1971ರ ಈ ಸಿದ್ದಲಿಂಗಯ್ಯ ನಿರ್ದೇಶನದ ಚಿತ್ರದ ಕಥೆ ಹೀಗಿದೆ.
ಕೃಷ್ಣ (ರಾಜ್‍ಕುಮಾರ್) ಒಬ್ಬ ಕಾರ್ ಮೆಕ್ಯಾನಿಕ್. ತನ್ನ ತಮ್ಮ ರಾಮುವಿನಲ್ಲಿ (ರಾಜಾಶಂಕರ್) ಪ್ರಾಣವನ್ನೇ ಇಟ್ಟಿರುತ್ತಾನೆ. ಇವರಿಬ್ಬರ ತಾಯಿ ಲಕ್ಷ್ಮಿ (ಆದವಾನಿ ಲಕ್ಷ್ಮೀದೇವಿ). ಈಕೆಯ ಅಣ್ಣ ಬಾಲಣ್ಣ (ಬಾಲಕೃಷ್ಣ ಮತ್ತೆ ಒಳ್ಳೆಯವನ ಪಾತ್ರದಲ್ಲಿ!). ಈತನಿಗೆ ಒಬ್ಬ ಬೆಳೆದ ಮಗಳು ತಾರಾ (ಬಿ.ವಿ.ರಾಧಾ). ದೈಹಿಕವಾಗಿ ಓಕೆ. ಮಾನಸಿಕವಾಗಿ ಇನ್ನೂ ಹದಿನಾಲ್ಕು ಹದಿನೈದರ (ಆಗಿನ ಕಾಲದ!) ಪ್ರಾಯ.
ಕಾರು ರಿಪೇರಿ ಮಾಡಿಸಲು ಬಂದ ಶ್ರೀಮಂತೆ ಭಾಮಾ (ಬೆಡಗಿನ ಭಾರತಿ) ಸ್ಟೈಲಾಗಿ ಸ್ಕರ್ಟ್ ಬ್ಲೌಸ್ ಧರಿಸಿ ಬಂದಿರುತ್ತಾಳೆ. ಎರಡು ಮೂರು ಸಲ ಕೃಷ್ಣ, ಭಾಮಾರ ಭೇಟಿ ಆಗುತ್ತದೆ. ಒಮ್ಮೆ ಅವಳನ್ನೂ, ಅವಳ ಗೆಳತಿಯರನ್ನೂ ರೌಡಿಗಳಿಂದ ರಕ್ಷಿಸುತ್ತಾನೆ. ನಿಮ್ಮ ವೇಷವೂ ರೌಡಿಗಳ ನಡತೆಗೆ ಕಾರಣ ಎನ್ನುತ್ತಾನೆ ಕೃಷ್ಣ. ಮರುದಿನ ಭಾಮಾ ಹಾಜರ್. ಮೈ ತುಂಬಾ ಸೆರಗನ್ನು ಹೊದ್ದು, ಮುಖದಲ್ಲಿ ನಾಚಿಕೆ, ಹಣೆಯಲ್ಲಿ ಚಂದ್ರನಷ್ಟು ಅಗಲದ ಕುಂಕುಮ. ‘ಹೆಣ್ಣೂ ಎಂದರೆ ಹೀಗಿರಬೇಕು’ ಎಂದು ಹಾಡುತ್ತಾನೆ ಕೃಷ್ಣ.
ಮದುವೆ ಆಗಿಬಿಡುತ್ತಾಳೆ ಕೃಷ್ಣನನ್ನು. ಅವಳ ಸೋದರತ್ತೆ ಪಾಪಮ್ಮ (ಸಾಕ್ಷಾತ್ ಪಾಪಮ್ಮನೇ… ದ ಮೋಸ್ಟ್ ಮಾಡ್ರನ್) ಅವಳಿಗೆ ಕುಮ್ಮಕ್ಕು ಕೊಟ್ಟು ತವರಿಗೆ ಎಳೆದೊಯ್ಯುತ್ತಾಳೆ. ಪಾಪ, ಅವಳು ಗಂಡನೊಂದಿಗೆ ಸಿನಿಮಾ ನೋಡಬೇಕೆಂದರೆ ಆ ತಾರಾ ಬಿಡಬೇಕಲ್ಲ. ಗಂಡ ಹೆಂಡಿರ ನಡುವೆ ಬರುತ್ತಾಳೆ. ಕೋಪ ಬರೋದಿಲ್ವೇ ಭಾಮಾಗೆ?
ಆದರೆ ಉಳಿದ ಐವರು ಮನೆಯಲ್ಲಿ ‘ನಮ್ಮ ಸಂಸಾರ ಆನಂದ ಸಾಗರ’ ಎಂದು ಹಾಡುತ್ತಾರೆ. ರಾಮು ಐ.ಎ.ಎಸ್ ಪಾಸ್ ಮಾಡುತ್ತಾನೆ. ಆಗ ಭಾಮಾಳ ಅಣ್ಣ (ನಿರಂಜನ್) ಮತ್ತೆ ತನ್ನ ಮತ್ತೊಬ್ಬ ತಂಗಿ ಫಾರಿನ್ ರಿಟರ್ನ್ಡ್ ಪುಷ್ಪಾಳನ್ನು (ಪದ್ಮಾಂಜಲಿ) ರಾಮುವಿನ ಮೇಲೆ ಛೂ ಬಿಡುತ್ತಾನೆ. ಅವಳು ಓ ಮೈ ಡಾರ್ಲಿಂಗ್ ಎಂದು ಮನೆಯಲ್ಲೇ ಪಾರ್ಟಿಯಲ್ಲಿ ನರ್ತಿಸುತ್ತಾಳೆ. ಮನೆ ಮುರಿದುಹೋಗುತ್ತದೆ. ಕೃಷ್ಣನಿಗೆ ಎದೆ ನೋವು ಬರುತ್ತದೆ.
ದೊಡ್ಡವನ ಗತಿಯನ್ನು ಹಾಗೆ ಮಾಡಿದ ಚಿಕ್ಕವನಿಗೆ ಅಮ್ಮ ಶಾಪ ಕೊಟ್ಟಿರುತ್ತಾಳೆ. ಅವನು ನಾಶನವಾಗುತ್ತಾನೆ. ಪೊಲೀಸ್ ಫ್ರಾಡ್ ಕೇಸ್‍ನಲ್ಲಿ ಸಿಕ್ಕಿಕೊಂಡು ರೈಲಿಗೆ ಸಿಕ್ಕಿಕೊಳ್ಳಲು ಹೋಗುವಾಗ ಅಣ್ಣ ಓಡಿ ಬಂದು ಕಾಪಾಡುತ್ತಾನೆ. ನಂತರ ಶುಭಂ.
ದಿನೇಶ್ ಅತಿಥಿ ಪಾತ್ರದಲ್ಲಿ ರಾಮುವಿನ ಮನಸ್ಸು ಮುರಿಯಲು ಸಹಾಯಕವಾಗುವ ಎಲ್ಲ ಕೆಲಸಗಳನ್ನೂ ಪುಷ್ಪಳೊಂದಿಗೆ ಮಾಡುತ್ತಾನೆ.
ರಾಜ್ ಮನೆಯ ಹಿರಿಯ ಮಗನ ಪಾತ್ರದಲ್ಲಿ ಅಚ್ಚುಕಟ್ಟು. ಎಲ್ಲರ ಮೇಲೆ ಪ್ರೀತಿ, ಹೆಂಡತಿ ಮೇಲೆ ಮುನಿಸು, ತಮ್ಮನನ್ನು ಬೇಡಿಕೊಳ್ಳುವುದು, ಅವನಿಂದ ಏಟು ತಿನ್ನುವುದು, ತನಗೆ ಹುಷಾರಿಲ್ಲದಾಗ ಎಲ್ಲರೂ ದುಡಿಯುವುದನ್ನು ಕಂಡು ಹಲುಬುವುದು ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ರಾಧಾ ಮಾಮೂಲಿ. ತನ್ನ ಪಾತ್ರಕ್ಕೆ ನ್ಯಾಯವೇ ಎಂದಿಗೂ. ಆದವಾನಿ ಲಕ್ಷೀದೇವಿಯನ್ನು ಇತ್ತೀಚೆಗೆ ಕೆಟ್ಟ ಹೆಣ್ಣಿನ ಪಾತ್ರದಲ್ಲಿ ಕಂಡೂ ಕಂಡೂ ಯಾವಾಗ ಏನು ಮಾಡುವಳೋ ಎಂಬ ಆತಂಕ ಕಾಡುತ್ತದೆ! ಪಾಪ ರಾಜಾಶಂಕರ್… ಮನೆಯವರನ್ನು ಧಿಕ್ಕರಿಸಿ ಹೋಗಿ, ನಂತರ ಬಂದು ಅಳುವ ಪಾತ್ರ ಅವರಿಗೆ ಬಹಳವೇ ಸಿಕ್ಕಂತಿದೆ. ಬಾಲಣ್ಣನವರಿಗೆ ಹ್ಯಾಟ್ಸಾಫ್… ಪಾಪಮ್ಮನನ್ನು ಗೋಳು ಹುಯ್ದುಕೊಳ್ಳುವ ಪಾತ್ರದಲ್ಲಿ ಎನ್‍ಜಾಯ್ ಮಾಡಿದ್ದಾರೆ. ನಮ್ಮ ಸಂಸಾರ ಕಣ್ಣೀರ ಸಾಗರ ಎಂಬ ಪ್ಯಾಥೋಸ್ ಸಾಂಗ್ ಪೀಸ್ ಕೂಡ ಇದೆ. ಭಾರತಿ ಎಲ್ಲ ರೀತಿಯ ವೇಷಗಳಲ್ಲೂ ಚೆನ್ನಾಗಿ ನಟಿಸಿದ್ದಾರೆ.