ಮುಂದುವರಿದ ಭಾಗ
1964 ಮತ್ತು 1965 ರಲ್ಲಿ ತೆರೆ ಕಂಡ ಡಾ.ರಾಜಕುಮಾರ್ ನಟನೆಯ ಅನ್ನಪೂರ್ಣ ಮತ್ತು ಸರ್ವಜ್ಞ ಮೂರ್ತಿ ಚಿತ್ರಗಳಲ್ಲಿ ಅವಿಸ್ಮರಣೀಯ ನಟನೆಯನ್ನು ಮಾಡಿದ್ದ ಇವರು 1965 ರಲ್ಲಿ ತೆರೆ ಕಂಡ ಮಹಾಸತಿ ಅನಸೂಯ ಚಿತ್ರದಲ್ಲಿ ಪಾರ್ವತಿಯ ಪಾತ್ರವನ್ನು ನಿರ್ವಹಿಸಿದ್ದರು. 1966 ರಲ್ಲಿ ತೆರೆ ಕಂಡ ಚಿತ್ರ ಸುಬ್ಬಾಶಾಸ್ತ್ರಿ .ಈ ಕಥೆಯನ್ನು ತುಂಬ ಸೊಗಸಾಗಿ ರಚಿಸಲಾಗಿದ್ದು ಈ ಚಿತ್ರದಲ್ಲಿ ತನ್ನ ತಂದೆಗೆ ಮಂಕು ಬೂದಿ ಎರಚಿ ಆಸ್ತಿಯನ್ನು ಹೊಡೆಯಲು ಹೊಂಚು ಹಾಕಿದ ಕಪಟ ಬುದ್ಧಿಯ ಸುಬ್ಬಾಶಾಸ್ತ್ರಿಯ ದುರ್ಗುಣಗಳನ್ನು ತನ್ನ ತಂದೆ ಎದುರಿಗೆ ಟೀಕಿಸಿ ಅವನ ಕೆಟ್ಟ ಬುದ್ಧಿಯನ್ನು ಧಿಕ್ಕರಿಸುವ ದಿಟ್ಟ ಹುಡುಗಿ ಸರಸ್ವತಿಯಾಗಿ ಶ್ರೇಷ್ಠ ನಟನೆಯನ್ನು ಇವರ ರೀತಿ ಇನ್ಯಾರು ಮಾಡಲು ಸಾಧ್ಯವಿಲ್ಲ. 1967 ರಲ್ಲಿ ತೆರೆ ಕಂಡ ಇವರ ಸಹೋದರಿ ನಟಿ ಪಂಡರಿಬಾಯಿ ನಿರ್ಮಾಣದ ಕುಟುಂಬ ಯೋಜನೆಯ ಮಹತ್ವವನ್ನು ಸಾರುವ ಕಥೆಯನ್ನು ಹೊಂದಿದ್ದ ಅನುರಾಧ ಚಿತ್ರದಲ್ಲಿ ಶೀರ್ಷಿಕೆಯ ಪಾತ್ರದಲ್ಲಿ ಅವಿಸ್ಮರಣೀಯ ನಟನೆಯನ್ನು ಮಾಡಿದ್ದರು.
1960 ರ ದಶಕದ ಕೊನೆಯಲ್ಲಿ ನಾಯಕಿಯ ಪಾತ್ರಕ್ಕೆ ಅವಕಾಶಗಳು ಕಡಿಮೆಯಾದ ಕಾರಣ ಹಾಸ್ಯ ಪಾತ್ರಗಳತ್ತ ಗಮನವನ್ನು ಹರಿಸಿದ ಇವರು ಅಮ್ಮ, ಗಂಡೊಂದು ಹೆಣ್ಣಾರು, ಶ್ರೀ ಕೃಷ್ಣ ದೇವರಾಯ ಮತ್ತು ಅಳಿಯ ಗೆಳೆಯ ಚಿತ್ರಗಳಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಗೆ ಸರಿ ಸಾಟಿಯಾಗಿ ನಟಿಸಿ ಮೆಚ್ಚುಗೆಯನ್ನು ಪಡೆದಿದ್ದರು. ಅದರಲ್ಲೂ 1970 ರಲ್ಲಿ ತೆರೆ ಕಂಡ ನಟ ಸಾರ್ವಭೌಮ ಡಾ.ರಾಜಕುಮಾರ್ ನಟನೆಯ ಮೆಗಾ ಬ್ಲಾಕ್ ಬಸ್ಟರ್ ಚಿತ್ರ ಶ್ರೀ ಕೃಷ್ಣ ದೇವರಾಯ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕನ್ನಡ ಚಿತ್ರರಂಗದಲ್ಲಿಯೇ ಮರೆಯಲಾಗದ ಶ್ರೇಷ್ಠ ಚಿತ್ರ ಕೂಡ ಆಗಿದೆ. ಈ ಚಿತ್ರದಲ್ಲಿ ತೆನಾಲಿ ರಾಮಕೃಷ್ಣನ ಮಡದಿಯ ಪಾತ್ರಕ್ಕೆ ನವೀರು ಹಾಸ್ಯದ ಮೂಲಕ ಪಾತ್ರಕ್ಕೆ ಜೀವವನ್ನು ತಂದಿದ್ದರು. ಅದರಲ್ಲೂ ತೆನಾಲಿ ರಾಮಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜುರವರು ಇದ್ದ ಮೇಲೆ ಹಾಸ್ಯಕ್ಕೆ ಕೊರತೆಯಿರುತ್ತದೆಯೇ? ಖಂಡಿತವಾಗಿಯೂ ಇಲ್ಲ. ವಿವಾಹದ ನಂತರ ತಮ್ಮ ವೈಯಕ್ತಿಕ ಜೀವನಕ್ಕೆ ಮಹತ್ವವನ್ನು ಕೊಟ್ಟು ನಟನೆಯಿಂದ ಸುಧೀರ್ಘ ವಿರಾಮ ತೆಗೆದುಕೊಂಡರೂ 1976 ರಲ್ಲಿ ಮುಗಿಯದ ಕಥೆ ಮತ್ತು 1977 ರಲ್ಲಿ ತೆರೆ ಕಂಡ ಭಾಗ್ಯವಂತರು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರೂ 1990 ರ ದಶಕದಲ್ಲಿ ಪೂರ್ಣ ಪ್ರಮಾಣದಲ್ಲಿ ಪೋಷಕ ನಟರಾಗಿ ಪುನಃ ಚಿತ್ರರಂಗಕ್ಕೆ ಹಿಂತಿರುಗಿದ ಇವರು ನಂತರ ಒಬ್ಬರಿಗಿಂತ ಒಬ್ಬರು, ಚಿರಬಾಂಧವ್ಯ,ಭಗವಾನ್ ಶ್ರೀ ಸಾಯಿಬಾಬಾ ಮತ್ತು ಮಣಿಕಂಠನ ಮಹಿಮೆ ಸೇರಿ ಅನೇಕ ಚಿತ್ರಗಳಲ್ಲಿ ಉತ್ತಮ ನಟನೆಯನ್ನು ಮಾಡಿದ್ದರು.
ಅಪ್ಪಟ ಭಾರತೀಯ ನಾರಿಯ ಪಾತ್ರಗಳ ಮೂಲಕ ಚಿರಸ್ಮರಣೀಯವಾಗಿರುವ ಸಹೋದರಿ ನಟಿ ಪಂಡರಿಬಾಯಿಯವರ ಜೊತೆಗೆ ದಿಟ್ಟ ತುಂಟುತನದ ಪಾತ್ರಗಳಲ್ಲಿ ನಟಿಸುತ್ತ ಚಿತ್ರ ಪ್ರೇಮಿಗಳ ಮನದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿರುವ ಇವರು ಕನ್ನಡ ಚಿತ್ರರಂಗದ ಸುವರ್ಣ ಯುಗದ ಪ್ರತಿಭಾವಂತ ನಟಿಯರಲ್ಲಿಯೇ ಒಬ್ಬರು. ದಕ್ಷಿಣ ಭಾರತದ ಜನಪ್ರಿಯ ನಟರಾದ ರಾಜಕುಮಾರ್, ಶಿವಾಜಿ ಗಣೇಶನ್, ಪ್ರೇಂ ನಜೀರ್, ಕಲ್ಯಾಣ ಕುಮಾರ್,ಎಸ್.ಎಸ್.ರಾಜೇಂದ್ರನ್ ಮತ್ತು ರಾಜಾಶಂಕರ್ ಸೇರಿ ಅನೇಕ ಪ್ರಮುಖ ಕಲಾವಿದರೊಂದಿಗೆ ನಟಿಸಿದ್ದ ಹಿರಿಮೆಗೆ ಪಾತ್ರರಾದ ಇವರು ಎಚ್.ಎಲ್.ಎನ್.ಸಿಂಹ, ಬಿ.ವಿಠ್ಠಲಾಚಾರ್ಯ ಟಿ.ವಿ.ಸಿಂಗ್ ಠಾಕೂರ್, ಕೃಷ್ಣನ್-ಪಂಜು ಮತ್ತು ಬಿ.ಆರ್.ಪಂತುಲು ಸೇರಿ ಅನೇಕ ಜನಪ್ರಿಯ ನಿರ್ದೇಶಕ ರೊಂದಿಗೆ ಕೆಲಸವನ್ನು ನಿರ್ವಹಿಸಿದ್ದರು. 1990 ರ ದಶಕದಲ್ಲಿ ಕಿರುತೆರೆಯನ್ನು ಪ್ರವೇಶಿಸಿದ ಇವರು ಅಮ್ಮ ಮತ್ತು ಮನೆತನ ಸೇರಿ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು.
1960 ರ ದಶಕದ ಕೊನೆಯಲ್ಲಿ ಡಾ.ರಾಧಾಕೃಷ್ಣ ಎಂಬುವರನ್ನು ವಿವಾಹವಾದ ಇವರು ತಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡಿದ ಪರಿಣಾಮ ನಟನೆಯಿಂದ ಸುಧೀರ್ಘ ವಿರಾಮ ತೆಗೆದುಕೊಂಡರು. ಇವರಿಗೆ ಶ್ಯಾಮ್ ಸುಂದರ್ ಹಾಗೂ ಗುರುದತ್ ಎಂಬ ಇಬ್ಬರು ಪುತ್ರರು, ಹಾಗೂ ಗಾಯತ್ರಿ ಎಂಬ ಪುತ್ರಿ ಸೇರಿ ಮೂರು ಮಕ್ಕಳು. ಇವರ ಮಗ ಗುರುದತ್ ಕಿರುತೆರೆ ಧಾರಾವಾಹಿಗಳ ನಿರ್ಮಾಪಕ ಮತ್ತು ನಿರ್ದೇಶಕ ಕೂಡ. ಕೃಷ್ಣ ಮತ್ತು ದುರ್ಗಾದೇವಿಯ ಭಕ್ತೆಯಾಗಿದ್ದ ಇವರು ತಮ್ಮ ಪತಿ ರಾಧಾಕೃಷ್ಣ ಮತ್ತು ಮಗ ಶ್ಯಾಮ್ ಸುಂದರ್ ಅವರ ಅಕಾಲಿಕ ಮರಣದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದರು.
ಇಂತಹ ಅಗಾಧ ಪ್ರತಿಭೆಯನ್ನು ಹೊಂದಿದ್ದ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಇವರು ನವೆಂಬರ್ 10, 2012 ರಂದು ತಮ್ಮ 78 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಬೆಂಗಳೂರಿನ ಬಿ.ಜಿ.ಎಸ್.ಗ್ಲೋಬಲ್ ಆಸ್ಪತ್ರೆಯಲ್ಲಿ ಮರಣವನ್ನು ಹೊಂದಿದರು.