ವಾಲಿ ತಮಿಳು ಚಿತ್ರರಂಗ ಕಂಡ ಅತ್ಯಂತ ಜನಪ್ರಿಯ ಸಾಹಿತಿ,ನಟ,ಲೇಖಕ ಮತ್ತು ನಿರ್ದೇಶಕರಾಗಿ ಪ್ರಸಿದ್ಧಿ ಪಡೆದಿದ್ದು ಐದು ದಶಕಗಳ ಕಾಲ ಸಂಗೀತ ಪ್ರೇಮಿಗಳಿಗೆ ಸವಿಯಾದ ಸಾಹಿತ್ಯದ ಭೋಜನವನ್ನು ಮಾಡಿಸಿದ್ದು ಅಂದಿನ ಸ್ಟಾರ್ ನಟ ಎಮ್.ಜಿ.ರಾಮಚಂದ್ರನ್ ಅವರಿಗೆ ಆಪ್ತರಾಗಿದ್ದರು.
ವಾಲಿ ಅಕ್ಟೋಬರ್ ೨೯,೧೯೩೧ ರಲ್ಲಿ ತಮಿಳು ನಾಡು ಪ್ರದೇಶದ ಶ್ರೀ ರಂಗದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಆದರೆ ನನಗೆ ಇವರ ತಂದೆ, ತಾಯಿಯ ಮತ್ತು ಶಿಕ್ಷಣದ ಕುರಿತು ಯಾವ ಮಾಹಿತಿಯು ಲಭ್ಯವಾಗದ ಕಾರಣ ಇಲ್ಲಿ ಬರೆಯಲು ಸಾಧ್ಯವಾಗಿಲ್ಲ. ೧೯೫೦ ನೇ ಇಸ್ವಿಯಲ್ಲಿ ತಮ್ಮ ೧೯ ನೇ ವಯಸ್ಸಿನಲ್ಲಿ ತಮಿಳು ಚಿತ್ರರಂಗದಲ್ಲಿ ಅವಕಾಶವನ್ನು ಪಡೆದುಕೊಳ್ಳಲು ಮದ್ರಾಸ್ ಗೆ ತೆರಳಿದ ಇವರಿಗೆ ಆರಂಭದ ದಿನಗಳಲ್ಲಿ ಅವಕಾಶವನ್ನು ಪಡೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೂ ಸತತ ಪ್ರಯತ್ನದಿಂದ ಇವರಿಗೆ ಶುಭ ದಿನಂ ಎಂಬ ತಮಿಳು ಚಿತ್ರಕ್ಕೆ ಮೊದಲ ಬಾರಿಗೆ ಹಾಡುಗಳನ್ನು ರಚಿಸುವ ಅವಕಾಶ ದೊರಕಿತ್ತು. ನಂತರ ಭದ್ರಕಾಳಿ, ಧೀರ್ಘ ಸುಮಂಗಲಿ ಚಿತ್ರಗಳಿಗೂ ಹಾಡುಗಳನ್ನು ರಚಿಸಿದ್ದರು.
ಚಿತ್ರ ರಂಗಕ್ಕೆ ಬಂದು ೧೦ ವರ್ಷಗಳ ನಂತರ ೧೯೬೦ ರ ದಶಕದ ಸ್ಟಾರ್ ನಟರಾದ ಎಂ.ಜಿ.ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ರ ಯುಗವಾಗಿತ್ತು. ಈ ಇಬ್ಬರು ನಟರ ಚಿತ್ರಗಳು ಪೈಪೋಟಿ ಪ್ರದರ್ಶನ ಕಾಣುತ್ತಿದ್ದವು. ಈ ಸಂದರ್ಭದಲ್ಲಿ ಇವರ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿದ್ದ ನಟ ಎಂ.ಜಿ.ರಾಮಚಂದ್ರನ್ ನೀಡಿದ ಪ್ರೋತ್ಸಾಹಕ್ಕೆ ಯಶಸ್ವಿ ಸಾಹಿತಿಯಾಗಿ ಪ್ರಸಿದ್ಧಿಯಾಗಿದ್ದರು. ಇದೇ ದಶಕದಲ್ಲಿ ಕಣ್ಣದಾಸನ್ ಎಂಬ ಪ್ರಸಿದ್ಧ ತಮಿಳು ಕವಿಯಿದ್ದರು. ಆದರೆ ಇವರ ಸಾಹಿತ್ಯದ ಪೈಪೋಟಿಗೆ ಯಾರಿಗೂ ನಿಲ್ಲಲು ಆಗುತ್ತಿರಲಿಲ್ಲ. ಆಗಲೇ ಸಾಹಿತ್ಯದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಇವರು ಕವಿ ಕಣ್ಣದಾಸನ್ ಗೆ ಪೈಪೋಟಿ ನೀಡಿದ್ದು ತಮ್ಮ ೫೨ ನೇ ವಯಸ್ಸಿನಲ್ಲಿ ೧೯೮೩ ರಲ್ಲಿ ತೆರೆ ಕಂಡ ಪೋಯಕಳ್ ಕುದಿರೈ ಎಂಬ ತಮಿಳು ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಆದರೆ ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ನಟಿಸಿದ್ದರೂ ವಾಡೈ ಮಾಲೈ ಎಂಬ ಏಕೈಕ ತಮಿಳು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇವರು ನಟ,ಸಾಹಿತಿಯಲ್ಲದೆ ಅವತಾರ ಪುರುಷಂ, ರಾಮಾನುಜ ಕವಿಯಂ ಮತ್ತು ಕೃಷ್ಣ ವಿಜಯಂ ಸೇರಿ ಹನ್ನೆರಡು ಕೃತಿಗಳನ್ನು ಮತ್ತು ನಾನಾಮ್ ಇಂದ ನಾಟ್ರುಂಡಮ್ ಎಂಬ ಆತ್ಮ ಚರಿತ್ರೆಯ ಪುಸ್ತಕವನ್ನು ರಚಿಸಿದ್ದಾರೆ. ಇವರದೆ ರಚನೆಯ ಅಮ್ಮ ಎನಡ್ರು ಅಚ್ಹೈಕತ ವಾಯಿರ್ ಇಲ್ಲೈಯ ಎಂಬ ಹಾಡನ್ನು ಮಧುರೈನ ಪ್ರಸಿದ್ಧ ಮೀನಾಕ್ಷಿ ದೇವಾಲಯದಲ್ಲಿ ಒಂದು ಕಲ್ಲಿನಲ್ಲಿ ಕೆತ್ತಲಾಗಿದ್ದೇ ಇವರ ಸಾಹಿತ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇವರು ನಟ ಎಂ.ಜಿ.ರಾಮಚಂದ್ರನ್ ರ ೬೩ ಮತ್ತು ನಟ ಶಿವಾಜಿ ಗಣೇಶನ್ ರ ೭೦ ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಾರೆ. ತಮ್ಮ ಐದು ದಶಕಗಳ ಚಿತ್ರ ರಂಗದ ಜೀವನದಲ್ಲಿ ೧೫೦೦೦ ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ಇವರು ೨೦೧೩ ರಲ್ಲಿ ಕೊನೆಯ ಬಾರಿ ಕಾವಿಯ ಥಲೈವನ್ ಎಂಬ ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದರು. ತಮಿಳು ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಸಂಗೀತ ಪ್ರೇಮಿಗಳಿಗೆ ಸವಿಯಾದ ಸಾಹಿತ್ಯದ ಭೋಜನವನ್ನು ಮಾಡಿಸಿದ್ದ ಇವರು ಜುಲೈ ೧೮,೨೦೧೩ ರಂದು ತಮ್ಮ ೭೨ ನೇ ವಯಸ್ಸಿನಲ್ಲಿ ನಿಧನರಾದರು.