ದಿ ಟ್ರುಮನ್ ಶೋ

1998 ರಲ್ಲಿ ಬಿಡುಗಡೆಯಾದ ಸಿನೆಮಾ ಈಗಿನ ಕಾಲಮಾನಕ್ಕೂ ಪ್ರಸ್ತುತವಾದ ಕಥೆಯನ್ನು ಹೊಂದಿದೆ. ದ್ರಶ್ಯ ಮಾಧ್ಯಮಗಳು ರಿಯಾಲಿಟಿ ಶೋಗಳ ಹೆಸರಲ್ಲಿ ಎಷ್ಟರ ಮಟ್ಟಿಗೆ ಮುಂದುವರೆಯಬಹುದು ಎಂಬುದರ ಮೇಲೆ ಈ ಸಿನೆಮಾ ಬೆಳಕು ಚೆಲ್ಲುತ್ತದೆ ಮತ್ತು ಆ ಒಂದು ಕಲ್ಪನೆಯೇ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ.

ಮೂವತ್ತು ವರ್ಷ ಪ್ರಾಯದ ವಿವಾಹಿತ ಟ್ರೂಮನ್ ಇನ್ಷುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ಸಾಧಾರಣ ವ್ಯಕ್ತಿ. ಅವನ ಜೀವನದಲ್ಲಾಗುವ ಕೆಲವು ಘಟನೆಗಳಿಂದಾಗಿ ಅವನಿಗೆ ಇದ್ದಕ್ಕಿದ್ದಂತೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ಗಮನಿಸುತ್ತಿದ್ದಾರೆ ಹಾಗೂ ತನಗೇ ತಿಳಿಯದಂತೆ ತನ್ನನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅನಿಸಲು ಪ್ರಾರಂ‌ಭವಾಗುತ್ತದೆ. ಈ ಬಗ್ಗೆ ಆತ ಹೆಂಡತಿ ಮತ್ತು ಸ್ನೇಹಿತನಿಗೆ ತಿಳಿಸಿದರೂ ಅವರು ಇದನ್ನು ಆತನ ಭ್ರಮೆಯೆಂದುಕೊಂಡು ಉದಾಸೀನ ಮಾಡುತ್ತಾರೆ.

ಆಗ ಅವನು ಅದರ ಶೋಧನೆಗೆ ತೊಡಗುತ್ತಾನೆ. ನಿಜ ಸಂಗತಿಯೇನೆಂದರೆ ಅವನಿಗೇ ತಿಳಿಯದಂತೆ ಅವನ ಜೀವನವನ್ನು ಎಲ್ಲರೂ ಟಿವಿಯಲ್ಲಿ “ದಿ ಟ್ರುಮನ್ ಶೋ” ಅನ್ನುವ ಹೆಸರಿನಲ್ಲಿ ನೋಡುತ್ತಿರುತ್ತಾರೆ. ಕೇವಲ ಒಂದೆರಡು ತಿಂಗಳುಗಳಿಂದಲ್ಲ ಬರೋಬ್ಬರಿ ಮೂವತ್ತು ವರ್ಷಗಳಿಂದ. ಅಂದರೆ ಟ್ರೂಮನ್ ಹುಟ್ಟಿದ ದಿನದಿಂದಲೇ ಅವನ ಜೀವನ ಟಿವಿಯಲ್ಲಿ ನಾನ್-ಸ್ಟಾಪ್ ಆಗಿ ಬಿತ್ತರಗೊಳ್ಳುತ್ತಲೇ ಇರುತ್ತದೆ ಮತ್ತು ಅವನಿಗೆ ಈ ಬಗ್ಗೆ ಮೂವತ್ತು ವರ್ಷಗಳಿಂದ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಅವನಿಗೇ ಅರಿವಿಲ್ಲದೇ ಜಗತ್ತಿನಾದ್ಯಂತ ಟಿವಿ ಮಾಧ್ಯಮದ ಸೂಪರ್-ಸ್ಟಾರ್ ಆಗಿರುತ್ತಾನೆ ಟ್ರುಮನ್.

ಆದರೆ ಇದೆಲ್ಲ ಸಾಧ್ಯವಾದದ್ದಾದರೂ ಹೇಗೆ? ವ್ಯಕ್ತಿಯೊಬ್ಬ ತನಗೇ ಅರಿವಿಲ್ಲದೇ ರಿಯಾಲಿಟಿ ಶೋ ಒಂದರ ಭಾಗವಾಗಲು ಹೇಗೆ ಸಾಧ್ಯ? ಅದೂ ಕೂಡ ಇಷ್ಟೊಂದು ದೀರ್ಘ ಕಾಲ! ಇದರ ಹಿಂದಿದ್ದ ಅಸಲಿ ಸತ್ಯವೇನು? ಇದನ್ನೆಲ್ಲ ಟ್ರುಮನ್ ಕಂಡುಕೊಂಡನೇ? ಕೊನೆಗೆ ಇದರಿಂದ ಹೊರ ಬರಲು ಸಾಧ್ಯವಾಯಿತೇ?

ಬಹಳಷ್ಟು ಅಚ್ಚರಿಗಳನ್ನು ಒಳಗೊಂಡ ಈ ಸಿನೆಮಾ ಹಾಲಿವುಡ್ ಕ್ಲಾಸಿಕ್ ಸಿನೆಮಾಗಳಲ್ಲೊಂದು. ಸಿನೆಮಾ ಮುಗಿದ ಮೇಲೆ ಖಂಡಿತ ನೀವೊಮ್ಮೆ ನಿಮ್ಮ ಎಡ, ಬಲ, ಮೇಲೆ, ಕೆಳಗೆ ನೋಡಿಕೊಳ್ಳುತ್ತೀರಿ; ಎಲ್ಲಾದರೂ ಕ್ಯಾಮರಾ ಇದೆಯಾ ಎಂದು. ಇದೇ ಈ ಸಿನೆಮಾದ ಗೆಲುವು.

2008 ರಲ್ಲಿ ಪ್ರಸಿದ್ಧ ಮನೋವೈದ್ಯರೊಬ್ಬರು, ತಾವು ರಿಯಾಲಿಟಿ ಶೋ ಒಂದರಲ್ಲಿ ಬದುಕುತ್ತಿದ್ದೇವೆ ಎಂದೇ ಭಾವಿಸಿಕೊಂಡಿರುವ ಐದು ಮಾನಸಿಕ ರೋಗಿಗಳನ್ನು ಭೇಟಿಯಾಗಿರುವ ವಿಚಾರವನ್ನು ತಿಳಿಸಿದರು ಹಾಗೂ ಅವರು ಅಂತಹ ಲಕ್ಷಣವುಳ್ಳ ಕಾಯಿಲೆಗೆ “ದಿ ಟ್ರುಮನ್ ಶೋ ಡೆಲ್ಯುಶನ್” ಎಂದು ಹೆಸರಿಟ್ಟಿದ್ದಾರೆ.

ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply