‘ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ’ ‘ಹಾಯಾದ ಈ ವೇಳೆ’ ಎನ್ನುತ್ತಾ ಆರತಿ, ‘ನಾರಿಯ ಸೀರೆ ಕದ್ದ’ ಎನ್ನುತ್ತಾ ಜಯಮಾಲಾಳನ್ನು ಬಲೆಗೆ ಹಾಕಿಕೊಳ್ಳುವ ದಾರಿ ತಪ್ಪಿದ ಮಗನ ಪಾತ್ರದ ರಾಜ್ ನಿಜಕ್ಕೂ ಬೇರೆ ಒಂದು ಆಯಾಮದ ನಟನೆ ಮಾಡಿದ್ದಾರೆ. ಅವರ ನಿರ್ಲಕ್ಷ್ಯದ ಮನೋಭಾವವನ್ನು ಬಿಂಬಿಸುವ ಒಂದು ದೃಶ್ಯ. ಎಡಗೈಯಿಂದ ಬಲ ತೋಳಿನ ಮೇಲೆ ಮಿಡಿದು ಧೂಳು ತೆಗೆಯುವ ದೃಶ್ಯ ಇಂದಿಗೂ ನೆನಪಿದೆ.
ಕೃಷ್ಣನ ವೇಷ, ಅದರಲ್ಲಿ ರಾಧಾ ಕೃಷ್ಣ ಇಬ್ಬರ ಕುಣಿತ, ಒಂಟೆಯ ಮೇಲೆ ಮುಂಬೈನಲ್ಲಿ ಆರತಿಯೊಂದಿಗೆ ಬೀಚ್ನ ಲ್ಲಿ ಹೋಗುವ ದೃಶ್ಯ ಚೆಂದ.
ಇನ್ನು ದಾರಿ ತಪ್ಪಿದ ಮಗನ ಅವಳಿ ಸೋದರ ಆ್ಯಬ್ಸೆಂಟ್ ಮೈಂಡೆಡ್ ಪ್ರೊಫೆಸರ್ ಆಗಿ ಕೂಡ ರಾಜ್ ನಟನೆ ಚೆಂದ. ಪತ್ನಿ ಕಲ್ಪನಾ ಮಾರ್ಕೆಟ್ಟಿಗೆ ಹೊರಟಾಗ ಪುಸ್ತಕ ಓದುತ್ತಾ ನಿಂತು, ಬೇರೆ ಯಾರೋ ನೀಲಿ ಸೀರೆ ಉಟ್ಟಾಕೆಯ ಹಿಂದೆ ಹೋಗಿ, ತಬ್ಬಿಬ್ಬಾದಾಗ ಕಲ್ಪನಾ ಬಂದು ಬಿಡಿಸುವ ದೃಶ್ಯ ಮುದ ಕೊಡುತ್ತದೆ.
‘ಕಾಪಾಡು ಶ್ರೀ ಸತ್ಯ ನಾರಾಯಣಾ’ ಹಾಡಿನ ಸಮಯದಲ್ಲಿ ಮನೆಯಲ್ಲಿ ಬಚ್ಚಿಟ್ಟುಕೊಂಡ ದಾರಿ ತಪ್ಪಿದ ಮಗ, ಕಲ್ಪನಾಳ ತಂಗಿ ಮಂಜುಳಾಳ ಮೇಲೆ ಕಣ್ಣು ಹಾಕಿದಾಗ ಸೌಮ್ಯನಾದ ಪ್ರೊಫೆಸರ್ ಸಿಟ್ಟಿಗೇಳುತ್ತಾನೆ.
ಒಟ್ಟಿನಲ್ಲಿ ಮನರಂಜನೆಯ ಭರಪೂರ. ರಾಜ್ ಅವರನ್ನು ದಾರಿ ತಪ್ಪಿದ ಮಗನ ಪಾತ್ರದಲ್ಲಿ ಇಷ್ಟಪಡದ ಅಭಿಮಾನಿಗಳು ಇರಬಹುದು.
ಇದರ ನಿರ್ದೇಶಕ ಪೇಕೆಟಿ ಶಿವರಾಂ ಮೊದಲು ಜಯಂತಿಯನ್ನು ಆರತಿಯ ಪಾತ್ರಕ್ಕೆ ಆರಿಸಿದ್ದರು. ಅವರ ವೈಯಕ್ತಿಯ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದಕ್ಕೆ ಜಯಂತಿಯ ಬದಲಾಗಿ ಆರತಿ ಬಂದರೆಂದು ಓದಿದ ನೆನಪು.