ಚಿತ್ರವಿಮರ್ಶೆ-ಟಫ್ ಕೋರ್ಟ್ ರೂಂ ಡ್ರಾಮ ಎನ್ನಬಹುದಾದ ಸಿರ್ಫ್ ಏಕ್ ಬಂದಾ ಕಾಫಿ ಹೈ ( ಹಿಂದಿ) ~~~~~~~~~~~~~~~~~~~~~~~~~~~~~~~~~~~~~~~~~~~
ಚಿತ್ರದಲ್ಲಿ ಮಹಾಭಾರತದ ಉಲ್ಲೇಖವಿದೆ, ಒಂದು ಸಂಧರ್ಭದಲ್ಲಿ ‘ಕೃಷ್ಣ ಧರ್ಮಕ್ಕಾಗಿ ಒಬ್ಬನೇ ಲಕ್ಷಾಂತರ ಜನರಿದ್ದ ಕೌರವ ಸೇನೆಯನ್ನು ಎದುರಿಸಿದ , ಧರ್ಮಯುದ್ಧದಲ್ಲಿ ಹಿಂಜರಿಯುವ ಮಾತೇ ಇಲ್ಲ. ಸೋಲೇ ಇಲ್ಲ, ಧೈರ್ಯದ ಮಂತ್ರ ಜಪಿಸುವವನಿಗೆ’ ಎಂಬಂತೆ ಅವನಿಗೆ ಬುದ್ದಿವಾದ ಮಾಡುತ್ತಾಳೆ ನಾಯಕನ ವೃದ್ಧೆ ತಾಯಿ.ಕೊನೆಯಲ್ಲೊಮ್ಮೆ ಮಾನಭಂಗ ಆಪಾದಿತ ಸ್ವಾಮಿಜಿಯನ್ನು ತೋರಿಸಿ ವಕೀಲ ನಾಯಕನೇ ‘ಇವನು ಸನ್ಯಾಸಿ ವೇಷದ ರಾವಣ, ಇಂಥವರನ್ನು ಶಿವನೂ ಕ್ಷಮಿಸಿದೇ ರಾಮಾಯಣ ಕಾಲದಲ್ಲೇ ಮೇಲ್ಪಂಕ್ತಿ ಹಾಕಿದ ಉದಾಹರಣೆಯಿದೆ ’ ಎಂದು ಉಲ್ಲೇಖಿಸುತ್ತಾನೆ
. ಹೀಗೆ ಧರ್ಮ, ಕರ್ಮ ಮತ್ತು ಶಿಕ್ಷೆಯ ಸುತ್ತ ಹೆಣೆದ ಒಂದು ಪ್ರಸ್ತುತವೂ ಆದ ಕೋರ್ಟ್ ರೂಂ ಕೇಸಿನ ರೋಚಕ ಘಟನೆಗಳ ವಾದ , ಪ್ರತಿವಾದಗಳ ಗಂಭೀರ ಚಿತ್ರ- ಸಿರ್ಫ್ ಏಕ್ ಬಂದಾ ಕಾಫಿ ಹೈ ( ಕೇವಲ ಒಬ್ಬ ಇದ್ದರೂ ಸಾಕು ( ಇಂಥವನು)) ಎಂಬ ಗೂಡಾರ್ಥ ಹೊಂದಿದ ಶೀರ್ಷಿಕೆ. ತಮ್ಮ ಮುಖ್ಯ ಪಾತ್ರವನ್ನು ಜೋಧಪುರದ ಪ್ರತಿವಾದಿ ವಕೀಲ ಪಿ ಸಿ ಸೋಲಂಕಿ ಆಗಿ ಮನೋಜ ಬಾಜಪೇಯಿ ಸ್ವಲ್ಪವೂ ಅತಿರೇಕವಿಲ್ಲದ ಅಭಿನಯ ನೀಡಿ ಸಮರ್ಥವಾಗಿ ನಿರ್ವಹಿಸಿ ಚಿತ್ರದ ತುಂಬ ಮತ್ತು ವೀಕ್ಷಕರ ಮನಸ್ಸಿನ ತುಂಬಾ ಆವರಿಸುತ್ತಾರೆ.
ನು ಎಂಬ ಮೈನರ್ ಯುವತಿ ಒಬ್ಬ ಹೈ ಪ್ರೊಫೈಲ್ ಸ್ವಾಮಿಯ ಕೋಣೆಯಲ್ಲಿ ಮಾನಭಂಗ ಯತ್ನಕ್ಕೆ ಒಳಗಾಗುತ್ತಾಳೆ. ಆ ಬಡ ಕುಟುಂಬದವರ ತಲ್ಲಣ ಹೆಚ್ಚುವುದು ಅವರು ಆ ಸ್ವಾಮಿಯ ಆಪ್ತ ಭಕ್ತರೇ ಆಗಿದ್ದರಿಂದ… ಆದಾಗ್ಯೂ ಮಗಳಿಗೆ ಆದ ಅನ್ಯಾಯವನ್ನು ಪೋಕ್ಸೋ ಕಾಯಿದೆಯಡಿ ಕೋರ್ಟಲ್ಲಿ ಸವಾಲು ಹಾಕುವ ಧೈರ್ಯ ತೋರಿ ಅಂತಹ ಸಂತ್ರಸ್ತರಿಗೆ ಒಂದು ಮಾದರಿಯಾಗುತ್ತಾರೆ.ಅಲ್ಲಿಂದ ನಡೆಯುವುದೇ ಆ ಬಲಿಷ್ಠ ಸ್ವಾಮಿಯ ಕಡೆಯವರಿಂದ ರಾಜಕೀಯ ಕೈ ತಿರುಚಾಟ ಗೂಂಡಾಗಿರಿ ಮತ್ತು ಸಾಕ್ಷಿಗಳ ಹಾಡೇಹಗಲು ಕಗ್ಗೊಲೆಗಳು ಎಂಥವರನ್ನೂ ಆ ಒತ್ತಡಕ್ಕೆ ಶರಣಾಗಿ ತರುಣಿಯ ಕಡೆಯವರು ಕೇಸ್ ಹಿಂತೆಗೆದುಕೊಳ್ಳುವಂತದ್ದು.
ಆದರೆ ಛಲ ಬಿಡದ ವಕೀಲ, ಹಠ ಬಿಡದ ಸಂತ್ರಸ್ತ ಕುಟುಂಬ ನಾನಾ ಭಾವನಾತ್ಮಕ ಸಂಘರ್ಷ ಮಾಡಿ, ಜೀವೆ ಒತ್ತೆಯಿಟ್ಟು ಕೇಸ್ ಮುಂದುವರೆಸುತ್ತಾರೆ.ಅಲ್ಲಿ ಬರುವ ಆಪಾದಿತನ ಕಡೆಯವರ ವಕೀಲರನ್ನೂ ನ್ಯಾಯವಾಗಿ, ನೈಜವಾಗಿ ತೋರಿಸಿದ್ದಾರೆ ಎಂಬುದು ಶ್ಲಾಘನೀಯ.
ಒಬ್ಬರನ್ನು ಎತ್ತಿ ಕಟ್ಟಲು ಇನ್ನೊಬ್ಬರನ್ನು ತುಳಿದಿಲ್ಲ.ಅಂತ್ಯದ ಸೀನುಗಳು ಮನದಲ್ಲಿ ನಿಲ್ಲುವಂತದ್ದು.
ಇಂತಹ ಚಿತ್ರದಲ್ಲಿ ನಾಯಕಿ ಅವಶ್ಯಕವಿಲ್ಲ, ಹಾಗಾಗಿ ಯಾರೂ ಇಲ್ಲ. ಅಭಿನಯ, ನಿರ್ದೇಶನ ಚಿತ್ರೀಕರಣ ಎಲ್ಲಾ ಟಾಪ್ ಕ್ಲಾಸ್, ಎಲ್ಲಿಯೂ ಬಿಗು ಕಳೆದುಕೊಳ್ಳದೇ ಮೂಡಿಬಂದಿದೆ. ನಟ ಮನೋಜ ಬಾಜಪೇಯಿ ಬಗ್ಗೆ ನಾವಿಟ್ಟ ಭರವಸೆ ಸುಳ್ಳಾಗಲಿಲ್ಲ.
ಆಸಕ್ತರು ನೋಡಬೇಕಾದ ಚಿತ್ರ ಇದು
ನನ್ನ ರೇಟಿಂಗ್ 4.5/5ಜ಼ೀ ೫ zee5 ಓಟಿಟೀ-ಯಲ್ಲಿ ಲಭ್ಯ