ಎಂ ಎಸ್ ರಾಜಶೇಖರ್ ನಿರ್ದೇಶನದ ಈ 1985ರ ಯಶಸ್ವೀ ಚಿತ್ರವು ವಿಜಯ ಸಾಸನೂರ ಅವರ ಅಪರಂಜಿ ಕಾದಂಬರಿ ಆಧಾರಿತ.
ಆ ಸಮಯದಲ್ಲಿ ನಟಿ ಮಹಾಲಕ್ಷ್ಮಿ ನಟಿಸಿದ ಅಪರಂಜಿ ಎಂಬ ಚಿತ್ರ ಬಂದಿದ್ದರಿಂದ ಈ ಚಿತ್ರಕ್ಕೆ ಧ್ರುವ ತಾರೆ ಎಂಬ ಹೆಸರಿಟ್ಟರೆಂದು ನೆನಪು.
ಬಾಲಣ್ಣ ತಮ್ಮ ಹಿಂದಿನ ಕಾಲದ ವಿಲನಿಯನ್ನು ಇಲ್ಲಿ ಪುನರಾವರ್ತಿಸಿದ್ದಾರೆ. ಸಾಕ್ಷಾತ್ಕಾರ ಮತ್ತು ಚಂದವಳ್ಳಿಯ ತೋಟ ಚಿತ್ರಗಳ ಅವರ ದುಷ್ಟತನ ನೋಡಿದರೆ ಮೈ ಮೇಲೆ ಚೇಳುಗಳು ಓಡಾಡಿದಂತಾಗುತ್ತದೆ. ತಮಿಳು ನಟಿ ದೀಪ ಬಾಲಕೃಷ್ಣರಿಗೆ ಸರಿಸಾಟಿ ದುಷ್ಟೆಯ ಪಾತ್ರ ಮಾಡಿದ್ದಾರೆ. ತೂಗುದೀಪ ಶ್ರೀನಿವಾಸ್ ವಿಲನಿ ಶೈನ್ ಆಗುವುದಿಲ್ಲ ಇವರಿಬ್ಬರ ಮುಂದೆ!
ಸಾಗರ್(ರಾಜ್ಕುುಮಾರ್) ತಂದೆ (ರಾಜಾನಂದ್), ಸಾಗರ್ ತಾಯಿ ಸತ್ತಾಗ ಬಾಲಕೃಷ್ಣನ ತಂಗಿಯನ್ನು ಎರಡನೆ ಮದುವೆ ಮಾಡಿಕೊಂಡು ತನ್ನ ಹೊಸ ಹೆಂಡತಿ ಮತ್ತು ಆಕೆಯ ಅಣ್ಣ ಬಾಲಕೃಷ್ಣನ ಕೈಗೊಂಬೆಯಾಗುತ್ತಾನೆ. ಸಾಗರ್ ಕಾಳಿಂಗರಾಯನ (ಬಾಲಣ್ಣನ ಹೆಸರು ಈ ಚಿತ್ರದಲ್ಲಿ) ಕೈಯಲ್ಲಿ ಪೆಟ್ಟು ತಿಂದು ನರಳುತ್ತಾನೆ. ಮನೆಗೆಲಸದ ಪಾಪಮ್ಮ ಊಟ ಹಾಕಿರುತ್ತಾಳೆ. ದೊಡ್ಡವನಾದ ಸಾಗರನ ಮೇಲೇ ಬಿದ್ದು ಒದ್ದಾಡುತ್ತಾಳೆ ಸರಳ (ದೀಪ). ಆದರೆ ಸಾಗರನ ಮನದಲ್ಲಿ ಪ್ರತಿಷ್ಠಾಪಿತಳಾಗಿರುವವಳು ಅವನ ಮೇಷ್ಟರ (ಸದಾಶಿವ ಬ್ರಹ್ಮಾವರ) ಪುತ್ರಿ ಸುಧಾ (ಗೀತಾ). ತನ್ನನ್ನು ಸಾಗರ್ ಮದುವೆ ಆಗಲು ನಿರಾಕರಿಸಿದಾಗ ಕಾಳಿಂಗರಾಯನ ಈ ಏಕೈಕ ಮಗಳು ನಾಗಿಣಿಯಾಗಿ ಜಿಲ್ಲಾಧಿಕಾರಿ ಪವನ್ ಕುಮಾರ್ (ತೂಗುದೀಪ ಶ್ರೀನಿವಾಸ್) ಕೈ ಹಿಡಿದು ಅವನ ಕಿವಿಯಲ್ಲಿ ಸಾಗರ್ ಬಗ್ಗೆ ವಿಷ ತುಂಬುತ್ತಾಳೆ. ತನ್ನ ಹಳ್ಳಿಗೆ ಹಿಂದಿರುಗಿದ ಮಾಜೀ ಚಿತ್ರ ಕಲಾವಿದ ಹಾಲೀ ವಕೀಲ ಸಾಗರ್ ಕಾಳಿಂಗರಾಯನ ಮೇಲೆ ನೇರ ಯುದ್ಧಕ್ಕೆ ನಿಲ್ಲುವಂತಾಗುತ್ತದೆ…
ರೈತರ ಸಹಕಾರ ಚಳುವಳಿ, ಸತ್ಯಾಗ್ರಹ ಮುಂತಾದ ಶಾಂತ ಪ್ರತಿಭಟನೆಗೆ ಸಾಗರ್ ಸಾರಥಿಯಾಗಬೇಕಾಗುತ್ತದೆ.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಸಾವಿನ ಸನ್ನಿವೇಶ ನಮ್ಮ ದೇಶದ ಮಾಯಲಾಗದ ಗಾಯದ ಮೇಲೆ ಮತ್ತೆ ಉಪ್ಪು ಉಜ್ಜಿದಂತಾಗುತ್ತದೆ.
ಹೊನ್ನವಳ್ಳಿ ಕೃಷ್ಣ, ಕೆ ಎಸ್ ಅಶ್ವತ್ಥ್, ಶಾಂತಮ್ಮ, ಶಿವರಾಂ, ಅಶ್ವತ್ಥ್ ನಾರಾಯಣ (ಈತನ ವಿಲನಿ ನೋಡಲು ಚಂದವಳ್ಳಿಯ ತೋಟ ನೋಡಬೇಕು. ಜೊತೆಗೆ ಕೆಟ್ಟ ಬುದ್ಧಿಯ ಪಾಪಮ್ಮ. ಅಬ್ಬಾ..!) ನಾನು ಗುರುತಿಸಿದ ಕೆಲವರು.
ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಕನಿಷ್ಠ ಪಕ್ಷ ಎರಡು ಜನಪ್ರಿಯ ಹಾಡುಗಳಿವೆ. ಆ ರತಿಯೇ ಧರೆಗಿಳಿದಂತೆ (ಅಣ್ಣಾವ್ರು ಮತ್ತು ಬೆಂಗಳೂರು ಲತಾ ಹಮ್ಮಿಂಗ್), ಆ ಮೋಡ ಬಾನಲ್ಲಿ ತೇಲಾಡುತಾ(ರಾಜ್ಕುೆಮಾರ್, ಬೆಂಗಳೂರು ಲತಾ ಮತ್ತು ವಾಣಿ ಜಯರಾಂ), ಓ ನಲ್ಲೇ ಸವಿನುಡಿಯ (ರಾಜ್ಕು್ಮಾರ್, ವಾಣಿ ಜಯರಾಂ) ಮತ್ತು ನ್ಯಾಯವೆಲ್ಲಿ ಅಡಗಿದೆ (ಜಾನಕಿಯಮ್ಮನವರ ಜೊತೆಗೆ ರಾಜ್). ಉಪೇಂದ್ರ ಕುಮಾರ್ ಅವರ ನೇಪಥ್ಯ ಸಂಗೀತ ಕೂಡ ಚಂದವಿದೆ.