ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಅಂಬರೀಷ್ ಅಭಿನಯದ ಮೊದಲ ಚಿತ್ರವಾಗಿದ್ದು ಬಿಡುಗಡೆಯಾದ ದಿನಗಳಲ್ಲಿ ಹೊಸ ದಾಖಲೆ ಬರೆದ ಈ ಚಿತ್ರದ ಕುರಿತು ಕೆಲವು ಸ್ವಾರಸ್ಯಕರ ಸಂಗತಿಗಳಿವೆ. ತರಾಸುವರು ಬರೆದ ಎರಡು ಹೆಣ್ಣು, ಒಂದು ಗಂಡು ಮತ್ತು ಸರ್ಪ ಮತ್ಸರ ಎನ್ನುವ ಮೂರು ಕಾದಂಬರಿಗಳನ್ನು ಆಧರಿಸಿ ರೂಪಿತವಾದ ಚಲನಚಿತ್ರ. ಅಂಬರೀಷ್ ಮತ್ತು ವಿಷ್ಣುವರ್ಧನ್ ಎಂಬ ಮೇರು ಪ್ರತಿಭೆಗಳು ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಚರಿತ್ರೆ ನಿರ್ಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ತರಾಸು ಅವರ ಕಾದಂಬರಿಯಲ್ಲಿ ಕಥೆಯು ಒಳಾಂಗಣದಲ್ಲಿ ಪಡೆಯುವುದರಿಂದ
ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಣ ಮಾಡಿದರು. ಈ ಚಿತ್ರೀಕರಣದ ನಂತರ ದುರ್ಗದ ಸೇರ್ಪಡೆ ಈ ಚಿತ್ರಕ್ಕೆ ಒಂದು ಕಳೆ ತಂದಿತಲ್ಲದೆ ಚಿತ್ರದುರ್ಗದ ಕೋಟೆ ಪ್ರವಾಸಿಗರ ನೆಚ್ಚಿನ ಸ್ಥಳವಾಯಿತು. ಬಜೆಟ್ ದೃಷ್ಟಿಯಿಂದ ಚಿತ್ರ ದುಬಾರಿಯಾದರೂ ಒರಟು ರಾಮಾಚಾರಿ ಪಾತ್ರದಲ್ಲಿ ವಿಷ್ಣುವರ್ಧನ್ ನಟನೆ ಎಷ್ಟು ಉತ್ತಮವಾಗಿತ್ತೆಂದರೆ ಹೇಳಲು ಪದಗಳು ಕೂಡ ಸಾಲುವುದಿಲ್ಲ ಮತ್ತು ಚಿಕ್ಕ ಪಾತ್ರವಾದರೂ ಬುಲ್ ಬುಲ್ ಮಾತನಾಡಕಿಲ್ವ ಎಂದು ನಾಯಕಿಯನ್ನು ಚುಡಾಯಿಸುವ ಜಲೀಲ್ ಎನ್ನುವ ಖಳನ ಪಾತ್ರದಲ್ಲಿ ಅಂಬರೀಷ್ ಅವರನ್ನು ಬಿಟ್ಟು ಇನ್ಯಾರನ್ನು ಊಹಿಸಲು ಸಾಧ್ಯವಿಲ್ಲ.
”ಬುಲ್ ಬುಲ್ ಮಾತನಾಡಕಿಲ್ವ”
ಈ ಚಿತ್ರದ ಸಂಭಾಷಣೆ ಇಂದಿಗೂ ಜನಪ್ರಿಯವಾಗಿದ್ದು ಈಗಾಗಲೇ ಇದೇ ಹೆಸರಿನಲ್ಲಿ ೨೦೧೩ ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಕನ್ನಡ ಚಿತ್ರವೊಂದು ತೆರೆ ಕಂಡು ಯಶಸ್ಸುಗಳಿಸಿದೆ. ವಿಷ್ಣುವರ್ಧನ್ ಮತ್ತು ಅಂಬರೀಷ್ ವೃತ್ತಿ ಜೀವನದ ಚಿತ್ರಗಳಲ್ಲಿ ಮತ್ತು ಹಲವು ವಿಷಯಗಳಲ್ಲಿ ನಾಗರಹಾವು ಚಿತ್ರ ಇಂದಿಗೂ ಮೊದಲ ಸ್ಥಾನದಲ್ಲಿದೆ. ಹಾಡುಗಳು ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ನೋಡುಗರ, ಕೇಳುಗರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ. ಅದರಲ್ಲೂ ನಾಯಕಿ ಅಲುಮೇಲು ಮದುವೆಯ ನಂತರ ತನ್ನ ಜೀವನ ನರಕವಾದುದನ್ನು ಕಥೆ ಹೇಳುವೆ ನನ್ನ ಕಥೆ ಹೇಳುವೆ ಎಂದು ಹಾಡಿನ ಮೂಲಕ ಹೇಳುವ ಕಥೆಯನ್ನು ಕೇಳುವವರ ಎಂತಹ ಮನಸ್ಸು ಕೂಡ ದುಃಖಿಸುತ್ತದೆ. ನಂತರ ರಾಮಾಚಾರಿಯ ಜೀವನದಲ್ಲಿ ಬರುವ ಮಾರ್ಗರೇಟ್ ಪಾತ್ರ, ಚಿತ್ರದ ಪ್ರಮುಖ ಆಕರ್ಷಣೆ ನಟ ಅಶ್ವಥ್ ರ ಚಾಮಯ್ಯ ಮೇಷ್ಟ್ರು ಪಾತ್ರ ವಿಶಿಷ್ಟವಾಗಿದೆ. ರಾಮಾಚಾರಿ ಮತ್ತು ಮಾರ್ಗರೇಟ್ ನಡುವೆ ಉದಯಿಸಿದ ಪ್ರೇಮಕ್ಕೆ ಅಡ್ಡಿ ಬರುವ ಜಾತಿ ಭೇದ, ಸಮಾಜದಲ್ಲಿನ ಕಠೋರ ಸಂಪ್ರದಾಯದಿಂದ ಬೇಸತ್ತು ಈ ಜೋಡಿಗಳು ಪ್ರಾಣವನ್ನು ಕಳೆದುಕೊಳ್ಳುವ ಮೂಲಕ ದುರಂತ ಅಂತ್ಯ ಕಾಣುವ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಮೋಡಿ ಮಾಡುವ ಸಾಮರ್ಥ್ಯ ಹೊಂದಿರುವ ಉತ್ತಮ ಕ್ಲಾಸಿಕಲ್ ಚಲನಚಿತ್ರವಾಗಿದೆ.
ಲೇಖಕರು : ಶ್ರೀ ಸಂದೀಪ್ ಜೋಶಿ