಬರಿ ಆಧಾರಿತ ಚಿತ್ರ ದೊರೆ ಭಗವಾನ್ ನಿರ್ದೇಶನ, ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ 1992ರಲ್ಲಿ ಬಿಡುಗಡೆ ಆಗಿ ಒಂದು ವರ್ಷ ನಡೆದಿತ್ತು.
ಮಾಧವಿ, ಕೆ ಎಸ್ ಅಶ್ವತ್ಥ್, ಪಂಢರೀಬಾಯಿ, ತೂಗುದೀಪ ಶ್ರೀನಿವಾಸ್, ಎಂ ಎಸ್ ಉಮೇಶ್, ಸತ್ಯಭಾಮ, ಸುಂದರಶ್ರೀ, ಶಿವರಾಂ, ಪೃಥ್ವಿರಾಜ್, ಮನದೀಪ್ ರಾಯ್, ಅಶ್ವತ್ಥ ನಾರಾಯಣ ಒಂದು ಪೀಳಿಗೆಯಾದರೆ ಚಿ. ಗುರುದತ್, ಅಭಿಜಿತ್, ಬಾಲರಾಜ್, ಸುಧಾರಾಣಿ, ಶ್ರೀರಕ್ಷ, ಕಲಾ ಮುಂತಾದವರು ಇನ್ನೊಂದು ಪೀಳಿಗೆ.
ಟೆನಿಸ್ ಕೃಷ್ಣ ಕಳ್ಳತನ ಮಾಡಿ ಅಣ್ಣಾವ್ರಿಗೆ ಸಿಕ್ಕಿ ಅವರಿಂದ ಹಣ ಪಡೆದು ಗೌರವದಿಂದ ಬಾಳುವೆ ನಡೆಸಿ, ಅಣ್ಣಾವ್ರು ನೆನಪು ಮರಳಿ ಪಡೆಯಲು ಸಹಾಯವಾಗುವ ಪಾತ್ರ.
ಅಣ್ಣಾವ್ರ ಗತ್ತು ವಾಹ್… ಅದ್ಭುತ ಪಾತ್ರ ನಿರ್ವಹಣೆ. ರಾಜ್ಯ ಪ್ರಶಸ್ತಿ ಗೆದ್ದುಕೊಂಡರು. ತಂದೆ ತಾಯಿಯರಲ್ಲಿ ಭಕ್ತಿ, ಹೆಂಡತಿಯಲ್ಲಿ ಪ್ರೇಮ, ಮಕ್ಕಳಲ್ಲಿ ಮಮತೆ, ನ್ಯಾಯ ನಿಷ್ಠುರತೆ, ಅವರು ತಪ್ಪು ಮಾಡಿದಾಗ ಅವರನ್ನು ದೂರ ಮಾಡುವುದು, ಅನ್ಯಾಯ ಕಂಡಾಗ ಪ್ರತಿಭಟನೆ ಎಲ್ಲ ಚಂದ.
ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಅಣ್ಣಾವ್ರು ಅರಳಿದ ತನುವಿದು ಮತ್ತು ಕೆ ಎಸ್ ನ ಅವರ ನನ್ನವಳು ನನ್ನೆದೆಯ.. ಹೆಜ್ಜೆ ಹಾಕಿ ಕುಣಿಯಬೇಕೆನಿಸುವ ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ, ಮಂಜುಳಾ ಗುರುರಾಜ್ ಜೊತೆಗೆ ನಿನ್ನ ಚೆಲುವ ವದನ ಮತ್ತು ಸುಂದರ ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ಹಾಡಿದ್ದಾರೆ.
ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಮತ್ತು ಚಿ ಉದಯಶಂಕರ್ ಅತ್ಯುತ್ತಮ ಸಂಭಾಷಣೆಗೆ ಪ್ರಶಸ್ತಿ ಪಡೆದರು.
ಒಂದು ದೃಶ್ಯದಲ್ಲಿ ಅಣ್ಣಾವ್ರು ತಮ್ಮ ಮಕ್ಕಳನ್ನು ಅವರುಗಳ ತಪ್ಪಿಗೆ ಬೈದು ಮೆಟ್ಟಿಲು ಹತ್ತಿ ತನ್ನ ಗತಿಸಿದ ಪತ್ನಿಯ ಪಟದೊಂದಿಗೆ ಮಾತಾಡಿ ಮತ್ತೆ ಕೆಳಗಿಳಿದು ಬಂದು ಮಕ್ಕಳಿಗೆ ಬುದ್ಧಿ ಹೇಳುವ ದೃಶ್ಯ ಮೈ ಝುಮ್ ಎನಿಸುತ್ತದೆ. ಹಾಗೆಯೇ ಪಂಢರೀಬಾಯಿ ಮಗನ ತೋಳಿನಲ್ಲಿ ಪ್ರಾಣ ಬಿಡುವ ದೃಶ್ಯ ಕೂಡ ಅಮೋಘ.
ಹಿಮಾಲಯದಲ್ಲಿ ತೋಡಿ ರಾಗದ ಆಲಾಪನೆ ಮಾಡಿ ನಾದಮಯಾ ಹಾಡಿ ಕೊನೆಯಲ್ಲಿ ಹಂಸಾನಂದಿ ರಾಗದ ಸ್ವರ ಪ್ರಸ್ತಾರ ಆಹಾ… ಅಣ್ಣಾವ್ರಿಗೆ ಅತ್ಯುತ್ತಮ ಗಾಯಕ ಎಂಬ ರಾಷ್ಟ್ರ ಪ್ರಶಸ್ತಿ ಬಂದಿರುವುದು ಎಂತಹ ಖುಷಿ ಆಗುತ್ತೆ ಅಂತೀರಿ…