ಸಂಸಾರ ಕಲಹದ ಸಿನಿಮಾಗಳನ್ನು ನೋಡೀ ನೋಡೀ ಸುಸ್ತಾಗಿದ್ದ ನನಗೆ ಈ ಚಂದಮಾಮಾ ಕತೆ ಬಹಳವೇ ತಾಜಾ ಎನಿಸಿದ್ದರೆ ಅಚ್ಚರಿಯೇನು?! ಇದು 1967ರ ಚಿತ್ರ.
ವಿಜಯ (ರಾಜ್‍ಕುಮಾರ್) ಒಬ್ಬ ಜೂಜುಕೋರ. ದಾಳ ಹಾಕಿದರೆ ಅವನು ಗೆದ್ದಂತೆಯೇ. ಅವನನ್ನು ಮೋಸಗೊಳಿಸುತ್ತಾರೆ ಅನೇಕರು. ಮನೆಯ ಎಲ್ಲವನ್ನೂ ಪಣದಲ್ಲಿ ಸೋತಿರುತ್ತಾನೆ. ಅಮ್ಮ (ಬಿ.ಜಯಶ್ರೀ) ಮತ್ತು ತಮ್ಮ ಗುರು (ನರಸಿಂಹರಾಜು) ಅವನ ಬಗೆಗೆ ಬೇಸರಿಸುತ್ತಾರೆ. ಕೊನೆಗೆ ದೇವರ ಕೋಣೆಯಲ್ಲಿನ ಒಂದು ರೂಪಾಯಿ ಕೊಟ್ಟು ಆಡು ಹೋಗು ಎಂದು ತಾಯಿ ಕಳಿಸುತ್ತಾಳೆ.
ಯಾರೂ ಸಿಗುವುದಿಲ್ಲ ಆಡಲು. ಪುರೋಹಿತ ಅವನನ್ನು ನಟರಾಜನ ಗುಡಿಯಲ್ಲಿ ಕೂಡಿಹಾಕುತ್ತಾನೆ. ಶಿವನೊಂದಿಗೇ ಆಡಿ ಗೆದ್ದು ಡಮರುಗ ತೆಗೆದುಕೊಳ್ಳುತ್ತಾನೆ. ಅದನ್ನು ಆಡಿಸಿದಾಗ ರಂಭೆ ಬರಲಿ ಎನ್ನುತ್ತಾನೆ. ರಂಭೆ (ಜಯಂತಿ) ಬಂದೇ ಬರುತ್ತಾಳೆ. ಇವನು ಡಮರುಗ ಆಡಿಸಿದರೆ ಅವಳು ಕುಣಿಯುತ್ತಾಳೆ.
ಶಿವನ ಇಚ್ಛೆಯಂತೆ ಅವನ ಪತಿಯಾಗಿರಲು ಒಪ್ಪಿಕೊಳ್ಳುತ್ತಾಳೆ ರಂಭೆ. ಆದರೆ ಮತ್ತೊಬ್ಬ ನರ್ತಕಿಯೊಂದಿಗೆ (ಶೈಲಶ್ರೀ) ಪೈಪೋಟಿ ನಡೆಯುವಾಗ ರಂಭೆಯೊಂದಿಗೆ ದೇವಲೋಕಕ್ಕೆ ಬಂದು ಅವಿತಿದ್ದ ವಿಜಯ ಕಾಣಿಸಿಕೊಂಡಾಗ ದೇವೇಂದ್ರ ರಂಭೆಯನ್ನು ಕಲ್ಲಾಗೆಂದು ಶಪಿಸುತ್ತಾನೆ.
ಅವಳನ್ನು ಮತ್ತೆ ಅವಳ ರೂಪಕ್ಕೆ ಮರಳಿ ತರುವುದೇ ಈ ಕಥೆ.
ನರಸಿಂಹರಾಜು ಮಾವಿನ ಓಟೆಯನ್ನು ನುಂಗಿ ಅವನು ನಕ್ಕಾಗೆಲ್ಲಾ ರತ್ನಗಳು ಉದುರುತ್ತವೆ. ರಮಾದೇವಿ ಮತ್ತು ವಿಜಯಲಲಿತ ಅವನನ್ನು ಮೋಸಗೊಳಿಸಿ ಅವನ ಮಾವಿನ ಓಟೆ ಪಡೆಯುತ್ತಾರೆ. ನರಸಿಂಹರಾಜು ಅವರಿಬ್ಬರನ್ನೂ ಕ್ರಮಶಃ ನಾಯಿ ಮತ್ತು ಕೋತಿ ಮಾಡುತ್ತಾನೆ.
ಅನೇಕಾನೇಕ ನೃತ್ಯಗಳಿವೆ. ವಿಜಯಲಲಿತ, ಶೈಲಶ್ರೀ, ಜಯಂತಿ ಮತ್ತು ಮತ್ತೊಬ್ಬಾಕೆ (ಈಕೆ ಎಂ.ಪಿ.ಶಂಕರ್ ಎದುರಿಗೆ ನೃತ್ಯ ಮಾಡುತ್ತಾಳೆ)
ಒಂದು ಪೈಪೋಟಿ ನೃತ್ಯದ ಹಾಡು ಸುಂದರ. ಎಸ್‍ಜಾನಕಿ ಮತ್ತು ಪಿ.ಸುಶೀಲಾ ಹಾಡಿರುವ ಶಾಸ್ತ್ರೀಯ ರಾಗಗಳಾಧಾರಿತ ಹಾಡು. ‘ಯಾರೆನ್ನ ಸರಿಸಾಟಿಯೇ’ ನಿಜಕ್ಕೂ ಅದ್ಭುತ ಗಾನ.
ಅಣ್ಣಾವ್ರು ಒಂದು ದಿನದ ಇಂದ್ರನಾಗಿ ವರುಣನನ್ನು ತರಾಟೆಗೆ ತೆಗೆದುಕೊಳ್ಳುವಾಗ, “ಏನಯ್ಯಾ, ರೈತರಿಗೆ ಬೇಕಾದಾಗ ಮಳೆ ಕೊಡಲ್ಲ. ಬೇಡದಿದ್ದಾಗ ಪ್ರವಾಹ ಉಂಟುಮಾಡಿ ಹಳ್ಳಿಗಳನ್ನೇ ನಾಶ ಮಾಡ್ತೀಯಾ? ಹಾಗೆ ಮಾಡಬೇಡ” ಎಂದದ್ದು ಇಂದಿನ ಪರಿಸ್ಥಿತಿಯನ್ನು ನೆನಪಿಸಿತು.
ರಾಜ್‍ಕುಮಾರ್‍ಗೆ ರಾಜ್‍ರೇ ಸಾಟಿ. ಅದ್ಭುತವಾಗಿ ಹಾಸ್ಯ, ಶೃಂಗಾರ, ಶೋಕ ಎಲ್ಲವನ್ನೂ ನಟಿಸಿದ್ದಾರೆ. ಜಯಂತಿ ನೃತ್ಯ ಮತ್ತು ಅಭಿನಯ ಎರಡರಲ್ಲೂ ಚಂದ. ನರಸಿಂಹರಾಜುವಿನ ಪಾತ್ರ ನಿರ್ವಹಣೆ ಅಚ್ಚುಕಟ್ಟು.