ಕನ್ನಡದ ಮೊದಲ ಬಾಂಡ್ ಚಿತ್ರ. ರಾಜ್ ಕುಮಾರ್ ಈ ಚಿತ್ರದಲ್ಲಿ ಪ್ರಕಾಶ್. ಆತನ ನಂಬರ್ ಸಿ. ಐ. ಡಿ. 999. ಬೇಬಿ (ನರಸಿಂಹರಾಜು) 999ಗೆ ಸಹಾಯಕ.
1968ರ ಚಿತ್ರ ಇದು. ಅಂದರೆ 50 ವರ್ಷಗಳ ಹಿಂದಿನದು. ಎಂತಹ ಆಧುನಿಕ ರೀತಿಯಲ್ಲಿ ಚಿತ್ರಿತವಾಗಿದೆ ಅಂತೀರಿ. ಅದರ ನಿರ್ದೇಶಕರಾದರೂ ಯಾರು? ಬಕೆಟ್‍ಗಟ್ಟಳೆ ಕಣ್ಣೀರನ್ನು ಲಕ್ಷ್ಮಿಯಿಂದ ಅನೇಕ ಚಿತ್ರಗಳಲ್ಲಿ ಸುರಿಸಿದ ದೊರೆ-ಭಗವಾನ್ ಜೋಡಿ!
ಎಂ.ಪಿ.ಶಂಕರ್ ಮತ್ತು ರಾಜ್ ಫೈಟಿಂಗ್ ಇದೆ ದೊಡ್ಡಾಲದ ಮರದ ಬಳಿ. ಅಬ್ಬಾ, ಇಡೀ ರಸ್ತೆ ಖಾಲಿ ಖಾಲಿ. ಈಗ ಒಮ್ಮೆ ಹೋಗಿ ನೋಡಿ. ಒಂದಿಂಚೂ ಜಾಗ ಖಾಲಿ ಇಲ್ಲ ರಸ್ತೆಯ ಆಚೆ ಈಚೆ.
ಮಿನ್ನಿ(ಜಯಂತಿ) ಶಕ್ತಿಪ್ರಸಾದ್ ಮಗಳು. ಮಿನ್ನಿ, ಚಲಿಸುತ್ತಿರುವ ಸ್ಟಾಂಡರ್ಡ್ ಕಾರ್ ಬಾನೆಟ್ ಮೇಲೆ, ಮೈಸೂರು ರಸ್ತೆಯಲ್ಲಿ ನಿಂತು ನರ್ತಿಸುತ್ತಾಳೆ! ಸ್ವಿಮಿಂಗ್ ಸೂಟ್ ಧರಿಸಿ ಮೀನಿನಂತೆ ಈಜುತ್ತಾಳೆ. ಅಣ್ಣಾವ್ರು ಕೂಡ ಸ್ವಿಮ್ಮಿಂಗ್ ಟ್ರಂಕ್ಸ್ ಹಾಕಿ ಆಕಿ ಜತೀಗೆ ಸ್ಟೆಪ್ಸ್ ಹಾಕುತ್ತಾರೆ, ಈಜುತ್ತಾರೆ!
ಈ ಚಿತ್ರದಲ್ಲೇ ಇರಬೇಕು ಮೊದಲ ಕ್ಯಾಬರೆ ಕನ್ನಡದಲ್ಲಿ ಬಂದದ್ದು.
ವಿಜಯಲಲಿತಾಗೆ ಈ ಹೆಗ್ಗಳಿಕೆ ಸಲ್ಲುತ್ತದೆ. ಯಾವುದೋ ತತ್ವಪದ ಇದ್ದ ಹಾಗಿದೆ ಆಕೆಯ ಹಾಡಿನ ಪದಗಳು, ರಾಗ ಅಲ್ಲ! ಅಣ್ಣಾವ್ರು ಇಲ್ಲಿ ಕೂಡ ಈಕಿ ಜತೀಗೆ ಕುಣಿದಾರ.
ಈ ಬಾಂಡ್ ಎಂಬ ವಿಶೇಷ ಸಿನಿಮಾದಲ್ಲಿ ಇಡೀ ಚಿತ್ರದ ಡಯಲಾಗುಗಳನ್ನು ಒಂದು ಚಿಕ್ಕ ಚೀಲದಲ್ಲಿ ತುಂಬಿಬಿಡಬಹುದು! ಬರೀ ಅದ್ಭುತ ಬ್ಯಾಕ್‍ಗ್ರೌಂಡ್ ಸಂಗೀತ. ವಾಹ್, ಜಿಕೆ ವೆಂಕಟೇಶ್ ಅವರ ಸಂಗೀತ ನಿರ್ದೇಶನ. ಶೈಲಶ್ರೀಗೆ ಎಸ್. ಜಾನಕಿ ಹಾಡಿರುವ ‘ಇನಿಯ ಬಂದ ಸಮಯ’ ಬಲು ಮಧುರ. ಉಳಿದವು ಸನ್ನಿವೇಶಕ್ಕೆ ತಕ್ಕಂತೆ ಇವೆ. ಗಂಡಸರು ಈ ಸಿನಿಮಾದಲ್ಲಿ ಹಾಡಿಲ್ಲ. ಎಲ್ ಆರ್ ಈಶ್ವರಿ ಮತ್ತೊಬ್ಬ ಗಾಯಕಿ.
ಬಾಸ್‍ಗೆ ಈ ಸಿನಿಮಾದ ಇನ್ನೊಂದು ಪಾತ್ರದ ಧ್ವನಿ ಉಪಯೋಗಿಸಿ ನಮಗೆ ‘ಮೋಸ’ ಮಾಡುತ್ತಾರೆ ನಿರ್ದೇಶಕರು!
ಕೆ.ಎಸ್.ಅಶ್ವತ್ಥ್, ಉದಯಕುಮಾರ್, ಸಣ್ಣ ಪಾತ್ರದಲ್ಲಿ ದಿನೇಶ್ ಮತ್ತು ಆರ್.ಟಿ.ರಮಾ ಇದ್ದಾರೆ.
ವೃತ್ತಾಕಾರದ ವೃತ್ತಾಕಾರದಲ್ಲಿ ಸುತ್ತುವ ಮಂಚ, ರಿಮೋಟ್ ಒತ್ತಿದರೆ ತೆರೆದುಕೊಳ್ಳುವ ಬಾಗಿಲುಗಳು, ಟೆಲಿಫೋನ್ ಗೂಡು, ಬಾಂಡ್‍ಗೆ ಕಾಫಿ ತರುವ, ಮಾಲಿಶ್ ಮಾಡುವ ಮಾಡ್ರನ್ ಹುಡುಗಿಯರು…
ಜೇಡರ ಬಲೆ ಒಂದು ವಿಶಿಷ್ಟ ಚಿತ್ರ.