ರಾಜಾರಾವ್ (ಕೆ.ಎಸ್.ಅಶ್ವತ್ಥ್) ದೊಡ್ಡ ಬಿಜಿನೆಸ್ಮನ್. ಅವನ ಪಾರ್ಟ್ನರ್ಗಳು ಶ್ಯಾಮರಾವ್ (ಸಂಪತ್) ಮತ್ತು ಕಾಮೇಶ್(ಶಕ್ತಿಪ್ರಸಾದ್). ರಾಜಾರಾವ್ಗೆ ಕಾಮೇಶ್ ಮೇಲೆ ಸಿಟ್ಟು ಬಂದು ಅವನಿಗೆ ಹಣ ಕೊಟ್ಟು ದೂರ ಮಾಡಿಕೊಳ್ಳುತ್ತಾನೆ. ಶ್ಯಾಮರಾವ್ ಇದು ಸರಿಯಲ್ಲ ಎನ್ನುತ್ತಾನೆ. ಆದರೆ ರಾಜಾರಾವ್ ಇನ್ನೊಬ್ಬರ ಮಾತು ಕೇಳುವ ಕುಳವೇ ಅಲ್ಲ. ಅವನಿಗೊಬ್ಬಳು ತಂಗಿ ಗುಂಡಮ್ಮ(ಪಾಪಮ್ಮ). ಅವಳ ಪತಿ ಬಾಲಣ್ಣ (ಬಾಲಕೃಷ್ಣ) ಬಹಳ ಒಳ್ಳೆಯವನು (ಅಪರೂಪದ ಪಾತ್ರ ಬಾಲಣ್ಣೋರಿಗೆ!).
ಪಾಪಮ್ಮ ಮನೆಯೊಳಗಿದ್ದೇ ಸಾಮಾನು ಕದ್ದು ಪಕ್ಕದ ಮನೆಯ ಹುಡುಗನ ಮೂಲಕ ಮಾರಿ, ಹಣ ಸಂಪಾದಿಸಿ ಒಡವೆ ಮಾಡಿಸಿಕೊಳ್ಳೋ ಪರಾವಲಂಬಿ. ರಾಜಾರಾಯನ ಹೆಂಡತಿ ಗೌರಿ(ಎಂ.ವಿ.ರಾಜಮ್ಮ) ಗಂಟಲು ಹೊಡೆದುಕೊಂಡು, ಬಕೆಟ್ಗಟ್ಟಲೆ ಕಣ್ಣೀರು ಸುರಿಸುವ ಮಾತಾಮಣಿ. ಆಕೆಗೆ ಒಬ್ಬ ಮಗ ಸೋಮು (ವಜ್ರಮುನಿ). ಗುಂಡಮ್ಮನಿಗೆ ದ್ವಾರಕಿ (ದ್ವಾರಕೀಶ್) ಮತ್ತು ನಳಿನಿ(ಸುರೇಖಾ) ಎಂಬ ಮಕ್ಕಳು.
ಸೋಮು, ನಳಿನಿ ಸಲಿಗೆಯಿಂದ ಓಡಾಡಿದರೂ ಯಾರೂ ಲೆಕ್ಕಿಸುವುದಿಲ್ಲ.
ಪಾಪಮ್ಮನ ಬಾಯಿಂದ ಉದುರುವ ನೆಗೆದ್ ಬಿದ್ಹೋಗ… ಇತ್ಯಾದಿ ಬಯ್ಗುಳಗಳನ್ನು ಕೇಳೋದೇ ಮಜಾ.
ಭಾರಿ ನಷ್ಟವಾದಾಗ ಹುಟ್ಟಿದ ಮಗುವೆಂದು ತಿಪ್ಪೆಗೆ ಎಸೆದಿರುತ್ತಾನೆ ತನ್ನ ಮೊದಲ ಮಗನನ್ನು ರಾಜಾರಾವ್. ಆ ಹುಡುಗನೇ ಕೃಷ್ಣ(ರಾಜ್ಕುಮಾರ್). ಅವನ ನಿಜವಾದ ತಾಯಿಗೆ ತಾನೇ ನಿಜವಾದ ತಾಯಿ ಎಂಬ ಸತ್ಯ ಸಿನಿಮಾ ಸ್ಟಾರ್ಟ್ ಆದಾಗಲೇ ಗೊತ್ತಾಗುವುದರಿಂದ, ಇಡೀ ಸಿನಿಮ ಈ ಸತ್ಯ ಗೊತ್ತಿರೋ ತಾಯಿ ಮತ್ತು ಸತ್ಯ ಗೊತ್ತಿಲ್ಲದ ಕೃಷ್ಣನ ನಡುವೆ ಅತಿಶಯ(ರೇಕ)ದ ಮಮತೆ. ತಂದೆಯೋ ಮಾತೆತ್ತಿದರೆ ಹಂಟರ್ ತೆಗೆದು ಯಾರಿದ್ದರೂ ಮುಖ ಮೂತಿ ನೋಡದೇ ಬಾರಿಸುತ್ತಿರುತ್ತಾನೆ. ಸಂಪತ್ ಮಗಳು ಗಿರಿಜಳಿಗೆ(ಬೆಡಗಿನ ಭಾರತಿ) ಕೆಲಸದಾಳು ಕೃಷ್ಣನ ಮೇಲೆ ಲವ್ವು. ನಳಿನಿಯನ್ನು ಗರ್ಭಿಣಿ ಮಾಡಿ ಈಗ ಗಿರಿಜಳನ್ನು ಕದ್ದೊಯ್ಯುತ್ತಾನೆ ಸೋಮು. ನಂತರ ಫೈಟಿಂಗ್, ಶುಭಂ.
![](https://chitrodyama.com/wp-content/uploads/2021/02/ThayiDevaru1971Kannadafilm.jpg)
ಭಾರತಿ ಒಂದು ಲೆಫ್ಟ್ ಹ್ಯಾಂಡ್ ಡ್ರೈವ್ ಕಾರು ಓಡಿಸುತ್ತಾರೆ.
ಅಬ್ಬಾ… ಅಣ್ಣಾವ್ರದಂತೂ ಅದ್ಭುತ ನಟನೆ. ಅಮ್ಮನೊಂದಿಗೆ ಪ್ರೀತಿ, ಅಯ್ಯಾವ್ರು ಎಂದರೆ ಭಯ, ಪಾಪಮ್ಮನೊಂದಿಗೆ ಬಾಯಿ ಜೋರು, ಗಿರಿಜಳೊಂದಿಗೆ ಪ್ರೇಮದ ಮಾತು. ಒಂದೇ ಎರಡೇ. ವಜ್ರಮುನಿ ಅಣ್ಣಾವ್ರ ತೊಡೆಯ ಮೇಲೆ ಕಾಲಿಟ್ಟು ತನ್ನ ಶೂಗಳಿಗೆ ಪಾಲಿಷ್ ಹಾಕಿಸಿಕೊಳ್ಳುವ ದೃಶ್ಯ ಆಗ ನೋಡಿದ್ದು ಇನ್ನೂ ನೆನಪಿದೆ. ನಿಮಗೆ ಗೊತ್ತೇ? ಒಂದು ಡಜನ್ ಕಿತ್ತಲೆ ಹಣ್ಣು ಆಗ ಮೂರು ರೂಪಾಯಿ! (1971)
ಹಾಯಾಗಿದೆ ಈ ದಿನ ಮನ ಹಗುರಾಗಿದೆ (ಎಸ್ಜಾನಕಿ, ಪಿಬಿಎಸ್), ಒಂದೇ ಮರದ ಹಣ್ಣುಗಳಲ್ಲಿ ಒಂದೇ ರುಚಿ(ಪಿಬಿಎಸ್), ಬಾಳು ಎಂಬುದು ಮೂರೆ ದಿನ (ಎಲ್ ಆರ್ ಈಶ್ವರಿ), ಇದು ಯಾವ ಫ್ಯಾಷನೋ ಜಾನಿ (ಎಸ್ಪಿಬಿ, ಬಿ.ಕೆ.ಸುಮಿತ್ರ) ಇವು ಹಾಡುಗಳು.