#Thalaivii #Filmreview
# #chennai
~~~~~~~~~~~~~~~~~~~~~~
ತಲೈವಿ ತಮಿಳು ಚಿತ್ರವನ್ನು ಚೆನ್ನೈನಲ್ಲೇ ನೋಡುವುದರಲ್ಲಿ ಒಂದು ಮಜಾ ಇದೆ.!
ಈ ಸೂಕ್ತ ಸ್ಥಳದಲ್ಲಿಯೇ ಇಬ್ಬರು ಕೋಲಿವುಡ್ಡಿನ 60-80ರ ದಶಕಗಳ ಒರಿಜಿನಲ್ ಸೂಪರ್ ಸ್ಟಾರುಗಳಾದ ಎಂ ಜಿ ಆರ್ ಮತ್ತು ಜಯಲಲಿತಾರ ರಂಗು ರಂಗಿನ ಚಿತ್ರಜೀವನ ಪರದೆಯ ಮೇಲೆ ಮತ್ತು ಹೊರಗೆ ಈ ರಾಜ್ಯದ ಜನಮಾನಸದಲ್ಲಿ ಮೂಡಿದ್ದೂ ಸಹಾ.
ಹಾಗಾಗಿ ಇಂದು ಚಿತ್ರ ನೋಡುವಾಗ ಚಿತ್ರಮಂದಿರದಲ್ಲಿ ಹಲವು ಹಳೇ ಚಿತ್ರಪ್ರೇಮಿಗಳು ‘ಆಹ್ ಓಹ್ ತಲೈವಾ!’ ಎಂದು ಉದ್ಗರಿಸಿದಾಗಲೋ , ಅಥವಾ ಜಯಲಲಿತಾರ ಪಂಚ್ ಲೈನ್ (ಸಾಕಷ್ಟಿವೆ) ಬಂದಾಗ ವಿಸಲ್ ಅಥವಾ ಚಪ್ಪಾಳೆ ಹೊಡೆದಾಗಲೋ ಆ ಸತ್ಯ ಅರಿವಾಯಿತು.
ಇವರು ಬಳಸಿರುವ ತಮಿಳು ಸಂಭಾಷಣೆ ಅರ್ಥವಾದರೆ ಈ ಚಿತ್ರದ ‘ನೇಟಿವಿಟಿ’ ಗೊತ್ತಾಗುವುದು, ತೆಲುಗು ಅಥವಾ ಹಿಂದಿ ಡಬ್ಬಿಂಗಿನಲ್ಲಿ ಆ ಪರಿಣಾಮ ಹೇಗೆ ಬಂದಿರಬಹುದೆಂದು ನಾ ಹೇಳಲಾರೆ.
ಇರಲಿ, ಚಿತ್ರಕ್ಕೆ ಬರುತ್ತೇನೆ.
ಜಯಲಲಿತಾಳನ್ನು ಜಯಾ ಎಂದೂ ಎಂಜಿಆರ್ ಅವರನ್ನು ಎಂ ಜೇ ಆರ್ ಎಂದು ಸ್ವಲ್ಪವಾಗಿ ಹೆಸರು ಬದಲಿಸಿ ಅವರದೇ ಜೀವನವನ್ನು ಚಿತ್ರಿಸಿದ್ದಾರೆ. ಚಿತ್ರದ ಪೂರ್ವಾರ್ಧದಲ್ಲಿ ಅವರ ಚಿತ್ರಜೀವನವನ್ನೂ , ಉತ್ತರಾರ್ಧದಲ್ಲಿ ರಾಜಕೀಯ ಜೀವನದ ಮೈಲಿಗಲ್ಲುಗಳನ್ನೂ ತೆಗೆದುಕೊಂಡಿದ್ದಾರೆ.
ಮೊದಲನೆಯದಾಗಿ ಜಯಲಲಿತಾ ಆಗಿ ನಟಿ ಕಂಗನಾ ರಾನೌಟ್ ಬಹಳ ಪ್ರಯತ್ನಶೀಲತೆಯಿಂದ ಪಾತ್ರದ ಪರಕಾಯಪ್ರವೇಶ ಮಾಡಿ ನಟಿಸಬಲ್ಲ ನಟಿ ಇಲ್ಲಿಯೂ ಸಮರ್ಥವಾಗಿದ್ದಾರೆ. ಆದರೆ ಜಯಲಲಿತಾ ಆಗಿನ ಹಲವು ದಕ್ಷಿಣ ಭಾರತೀಯ ನಟಿಯರಂತೆ ಸಾಕಷ್ಟು ‘ತುಂಬು ದೇಹದ’ ನಟಿಯಾಗಿದ್ದರು, ಹಾಗಾಗಿ ಕಂಗನಾ ಆ ರೀತಿಯ ದೈಹಿಕ ಹೋಲಿಕೆ ಬಿಂಬಿಸಲು ಆಗಿಲ್ಲ. ಕೊನೆಕೊನೆಯಲ್ಲಿ ತನ್ನ ಮೈ ಹಿಗ್ಗಿಸಿಕೊಂಡು ಕಂಗನಾ ಆ ವ್ಯಕ್ತಿತ್ವವನ್ನು ಬಿಂಬಿಸಿಯೂ ಇದ್ದಾರೆ.
ಆದರೆ ಇದು ಆಕೆಯ ಬಗ್ಗೆ ಚಿಕ್ಕ ದೂರು ಮಾತ್ರ.
ಜಯಾಳ ಜೀವನದ ಸರ್ವಸ್ವವೂ ಆಗಿದ್ದ ವಿಶಿಷ್ಟ ವೈಯಕ್ತಿಕ ಪಾಲುದಾರ ಮತ್ತು ರಾಜಕೀಯ ಗುರು ಎರಡೂ ಆಗಿದ್ದ ಎಂಜಿ ಆರ್ ರಂತಹ ದೊಡ್ಡ ಪಾತ್ರವನ್ನು ಅದರಲ್ಲಿ ಹಾಸುಹೊಕ್ಕು ನಟಿಸಿ ಅರವಿಂದ್ ಸ್ವಾಮಿ ಬಹಳ ನೈಜತೆಯನ್ನು ತಂದಿದ್ದಾರೆ. ಅತ್ಯಂತ ಶ್ಲಾಘನೀಯವಾಗಿ ತಮಿಳರ ಆರಾಧ್ಯದೈವವಾಗಿದ್ದ ಮಕ್ಕಳ ತಿಲಕಂ ಮತ್ತು ಪ್ರಜಾನಾಯಕನಾಗಿ ಅವರ ಕನ್ನಡಿ ಪ್ರತಿಬಿಂಬದಂತೆ ಕಂಡು ನಟಿಸಿ ಅರವಿಂದ್ ಸ್ವಾಮಿ ಪ್ರೇಕ್ಷಕರ ಮನಗೆಲ್ಲುತ್ತಾರೆ.
ಇನ್ನೊಬ್ಬ ರಾಜಕೀಯ ಧುರೀಣ ಹಾಗೂ ಪ್ರತಿಸ್ಪರ್ಧಿ ಕರುಣಾನಿಧಿಯವರ ಪಾತ್ರವನ್ನು ಹಿರಿಯ ನಟ ನಾಜ಼ರ್ ಸಹಾ ಅದೇ ಗತ್ತು ಗೈರತ್ತಿನಿಂದ ಪ್ರದರ್ಶಿಸಿದ್ದಾರೆ. ವಿಶೇಷತಃ ಆತನ ಮಾತುಗಾರಿಕೆ, ಡೈಲಾಗ್ ಡೆಲಿವರಿ ಕಲೈನರ್ ಎನಿಸಿದ್ದ ನಾಯಕರ ಉತ್ತಮ ನಕಲು ಎನಿಸುವುದೂ ಉಂಟು.
ಜಯಾಳ ತಾಯಿ ಸಂಧ್ಯಾ ಆಗಿ ಹಳೆ ನಟಿ ಭಾಗ್ಯಶ್ರೀ ಮತ್ತೆ ಕಾಣಿಸಿಕೊಂಡರೆ, ಅರವಿಂದ ಸ್ವಾಮಿಯವರ ರೋಜಾ ನಾಯಕಿ ಮಧುಬಾಲ ಇಲ್ಲಿ ಪತ್ನಿ ಜಾನಕಿಯ ಪಾತ್ರದಲ್ಲಿದ್ದಾರೆ.
ಹಳೆ ಚಿತ್ರಗಳಲ್ಲಿ ತನ್ನ ಸ್ವಾಭಿಮಾನವನ್ನೂ ಬಿಡದೇ ಪಾದಾರ್ಪಣೆ ಮಾಡಿದ ಜಯಲಿಲಿತಾ ನಿಧಾನವಾಗಿ ನಾಯಕನಟ ಎಂ ಜಿ ಆರ್ ರವರಿಗೆ ಮನಸೋತು ಅವರ ನೆರಳಿನಂತೆ ಸಾಗುತ್ತಾಳೆ.
ಅವಳ ದಾರಿಯುದ್ಧಕ್ಕೂ ಎಂ ಜಿ ಆರ್ ಆಪ್ತಪಡೆ ಅದರಲ್ಲಿಯೂ ವೀರಪ್ಪನ್ ಎಂಬ ನಾಯಕ- ತೊಡರುಗಾಲು ಹಾಕಿ ಜಯಾಳನ್ನು ಬೀಳಿಸಲು ಸಂಚು ಮಾಡುತ್ತಲೇ ಇರುತ್ತಾರೆ. ಆದರೆ ಎಂ ಜಿ ಆರ್ ಕರುಣಾನಿಧಿಯರ ಡಿ ಎಂ ಕೆ ಯಿಂದ ಭಿನ್ನಾಭಿಪ್ರಾಯ ಬಂದು ಹೊರಬಿದ್ದು ತನ್ನದೇ ಆದ ಅಣ್ಣಾ ಡಿ ಎಂಕೆ ಪಕ್ಷವನ್ನು ಕಟಿಬದ್ಧನಾಗಿ ನಿಂತು ಕಟ್ಟಿದಾಗ ಜಯಾ ಸ್ವಲ್ಪ ದೂರ ದೂರವೇ ಇದ್ದವಳು, ನಿಧಾನವಾಗಿ ಜನಸೇವೆ, ಪಕ್ಷಪ್ರಚಾರದಲ್ಲಿ ತೊಡಗುತ್ತಾ ತನ್ನ ಸ್ಥಾನಕ್ಕೆ ಅಡ್ಡಿ ಬರುತ್ತಿದ್ದ ಸ್ವಾರ್ಥಿ ಪುರುಷ ನೇತಾಗಳ ಬಾಯಿಮುಚ್ಚಿಸುವಂತೆ ದುಡಿದು ಯಶಸ್ವಿಯಾಗುತ್ತಾಳೆ.
ಹಾಗೂ ಆಕೆಯ ವಿರುದ್ಧ ಒಳಸಂಚುಗಳು ಅಸೂಯೆಗಳೂ ಇದ್ದು ಒಮ್ಮೆ ಎಂಜಿ ಆರ್ ಮರಣಾಂತರ ಆಕೆಯನ್ನು ಆತನ ಶವಸಸ್ಕಾರದಲ್ಲಿಯೂ ದೂರವಿಟ್ಟು ನೂಕಿ ಬೀಳಿಸುತ್ತಾರೆ. ಆಕೆ ಮತ್ತೆ ದೆಹಲಿಯಲ್ಲಿ ಪ್ರಧಾನಿ ಇಂದಿರಾಗಾಂಧಿಯವರನ್ನು ಮೆಚ್ಚಿಸಿ ರಾಜ್ಯಸಭೆಯಲ್ಲಿಯೂ ತನ್ನ ನಿರರ್ಗಳ ಇಂಗ್ಲೀಷ್ ವಾಗ್ಝರಿಯಿಂದ ಮೆಚ್ಚಿಸುತ್ತಾಳೆ. ತಮಿಳ್ನಾಡಿನ ಜನಪರ ವಾದಿಸಿ ಕೇಂದ್ರವನ್ನು ಗೆಲ್ಲುತ್ತಾಳೆ.
ವಿದ್ಯಾವಂತೆ , ಹಲವು ಭಾಷೆ ಕಲಿತವಳು, ಛಲಗಾತಿ ಹಾಗೂ ಪಕ್ಷದ ಯಶಸ್ವಿನಿಯಾದ ಜಯಾಳಿಗೆ ಕೊನೆಗೆ ಎಲ್ಲ ಭಿನ್ನಮತೀಯರೂ ಮಣಿಯುತ್ತಾರೆ. ಆಕೆಗೆ ಅಪಘಾತವಾಗಿ ವಿಪರೀತ ಗಾಯಗೊಂಡಾಗ್ಯೂ ದಿಟ್ಟೆಯಾಗಿ ನಿಷ್ಟೆಯಿಂದ ದುಡಿದು ಜನಮನವನ್ನೂ ಮತವನ್ನೂ ಗೆದ್ದು ಒಮ್ಮೆ ಆಕೆಯನ್ನು ಜಗ್ಗಾಡಿದ್ದ ಅಸೆಂಬ್ಲಿಗೆ ಡಿಎಂಕೆಯನ್ನು ಸೋಲಿಸಿ ರಾಜಾರೋಷವಾಗಿ 1991ರ ಚುನಾವಣೆಯಲ್ಲಿ ಗೆದ್ದು ಬರುತ್ತಾಳೆ.
ಜಯಲಿಲಿತಾ ಈ ರಾಜ್ಯಕ್ಕೆ ನಾಲ್ಕು ಸಲ ಮುಖ್ಯಮಂತ್ರಿಯಾಗಿದ್ದರೂ ಈ ಚಿತ್ರ ಮುಗಿಯುವಾಗ ಮೊದಲ ಬಾರಿ ಆಕೆ ಗದ್ದುಗೆ ಏರಿದ್ದಕ್ಕೇ ಮುಗಿದೇ ಹೋಗುತ್ತದೆ.
ಆಕೆ ಜನರ ಪ್ರೀತಿ ವಿಶ್ವಾಸವನ್ನು ಗೆದ್ದಿದ್ದು ಅದರ ತದನಂತರದ ರಾಜಕೀಯ ಜೀವನದಲ್ಲಿಯೇ. ಅದನ್ನು ತೋರಿಸಲಾಗದೇ ನಿರ್ದೇಶಕರು ಎಲ್ಲೋ ಚಿತ್ರರಸಿಕರಿಗೆ ಅನ್ಯಾಯ ಮಾಡಿದ್ದಾರೆ ಎಂಬ ಭಾವನೆ ಮೂಡುತ್ತದೆ. ಆಕೆಯ ಕೀರ್ತಿ ಉತ್ತುಂಗಕ್ಕೆ ಏರಿದಾಗ ಆಕೆಯ ಜರ್ಬು, ಧಿಮಾಕು, ಆಕೆಯ ಸಹಾಯಕಿಯಾಗಿದ್ದ ಚಿನ್ನಮ್ಮ- ಶಶಿಕಲಾರ ಪ್ರವರ್ಧಮಾನ -ಇವೆಲ್ಲಾ ಚಿತ್ರದಲ್ಲಿ ಬರಲೇ ಇಲ್ಲ.
ಪ್ರಾಯಶಃ ಈಗಲೇ ಚಿತ್ರದ ಅವಧಿ ಬಹಳ ಧೀರ್ಘವಾಯಿತೆಂದೂ ಇಲ್ಲಿಗೇ ನಿಲ್ಲಿಸಿರಬಹುದು. ಇನ್ನೂ ಸೀಕ್ವೆಲ್ – ಎರಡನೇ ಚಿತ್ರ ಮಾಡುವಷ್ಟು ಕಥೆಯಂತೂ ಮಿಕ್ಕಿದೆ!
ನನ್ನ ಒಟ್ಟಾರೆ ರೇಟಿಂಗ್ 3.5/5.
ಕೇವಲ ಕಂಗನಾ ಮತ್ತು ಅರವಿಂದ ಸ್ವಾಮಿಗಾಗಿ 4/5 ಎಂದು ಹಲವರು ಹೇಳಿದ್ದಾರೆ.
ಹಿನ್ನೆಲೆ ಸಂಗೀತ ಜಿ ವಿ ಪ್ರಕಾಶರದ್ದು ಬಹಳ ಆ ಕಾಲದ ಮಧುರ ಚಿತ್ರಗೀತೆಗಳಿಗೆ ಸಾಮ್ಯತೆಯಿದೆ, ಮತ್ತು ಆಗಿನ ತಮಿಳು ಸಿನೆಮಾರಂಗದ ಜೀವನವನ್ನ ಸಹಜವಾಗಿಯೇ ಕೋಲಿವುಡ್ ನಿರ್ದೇಶಕ ವಿಜಯ್ ಯಶ್ವಸಿಯಾಗಿ ಚಿತ್ರೀಕರಿಸಿದ್ದಾರೆ.
ಖಂಡಿತಾ ಈ ಚಿತ್ರತಂಡ ಪಟ್ಟಿರುವ ಶ್ರಮಕ್ಕಾಗಿ ನಾವು ನೋಡಲೇಬಹುದಾದ ಚಿತ್ರ.
ಕೆಲವು ಅವಾರ್ಡುಗಳನ್ನೂ ಈ ವರ್ಷ ಬಾಚಿಕೊಂಡೀತು!