ಜಗತ್ತಿನ ಚಿತ್ರರಂಗದ ದೈತ್ಯ ಪ್ರತಿಭೆ ‘ಕ್ರಿಸ್ಟೋಫರ್ ನೊಲಾನ್’ ನಿರ್ದೇಶನದ ಹಾಲಿವುಡ್ ಮಾಸ್ಟರ್ ಪೀಸ್ ಸಿನೆಮಾ. ಇದು ಕ್ರೀಸ್ಟೋಫರ್ ಪ್ರೀಸ್ಟ್ ಎಂಬ ಬರಹಗಾರರ ಕಾದಂಬರಿ ಆಧಾರಿತ. ನೊಲಾನ್ ರವರ ಇತರ ಸಿನೆಮಾಗಳಂತೆ ನಾನ್-ಲೀನಿಯರ್ ಶೈಲಿಯ ನಿರೂಪಣೆಯಲ್ಲಿ ಸಾಗುವ ಸಿನೆಮಾ ಬುಧ್ಧಿಗೆ ಕೆಲಸಕೊಡುತ್ತೆ.
19 ನೇಯ ಶತಮಾನದ ಕೊನೆಯ ದಶಕದಲ್ಲಿ ‘ಮ್ಯಾಜಿಕ್ ಶೋ’ಗಳು ಬಹಳವೇ ಜನಪ್ರಿಯವಾಗಿದ್ದ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು ಸಿನೆಮಾದ ಅಂತಿಮ ಕ್ಷಣದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತೆ.
ಒಂದೇ ಮ್ಯಾಜಿಕ್ ಶೋನಲ್ಲಿ ಕೆಲಸ ಮಾಡುವ ಎಂಜಿಯರ್ ಹಾಗೂ ಬೋರ್ಡನ್ ಎಂಬ ಎರಡು ಯುವ ಜಾದುಗಾರರು ಶೋ ನಡೆಯುತ್ತಿರುವಾಗ ಘಟಿಸುವ ಅವಘಡದ ಕಾರಣದಿಂದಾಗಿ ಪರಸ್ಪರ ಶತ್ರುಗಳಾಗುತ್ತಾರೆ. ನಂತರ ಇಬ್ಬರೂ ಬೇರೆ ಬೇರೆಯಾಗಿ ಮ್ಯಾಜಿಕ್ ಶೋ ನಡೆಸಿದರೂ ಕಟು ಪ್ರತಿಸ್ಪರ್ಧಿಗಳಾಗಿ ಪರಸ್ಪರರ ಶೋ ಅನ್ನು ಹಾಳುಮಾಡುತ್ತಿರುತ್ತಾರೆ ಹಾಗೂ ಇನ್ನೊಬ್ಬನಿಗಿಂತ ತನ್ನ ಮ್ಯಾಜಿಕ್ ಟ್ರಿಕ್ ಶ್ರೇಷ್ಠವೆಂದು ತೋರಿಸಿಕೊಳ್ಳಲು ಹವಣಿಸುತ್ತಲೇ ಇರುತ್ತಾರೆ.
ಬೋರ್ಡನ್ ತನ್ನ ಮ್ಯಾಜಿಕ್ ಶೋದಲ್ಲಿ ವಾರ್ಡರೋಬ್ ನ ಒಳಹೊಕ್ಕು ಕ್ಷಣಮಾತ್ರದಲ್ಲಿ ಸ್ಟೇಜ್ ನ ಇನ್ನೊಂದು ಬದಿಯಲ್ಲಿರುವ ಬೇರೆ ವಾರ್ಡರೋಬ್ ನಿಂದ ಹೊರಬರುವ ವಿಶಿಷ್ಠ ಟ್ರಿಕ್ ಒಂದನ್ನು ಕಂಡುಹಿಡಿದು ಅದಕ್ಕೆ ‘ದಿ ಟ್ರಾನ್ಸ್ಪೋರ್ಟೆಡ್ ಮ್ಯಾನ್’ ಎಂದು ಹೆಸರಿಟ್ಟು ಅದನ್ನು ಪ್ರದರ್ಶಿಸಿ ಜನಪ್ರಿಯನಾಗುತ್ತಾನೆ. ಇದರಿಂದ ಈರ್ಷ್ಯೆಗೊಳಗಾಗುವ ಅವನ ಪ್ರತಿಸ್ಪರ್ಧಿ ಎಂಜಿಯರ್ ಆ ಟ್ರಿಕ್ ನ ಸೀಕ್ರೇಟ್ ಏನೆಂದು ತಿಳಿದುಕೊಳ್ಳಲು ಹೊಂಚುಹಾಕುತ್ತಾನೆ.
ಅಲ್ಲಿಂದ ಪ್ರಾರಂಭವಾಗುವ ಕಥೆ ಇಬ್ಬರ ಜೀವನವನ್ನು ತಂದು ನಿಲ್ಲಿಸಿದ್ದು ಎಲ್ಲಿಗೆ? ಕೊನೆಗೂ ಆ ಟ್ರಿಕ್ ನ ಸೀಕ್ರೇಟ್ ಯಾವುದು? ಅದನ್ನು ಮೀರಿಸುವ ಬೇರೆ ಟ್ರಿಕ್ ಅನ್ನು ಎಂಜಿಯರ್ ಕಂಡುಕೊಂಡನೇ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಿನೆಮಾವನ್ನು ನೋಡಬೇಕು.
ಎಲ್ಲಿಯೂ ಬೋರು ಹೊಡೆಸದೆ ನೋಡಿಸಿಕೊಂಡು ಹೋಗುವ ಸಿನೆಮಾ ಕ್ಲೈಮಾಕ್ಸ್ ನಲ್ಲಿ ದೊಡ್ಡದಾದ ಶಾಕ್ ಅನ್ನು ನೀಡುತ್ತದೆ.
ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ