ಧೂಮಕೇತು

ಸಾಮಾನ್ಯವಾಗಿ ಯಾರಾದರೂ ದುಷ್ಟರು ನಮ್ಮ ಜೀವನವನ್ನು ಪ್ರವೇಶಿಸಿದರೆ, ಧೂಮಕೇತುವಿನಂತೆ ಬಂದರು ನಮ್ಮ ಬಾಳಲ್ಲಿ ಎಂದುಕೊಳ್ಳುತ್ತೇವೆ. 1968ರ ಈ ಚಿತ್ರದಲ್ಲಿ ಮುಖ್ಯ ಖಳ ಡಿಸೌಜಾ (ಉದಯಕುಮಾರ್) ಬಹಳ ಹೆಮ್ಮೆಯಿಂದ ತನ್ನನ್ನು ತಾನು ಧೂಮಕೇತು ಎಂದುಕೊಳ್ಳುತ್ತಾನೆ!

ಅವನೂ ಅವನ ಆರು ಜನ ಶಿಷ್ಯರು ಬ್ಯಾಂಕಿನಿಂದ ಹಣ ತರುತ್ತಿದ್ದ ಬಡಪಾಯಿಯೊಬ್ಬನಿಂದ ಹಣ ಅಪಹರಿಸುತ್ತಾರೆ. ಅದರಲ್ಲಿ ಮೂರು ಜನ (ನಾಗಪ್ಪ+ ಇಬ್ಬರು) ಡಿಸೌಜಾಗೆ ಡಬಲ್‍ಕ್ರಾಸ್ ಮಾಡಿ ಆ ಹಣವನ್ನು ಲಪಟಾಯಿಸಿ ಕಣ್ಮರೆಯಾಗುತ್ತಾರೆ. 

ಚಿರತೆ ಮುಂತಾದ ಕಾಡುಪ್ರಾಣಿಗಳನ್ನು ಬೇಟೆಯಾಡುವ ಪ್ಲೇಬಾಯ್ ಕುಮಾರ್ (ರಾಜ್‍ಕುಮಾರ್) ಡಿಸೌಜಾನ ಬಲೆಗೆ ಸಿಕ್ಕಿ ಬೀಳುತ್ತಾನೆ. ಅವನಿಂದ ತಪ್ಪಿಸಿಕೊಳ್ಳುವುದೇ ಈ ಧೂಮಕೇತು ಕಥೆ.

ಕುಮಾರ್‍ಗೆ ಶೀಲಾ (ಉದಯಚಂದ್ರಿಕಾ) ಎಂಬ ಗೆಳತಿ, ಪಟ್ಟಾಭಿ (ನರಸಿಂಹರಾಜು) ಎಂಬ ವಿಜ್ಞಾನಿ ಗೆಳೆಯ ಇರುತ್ತಾರೆ. ಶೈಲಶ್ರೀ ಸಿ.ಐ.ಡಿ.ಯಾಗಿದ್ದು ಕ್ಲಬ್‍ನಲ್ಲಿ ಎಲ್ ಆರ್ ಈಶ್ವರಿ ಧ್ವನಿಯಲ್ಲಿ ‘ಒಂದು ತಾ ಇಂದು ತಾ’ ಎಂದು ಹಾಡಿ ಕುಣಿಯುತ್ತಾಳೆ.

ಮಿಕ್ಕ ಮೂವರು ಖದೀಮರಲ್ಲಿ ಶಕ್ತಿಪ್ರಸಾದ್ ಗುರುತು ಸಿಕ್ಕಿತು. ನಟ ಸಂಪತ್, ಕುಮಾರ್‍ನ ತಂದೆಯ ಸೆಕ್ರೆಟರಿ. ಕೆ.ಎಸ್.ಅಶ್ವತ್ಥ್ ಕಮಿಷನರ್. ಆತನ ತಮ್ಮನ ಮಗ ಕುಮಾರ್. ಕಮಿಷನರ್ ಕೊಲೆಯಾಗಿ ಅದರ ಆಪಾದನೆ ಕುಮಾರ್ ಮೇಲೆ ಬರುವಂತೆ ಡಿಸೌಜಾ ಹುನ್ನಾರ ಮಾಡುತ್ತಾನೆ. ರಂಗ ಇನ್ಸ್‌ಪೆಕ್ಟರ್. ಕಮಿಷನರ್ ಕೊಲೆಗಾರನ ಪತ್ತೆಗೆ ನಿಯೋಜಿಸಲ್ಪಟ್ಟಿರುತ್ತಾನೆ.

ಪಿ. ಸುಶೀಲಾ ದನಿಯಲ್ಲಿ ಒಂದು ಹಾಡು ಅಹಾ ಅಹಾ ಇದೇನು ನಡೆ. ಪಿ.ಬಿ.ಎಸ್. ಕೂಡ ಇದನ್ನು ಬೇರೆಯಾಗಿ ಹಾಡಿದ್ದಾರೆ.

ಪ್ರಭಾತ್ ಸರ್ಕಸ್‍ನ ದರ್ಶನ ಮಾಡಬಹುದು. ಈಗೆಲ್ಲಾ  ಸರ್ಕಸ್‍ನಲ್ಲಿ ಇಷ್ಟೊಂದು ಪ್ರಾಣಿಗಳಿಲ್ಲವೇ ಇಲ್ಲ. ಕರಡಿ ಮೊಪೆಡ್ ಓಡಿಸೋದು ವಿಶೇಷ ಎನ್ನಿಸಿತು. ಸರ್ಕಸ್‍ನಲ್ಲಿ ‘ರಂಗು ರಂಗಿನಾಟ ಈ ಬೆಳಕಿನ ಚೆಲ್ಲಾಟ’ ಹಾಡು ಪಿ.ಸುಶೀಲಾ ದನಿಯಲ್ಲಿದೆ.

ರಾಜ್‍ಕುಮಾರ್ ಟ್ರಿಮ್… ವೆರಿ ಟ್ರಿಮ್. ತುಂಟತನದ ನಟನೆಯಿದೆ. ನೋಡಲು ಬಹಳ ಬಹಳ ಅಂದವಾಗಿದ್ದಾರೆ. ಸಲೀಸಾಗಿ ನಟಿಸಿ, ಕುಣಿದು, ಪ್ರೇಮಿಸಿ, ಫೈಟ್ ಮಾಡಿದ್ದಾರೆ. 

ಸುಮಾರು 177 ನಿಮಿಷಗಳ ಸಿನಿಮಾ ಈ ಧೂಮಕೇತು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply