ತಲಾಶ್….ಅಂದ್ರೆ ಹುಡುಕಾಟ…
ಪೊಲೀಸನಿಗೆ ಕೊಲೆಗಾರನ ಹುಡುಕಾಟ.. ತಾಯಿಗೆ ಮಗುವಿನ ಹುಡುಕಾಟ.. ಅನ್ಯಾಯಕ್ಕೊಳಗಾದವರಿಗೆ ನ್ಯಾಯದ ಹುಡುಕಾಟ.. ದರಿದ್ರನಿಗೆ ದುಡ್ಡಿನ ಹುಡುಕಾಟ.. ತಪ್ಪು ಮಾಡಿದವನಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದಾರಿಯ ಹುಡುಕಾಟ… ಈ ಹುಡುಕಾಟದಲ್ಲಿ ಕೊನೆಗೆ ಸಿಗುವುದು ಜೀವನದ ರಹಸ್ಯ….
ಒಬ್ಬ ಜನಪ್ರಿಯ ನಟ ಯಾವ ಪ್ರಚೋದನೆಯೂ ಇಲ್ಲದೇ ತಾನೇತಾನಾಗಿ ಕಾರನ್ನು ಸಮುದ್ರದೆಡೆ ಹಾರಿಸಿ ಮುಳುಗಿ ಸತ್ತಿರುತ್ತಾನೆ. ಈ ಕೇಸ್ ಹ್ಯಾಂಡಲ್ ಮಾಡುವ ಆಫೀಸರ್ ನಮ್ಮ ಹೀರೋ. ಇದೇ ಮೊದಲಲ್ಲ…ಇದೇ ರೀತಿಯಲ್ಲಿ ಬಹಳ ಜನ ಸತ್ತಿರುತ್ತಾರೆ. ಆದರೆ ಒಂದು ಚಿಕ್ಕ ಸುಳಿವು ಸಹ ಸಿಕ್ಕಿರುವುದಿಲ್ಲ. ಆ ಮಧ್ಯರಾತ್ರಿಯಲ್ಲಿ ರಸ್ತೆ ಮಧ್ಯದಿಂದ ಕಾರನ್ನು ಸಮುದ್ರದೆಡೆ ತಿರುಗಿಸುವ ಪ್ರಚೋದನೆ ಯಾವುದು ಅಂತ ತಿಳಿಯದೇ ಎಲ್ಲರೂ ಸೋತಿರುತ್ತಾರೆ. ಈ ಕೇಸ್ ಹೀರೋಗೆ ಬರುತ್ತದೆ.
ಅವನಿಗೆ ಈ ಕೇಸ್ ಜೊತೆ ಪರ್ಸನಲ್ ತೊಂದರೆ ಒಂದು ಇರುತ್ತದೆ. ಅವನ ಎಂಟು ವರ್ಷದ ಮಗ ಆಟವಾಡುತ್ತಿರುವಾಗ ಅಪಘಾತದಿಂದ ಸತ್ತಿರುತ್ತಾನೆ. ಅಂದು ಮಗ ಆಟವಾಡಲು ಹೋಗುವೆನೆಂದಾಗ ಬೇಡ ಅಂದಿದ್ದರೆ ಅಥವಾ ತಾನೂ ಜೊತೆಗೆ ಬರುವೆನೆಂದಿದ್ದರೆ ಮಗ ಸಾಯುತ್ತಿರಲಿಲ್ಲ ಎಂಬ ಪಾಪ ಪ್ರಜ್ಞೆಯಿಂದ ನಿದ್ದೆಯನ್ನೂ ಮಾಡಲಾಗದೇ ಒದ್ದಾಡುತ್ತಿರುತ್ತಾನೆ ನಾಯಕ.
ತನ್ನ ಬೇಜವಾಬ್ದಾರಿಯಿಂದಾಗಿಯೇ ತನ್ನದೇ ಮಗು ಪ್ರಾಣ ಕಳೆದುಕೊಂಡಿತು ಎಂದು ಅಪರಾಧಿ ಮನೋಭಾವದಿಂದ ನೊಂದು, ಬೆಂದು, ಬೇಯುವ ನಾಯಕ... ಹೆಂಡತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದೇ ಪ್ರತೀ ರಾತ್ರಿಯೂ ಒಂದಲ್ಲ ಒಂದು ಕಾರಣ ಹೇಳುತ್ತ ಮನೆಯಿಂದಾಚೆಯೇ ಉಳಿಯುತ್ತಾನೆ.. ಈ ಮಧ್ಯೆ ಕೇಸಿನ ವಿಚಾರದಲ್ಲಿ ಒಂದು ಸುಂದರ ಹುಡುಗಿಯ ಪರಿಚಯ ಬೇರೆ ಆಗುತ್ತದೆ… ನಂತರ ಅವಳೊಂದಿಗೆ ರಾತ್ರಿಯಿಡೀ ಮಾತನಾಡುತ್ತಾ ತನ್ನ ನೋವು ಮರೆಯಲು ಶುರು ಮಾಡುತ್ತಾನೆ..
ಇವನ ಪಾಡೇನೋ ಆಯ್ತು… ಆದರೆ ಮನೆಯಲ್ಲಿ ತಾಯಿಯ ಪಾಡೇನು? ಇತ್ತ ಮಗುವೂ ಇಲ್ಲ… ಈಗ ಗಂಡನೂ ಮಾತನಾಡುತ್ತಿಲ್ಲ…ಆಕೆಯೇನು ಮಾಡಬೇಕು? ಆಕೆ ನಿಧಾನವಾಗಿ ಆತ್ಮದ ಜೊತೆ ಮಾತನಾಡುವ ಒಬ್ಬ ಹೆಂಗಸಿನ ಸಖ್ಯ ಬೆಳೆಸಿ ಪ್ರತೀದಿನ ಮಗನ ಆತ್ಮದೊಂದಿಗೆ ಮಾತನಾಡುತ್ತಿರುತ್ತಾಳೆ…
ಒಂದು ದಿನ ಇವನಿಗೆ ಆ ವಿಷಯ ಗೊತ್ತಾಗಿಯೇ ಬಿಡುತ್ತದೆ.. ಅವನಿಗೆ ಆತ್ಮ-ಭೂತ-ಪಿಶಾಚಿಗಳ ಮೇಲೆ ಎಳ್ಳಷ್ಟೂ ನಂಬಿಕೆ ಇರುವುದಿಲ್ಲ.. “ಇಷ್ಟೆಲ್ಲಾ ಓದಿರುವ ನೀನು ಇದನ್ಯಾಕೆ ನಂಬ್ತಿದ್ದೀಯ? ನಿನಗೆ ಟ್ರೀಟ್ಮೆಂಟ್ ಅವಶ್ಯಕತೆ ಇದೆ” ಅಂತ ಹೆಂಡತಿಗೆ ಬೈತಾನೆ… ಆಗವಳು ಹೇಳ್ತಾಳೆ… “ಮನೆಯಲ್ಲಿ ಮಾತನಾಡಲು ಯಾರಿಲ್ಲ.. ನೀನೂ ಮಾತನಾಡೋಲ್ಲ… ಯಾರ ಜೊತೆ ರಾತ್ರಿ ಕಳೆಯುತ್ತಿದ್ದೀಯೋ ಗೊತ್ತಿಲ್ಲ.. ಒಟ್ಟಿನಲ್ಲಿ ಯಾರ ಜೊತೆಗೋ ಇದ್ದು ನಿನ್ನ ದುಃಖ ಕಳೆದುಕೊಳ್ಳುತ್ತಿದ್ದೀಯ. ಅದೇ ರೀತಿ ನಾನೂ ನನ್ ಮಗನ ಜೊತೆ ಮಾತನಾಡಿ ನನ್ನ ದುಃಖ ಕಳೆದುಕೊಳ್ಳುತ್ತಿದ್ದೀನಿ” ಅಂತ ಹೇಳುತ್ತಾಳೆ. ನಾಯಕನಿಗೆ ಆ ಮಾತಿಗೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ… ಸುಮ್ಮನಾಗಿಬಿಡುತ್ತಾನೆ. ಏಕೆಂದರೆ ಹೆಂಡತಿ ಹೇಳಿದ್ದು ನಿಜ ತಾನೇ? ಹೆಂಡತಿಯ ನೋಟದೊಟನೆ ನೋಟ ಬೆರೆಸಲಾಗದ ಗಂಡ ಇನ್ನೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದನೇ? ಮಗುವನ್ನು ಕಳೆದುಕೊಂಡು ಕಂಗಾಲಾದ ಹೆಂಡತಿಗೆ ಮೋಸ ಮಾಡಿದನೇ? ಅಂತ ನಾವು ಆತಂಕ ಪಡುವಂತಾಗುತ್ತದೆ… ಎಲ್ಲಾ ಗಂಡಸರೂ ಒಂದೇ.. ಹೆಣ್ಣಿನ ಸಖ್ಯದಲ್ಲಿ ನೋವು ಮರೆಯುತ್ತಾರೆ..ಅಂತ ಅವನ ಬಗ್ಗೆ ಬೇಸರ ಮೂಡುತ್ತದೆ.
ಅವನ ಪ್ರೇಯಸಿಯೋ ಒಬ್ಬ ವೇಶ್ಯೆ.. ಈ ಜಗತ್ತಿನಲ್ಲಿ ಹೆಣ್ಣಿಗಿರುವ ಬೆಲೆಯನ್ನು ಹೇಳಬಲ್ಲವಳು ಅವಳು.. ಮೂರು ವರ್ಷದ ಕೆಳಗೆ ಹೀಗೇ ಒಂದು ಹುಡುಗಿಯನ್ನು ಒಂದು ರಾತ್ರಿಗಾಗಿ ಕರೆದೊಯ್ದವರು ಏನು ಮಾಡಿದರೋ ಗೊತ್ತಿಲ್ಲ.. ಅಂದಿನಿಂದ ಆ ಹುಡುಗಿ ನಾಪತ್ತೆಯಾಗಿದ್ದಾಳೆ… ಸತ್ತಿದ್ದಾಳೋ ಬದುಕಿದ್ದಾಳೋ ಗೊತ್ತಿಲ್ಲ.. ಆದರೆ ಈ ಬಗ್ಗೆ ಯಾರಿಗೂ ಬೇಕಿಲ್ಲ… ಏಕೆಂದರೆ ಹುಡುಗಿಯರಿಗಿರುವ ಬೆಲೆ ಅಷ್ಟೇ ಎನ್ನುತ್ತಾಳೆ ಅವಳು… ಅಷ್ಟೇ ಅಲ್ಲ… ನಾಯಕ ಶೋಧಿಸುತ್ತಿರುವ ಈ ಕೊಲೆಯ ಕೇಸಿನ ಬಹುಮುಖ್ಯ ಸುಳಿವುಗಳನ್ನು ಕೂಡ ಕೊಡುತ್ತಿರುತ್ತಾಳೆ…
ಕಡೆಗೇನಾಯಿತು?
ಆತ್ಮಗಳು ಇರುವುದು ನಿಜವೇ? ಅವುಗಳು ನಮ್ಮನ್ನು ಸಂಪರ್ಕ ಮಾಡುವುದು ನಿಜವೇ? ನಾಯಕಿ ನಿಜವಾಗಿಯೂ ಮಗನ ಆತ್ಮದೊಂದಿಗೆ ಮಾತನಾಡುತ್ತಿದ್ದಳೇ? ಎಂಬೆಲ್ಲಾ ಪ್ರಶ್ನೆಗಳಿಗೂ ಕೊನೆಯಲ್ಲಿ ಉತ್ತರ ಸಿಗುತ್ತದೆ… ಆ ಉತ್ತರ ಸಿಕ್ಕಾಗ ಉಸಿರಾಡಲೂ ಆಗದಷ್ಟು ಸ್ಥಂಭೀಭೂತರಾಗುತ್ತೇವೆ ನಾವು…
ಎಲ್ಲಿಯೂ ಇದೊಂದು ಹಾರರ್ ಸಿನೆಮಾ ಎಂಬ ಗುಟ್ಟು ಬಿಟ್ಟುಕೊಡದೇ ಸಾಗುವ ನಿರೂಪಣೆಯೇ ಸಿನೆಮಾದ ನಿಜವಾದ ಹೀರೋ.. ನಂತರದ ಸ್ಥಾನ ನಿರ್ದೇಶಕನದ್ದು. ಒಂದು ಚೂರಾದರೂ ಅಲ್ಲಾಡದ ಹಾಗೆ ಹಿಡಿದಿಟ್ಟುಕೊಳ್ಳುವ ಚಿತ್ರಕಥೆಗೆ ಮೂರನೇ ಸ್ಥಾನ. ಜನರ ದುಡ್ಡಿನ ಹಪಾಹಪಿತನ, ದುಡ್ಡಿಗಾಗಿ ಏನು ಬೇಕಾದರೂ ಮಾಡುವ ಜನರ ನಡುವೆ ಸಿಂಪಲ್ ಕಾರು, ಮಾಮೂಲಿ ಮನೆಯ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ನಾಯಕ, ಲಂಚ ತೆಗೆದುಕೊಳ್ಳದಿದ್ದರೆ ಅವರ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಎಂದು ತೋರಿಸಿದ್ದಾನೆ.
ಅತ್ಯುತ್ತಮ ಚಿತ್ರ……