ನಾದಮಯ…

Annavru

ಕಲೆಗೆ ಮುಖ್ಯವಾದದ್ದು ಭಾವ.ಕವನಕ್ಕೆ ಅದರದ್ದೇ ಭಾವವಿದೆ.ಕಚಗುಳಿಯಿಡುವ ತುಂಟತನದ ಭಾವದಿಂದ ಹಿಡಿದು ವಿಷಾದ ರಸದ ಭಾವದವರೆಗೆ. ಬರವಣಿಗೆಯಲ್ಲೂ ಇರಬೇಕು ಅದರದ್ದೇ ಒಂದು ಭಾವ.ಅದಿಲ್ಲದಿದ್ದರೆ ಬರವಣಿಗೆ ಪೀಚು ಪೀಚು. ನಟನೆಗಂತೂ ಅತಿಮುಖ್ಯ ಮುಖಭಾವವೇ. ಭಾವವಿಲ್ಲದ ನಟನೆ ಉಪ್ಪಿಲ್ಲದ ಊಟ.ಗಾಯನಕ್ಕೂ ಅತಿ ಮುಖ್ಯ ಅಂಶ ಭಾವ.ಒಟ್ಟಾರೆ ಕಲಾಮಾಧ್ಯಮದ ಜೀವಾಳವೇ ಭಾವ.

ಕವಿತೆ ,ಬರಹಗಳ ಭಾವದ ವಿಷಯಕ್ಕೆ ಬಂದರೆ ಅಲ್ಲಿರುವ ಭಾವ ಬರಹಗಾರನ ಭಾವವೂ ಹೌದು,ಓದುಗನ ಭಾವವೂ ಹೌದು.ಕವನದ ವಿಷಯಕ್ಕೆ ಬಂದರಂತೂ ಎಷ್ಟೋ ಸಲ ಕವಿಯ ಭಾವಕ್ಕೂ ,ಓದುಗ ಕವಿತೆಯಲ್ಲಿ ಕಂಡು ಕೊಳ್ಳುವ ಭಾವಕ್ಕೂ ಅಜಗಜಾಂತರ.ಹಾಗಾಗಿ ಅಲ್ಲೊಂದು ಭಾವ ಯಾವತ್ತಿಗೂ ಸಾಪೇಕ್ಷ.ಆದರೆ ಸಿನಿಮಾ,ರಂಗದ ನಟನೆ ಮತ್ತು ಸಂಗೀತ ಹಾಗಲ್ಲ.ಅಲ್ಲಿನ ಭಾವಗಳು ಬಹುತೇಕ ಸಾರ್ವತ್ರಿಕ.ದುಃಖದ ಸನ್ನಿವೇಶ,ಗಾಯನಗಳು ಪ್ರತಿ ಕೇಳುಗನಿಗೂ ನೋಡುಗನಿಗೂ ಅದದೇ ಭಾವ.ಭಾವ ತಲುಪಿದರೆ ನಟ ಗೆದ್ದಂತೆ.ಭಾವ ಕೇಳುಗನ ಮನತಣಿಸಿದರೆ ಗಾಯಕ ಗೆದ್ದಂತೆ.

ನಟನೆಯಲ್ಲಿ ಭಾವ ತುಂಬುವ ,ಜೀವ ತುಂಬ ಜನರಿದ್ದಾರೆ.ಹಿಂದೆಯೂ ಇದ್ದರು.ಅಂದಿನ ದಿಲಿಪ್ ಕುಮಾರ್‌ರಿಂದ ಹಿಡಿದು ಇಂದಿನ ಮೋಹನ್ ಲಾಲ್‌ರವರೆಗೂ ಸಾವಿರಾರು ಮನೋಜ್ಞ ನಟರನ್ನ ಕಂಡಿದೆ ಚಿತ್ರರಂಗ. ಸಂಗೀತದ ಕ್ಷೇತ್ರದಲ್ಲೂ ಆವತ್ತಿನ ಮಹ್ಮದ ರಫಿಯಿಂದ ಹಿಡಿದು ಇಂದಿನ ಎಸ್ಪಿಬಿಯವರೆಗೆ ಸಾಲು ಸಾಲು ಭಾವುಕ ಗಾಯಕರಿದ್ದಾರೆ.ಆದರೆ ನಟನೆಯಷ್ಟೇ ಅದ್ಭುತವಾಗಿ ಗಾಯನಕ್ಕೆ ಭಾವ ತುಂಬುವವರಿದ್ದಾರಾ ಅಥವಾ ಇದ್ದರೆ..? ಎಂಬ ಪ್ರಶ್ನೆಯೊಂದು ಕಾಡುತ್ತಿತ್ತು ಬೆಳಿಗ್ಗೆ.ಉತ್ತರವಾಗಿ ಒಂದೆರಡು ಹೆಸರುಗಳು ನೆನಪಾದವಾದರೂ ಸ್ಪಷ್ಟವಾಗಿ ಉತ್ತರವಾಗಿ ನಿಂತಿದ್ದು ಡಾ.ರಾಜ್‌ಕುಮಾರ್ ಮಾತ್ರ.

ಹಿಂದೆ ಕುಂದನ್‌ಲಾಲ್ ಸೆಹ್ಗಲ್ ನಟನೆ ಮತ್ತು ಗಾಯನ ಎರಡನ್ನೂ ಮಾಡುತ್ತಿದ್ದರಂತೆ.ಅವರನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಯೂ ಟ್ಯೂಬ್‌ನಲ್ಲಿ ನೋಡಿರುವುದರ ಹೊರತು ಅವರ ಪರಿಚಯ ನನಗಿಲ್ಲ.ಕಿಶೋರ್ ಕುಮಾರ್ ಸಹ ಆರಂಭದ ದಿನಗಳಲ್ಲಿ ನಟನೆ ಮತ್ತು ಗಾಯನವೆಂಬ ಎರಡು ದೋಣಿಯ ಸವಾರರಂತೆ ವರ್ತಿಸಿದರೂ ಅವರ ಮಾಂತ್ರಿಕ ಗಾಯನದ ಮುಂದೆ ನಟನೆ ಸಾಕಷ್ಟು ಸಪ್ಪೆಯೇ.

ಆದರೆ ರಾಜ್..?? ರಾಜ್ ಹಾಗಲ್ಲ. ನಟನೆಯೆಂದರೇನು ಎನ್ನುವುದು ಪರಿಚಯವಾಗುವ ಮುನ್ನವೇ ರಾಜಣ್ಣನ ಧ್ವನಿಯ ಪರಿಚಯವಾಗಿತ್ತು.ನನಗಾಗಿ ಐದಾರು ವರ್ಷ ವಯಸ್ಸು.ಮನೆಗಳಲ್ಲಿ ಬೆಳಗಾದ ತಕ್ಷಣ ಟೇಪ್ ರೆಕಾರ್ಡರ್ ‌ನಲ್ಲಿ ಕ್ಯಾಸೆಟ್ ತುರುಕಿ,’ಕೌಸಲ್ಯ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ಥತೆ’ಎಂದು ಸುಪ್ರಭಾತ ಹಾಡಿಸುವ ಕಾಲವದು.ನಮ್ಮ ಮನೆಯ ಕತೆ ಚೂರು ಬೇರೆಯದಿತ್ತು. ಮನೆಯ ಮಕ್ಕಳು ಬೆಳಗಿನ ಅರೆಮಂಪರಿನ ನಿದ್ರೆಯಲ್ಲಿ ಹಾಸಿಗೆಯ ಮೂಲೆಯಲ್ಲೆಲ್ಲೋ ಬಿದ್ದಿರುವ ಚಾದರವನ್ನು ಮೈ ಮೇಲೆ ಎಳೆದುಕೊಳ್ಳುವ ಹೊತ್ತಿಗೆ ನಮ್ಮ ಕಿವಿಗೆ ಬೀಳುತ್ತಿದ್ದದ್ದು ರಾಜಕುಮಾರ ಧ್ವನಿ.ಅದೆಷ್ಟು ಚಂದ ಹಾಡುತ್ತಿದ್ದರು ರಾಜಣ್ಣ.ಆಂಜನೇಯನ ಕುರಿತಾಗಿ,’ಆಕಾಶ ಭೂಮಿಗಳ ಒಂದು ಮಾಡಿ ನಿಂತ’ ಎನ್ನುವುದೊಂದು ಹಾಡು,’ವಿಜಯ ವಿನಾಯಕನೇ ಹರಸುತನೇ’ ಎನ್ನುವ ಮತ್ತೊಂದು ಹಾಡು,’ಏನೇ ಮಾಡು ನಿನ್ನನು ನಾನು ಮರೆಯೋ ನನ್ನಪ್ಪ’ ಎನ್ನುವ ಅಯ್ಯಪ್ಪ ಕೀರ್ತನೆ.ಪ್ರತಿ ಹಾಡಿನಲ್ಲಿಯೂ ಭಕ್ತಿಯೆಂಬ ಭಾವದ ಉತ್ಕಟ ಸ್ಪುರಣೆ.ನಿಜಕ್ಕೂ ತುಂಬ ಕಾಲ ನಾನು ರಾಜಕುಮಾರ ಎಂಬ ಮಹಾನ್ ನಟನ ಪ್ರಧಾನ ವೃತ್ತಿಯೇ ಗಾಯನ ಎಂದುಕೊಂಡಿದ್ದ ಮುಗ್ಧ ಕಾಲವೊಂದಿತ್ತು.

ಆದರೆ ಮುಂದೆ ನನ್ನದು ವಿಷ್ಣುವರ್ಧನ್ ಅಭಿಮಾನದ ಕಾಲ.ಅವರ ನಟನೆ ಮತ್ತು ಮ್ಯಾನರಿಸ್ಂ ತುಂಬ ಇಷ್ಟವಾಗುತ್ತಿತ್ತು ಎನ್ನುವುದು ಮುಖ್ಯ ಕಾರಣವಾದರೂ ಅವರೂ ಸಹ ನನ್ನಂತೆಯೇ ಎಡಗೈ ಬಳಕೆದಾರ ಎನ್ನುವುದು ಮತ್ತೊಂದು ಕಾರಣವಾಗಿತ್ತು.ಅಷ್ಟಾಗಿಯೂ ರಾಜ್‌ರ ಗಾಯನ ಶಕ್ತಿಯೆಡೆಗೆ ನನ್ನದು ಮುಗಿಯದ ಮೆಚ್ಚುಗೆ.ನಟಿಸುವಾಗ ಪಾತ್ರವೇ ತಾವಾಗುವ ರಾಜಣ್ಣ,ಹಾಡುವಾಗಲೂ ಅಷ್ಟೇ ಸುಲಭವಾಗಿ ಯಾವ ಭಾವಕ್ಕಾದರೂ ಜೀವವಾಗುವ ಬಗೆಯೊಂದು ತೀರದ ಅಚ್ಚರಿ ನನಗೆ.ಇಂದು ಬೆಳಿಗ್ಗೆಯಷ್ಟೇ ,’ಓಂ’ ಸಿನಿಮಾದ ‘ಓ ಗುಲಾಬಿಯೇ’ ಹಾಡು ಕೇಳುತ್ತಿದ್ದೆ.ಕಣ್ಮುಚ್ಚಿ ಕೇಳುತ್ತ ಹೋದರೆ ಹೆಣ್ಣೊಬ್ಬಳಿಗೆ ಅವಳ ತಪ್ಪನ್ನು ಹಿರಿಯರೊಬ್ಬರು ಬಿಡಿಸಿ ಹೇಳುವ ಭಾವವಿತ್ತು ಅಲ್ಲಿ.ಅಂಥದ್ದೇ ಇನ್ನೊಂದು ಹಾಡು ‘ಆಕಸ್ಮಿಕ’ ಸಿನಿಮಾದ ‘ಬಾಳುವಂತ ಹೂವೇ’ಯ ಫಿಲಾಸಫಿಯನ್ನು ರಾಜಣ್ಣನಿಗಿಂತ ಸ್ಪಷ್ಟವಾಗಿ ,ಭಾವಪೂರ್ಣವಾಗಿ ಹಾಡುವುದು ಇನ್ಯಾರಿಗಾದರೂ ಸಾಧ್ಯವಿತ್ತಾ..?ಗೊತ್ತಿಲ್ಲ.ಹಾಗೆಂದು ಅದೊಂದೇ ಭಾವಕ್ಕೆ ಸೀಮಿತರಾಗಲಿಲ್ಲ ರಾಜಕುಮಾರ.ಅದೇ ಆಕಸ್ಮಿಕ ಸಿನಿಮಾದಲ್ಲಿ,’ಆಗುಂಬೆಯಾ ಪ್ರೇಮ ಸಂಜೆಯಾ’ ಎಂದು ಅದೆಷ್ಟು ಪ್ರೇಮ ಭಾವದಲ್ಲಿ ಹಾಡಿದರು ಗಾನಗಂಧರ್ವ ಅಲ್ಲವಾ..? ‘ಓಹೋಹೋಹೋ ಪ್ರೇಮ ಕಾಶ್ಮೀರ’ ಎನ್ನುವಾಗಿನ ಧ್ವನಿಯ ಮಾಧುರ್ಯ ಒಬ್ಬ ಮಹಾನ್ ನಟನದ್ದು ಎಂಬುದು ಅಪರಿಚಿತ ಕೇಳುಗನಿಗೆ ಅರ್ಥವಾದರೂ ಆದೀತಾ..?

ಇವು ಒಂದೆರಡು ಉದಾಹರಣೆಗಳಷ್ಟೇ.ಹೇಳ ಹೊರಟರೇ ಅದೆಷ್ಟೋ ಭಾವಗಳು ಲೀಲಾಜಾಲ ನಟ ಸಾರ್ವಭೌಮನಿಗೆ. ‘ಜಗವೇ ಒಂದು ರಣರಂಗ’ಎನ್ನುತ್ತ ಮಗನ ನಟನೆಗೆ ಧ್ವನಿಯಾಗುವ ರಾಜಣ್ಣ,ಏನನ್ನೋ ಸಾಧಿಸುವ ಛಲದ ಕುರಿತು ಮಾತನಾಡುತ್ತಿದ್ದಾರೆ ಎನ್ನಿಸಿದರೆ,’ಹೃದಯ ಸಮುದ್ರ ಕಲಕಿ’ ಎನ್ನುವಾಗ ಕೇಳುಗನಲ್ಲೊಂದು ವೀರಾವೇಶದ ಉನ್ಮಾದ ಉಂಟಾದರೆ,’ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಎನ್ನುವಾಗ ಭಾಷೆ ಅಭಿಮಾನ ಸಣ್ಣಗೆ ಕೆರಳಿದರೇ ಅದು ಅಣ್ಣಾವ್ರೆಂಬ ಗಾನಕೋಗಿಲೆಯ ಭಾವಗಾಯನ ಶಕ್ತಿಯ ಸಬೂತು.ಇನ್ನುಳಿದಂತೆ ‘ನಾದಮಯ’ ಮತ್ತು ‘ಕವಿರತ್ನ ಕಾಳಿದಾಸ’ ಸಿನಿಮಾದ ಹಾಡುಗಳ ಕುರಿತು ಮಾತನಾಡುವ ಜ್ಞಾನ ಮತ್ತು ಯೋಗ್ಯತೆ ನನಗಿಲ್ಲವಾದುದರಿಂದ ಆ ಬಗ್ಗೆ ಹೇಳಲಾರೆ.

ಅದೊಂದು ಸಮಯವಿತ್ತು.ನಟನೆಂದರೆ ವಿಷ್ಣುವರ್ಧನ್ ಮಾತ್ರ ,ಅವರ ಮುಂದೆ ಇನ್ಯಾರು ಇಲ್ಲ ಎನ್ನುವ ನನ್ನ ಅಪಕ್ವ ಮನಸ್ಥಿತಿಯ ಕಾಲ.ರಾಜ್ ಅಭಿಮಾನಿಗಳೊಂದಿಗೆ ಶರಂಪರ ಕಿತ್ತಾಡುವ ಕಾಲವೂ ಇತ್ತು.ಈಗ ಕಾಲ ಬದಲಾಗಿದೆ. ಕಾಲದೊಂದಿಗೆ ಮನಸ್ಥಿತಿಯ ಬದಲಾವಣೆ. ಒಂದೇ ಕಾಲಘಟ್ಟಕ್ಕೆ ಎರಡು ಮಹಾನ್ ಪ್ರತಿಭೆಗಳ ಅಸ್ತಿತ್ವ ಸಾಧ್ಯವಿದೆ ಮತ್ತು ಎರಡೂ ಚೇತನಗಳ ಪ್ರತಿಭೆಯನ್ನು ಏಕಕಾಲಕ್ಕೆ ಗೌರವಿಸುವುದು ಸಹ ಸುಲಭ ಎನ್ನುವುದು ಅರಿವಾದ ಕಾಲಕ್ಕೆ ಬರೆಯಬೇಕಿದ್ದ ಬರಹ ಅದೇಕೋ ಮನಸಿನಾಳದಲ್ಲೆಲ್ಲೋ ಕಳೆದು ಹೋಗಿತ್ತು.ಇವತ್ತು ಬೆಳಿಗ್ಗೆ ಕಾಡಿದ ಸಣ್ಣದ್ದೊಂದು ಪ್ರಶ್ನೆಗೆ ಹುದುಗಿದ್ದ ಬರಹ ಧುತ್ತೆಂದು ಏಕಾಏಕಿ ಪ್ರತ್ಯಕ್ಷ .ಹಾಗಾಗಿ ಈಗ ಇದನ್ನಿಲ್ಲಿ ಬರೆದೆನಷ್ಟೇ..

ಲೇಖಕರು : ಗುರುರಾಜ ಕೊಡ್ಕಣಿ

Gururaj Kodkani

Gururaj Kodkani

ಗುರುರಾಜ್ ಕೊಡ್ಕಣಿ ಹಾಯ್ ಬೆಂಗಳೂರು ಹಿಮಾಗ್ನಿ ಪತ್ರಿಕೆಗಳ ಜನಪ್ರಿಯ ಅಂಕಣಕಾರ.‌ ಇವರು ಮೂಲತಃ ಯಲ್ಲಾಪುರದವರು. ಇವರು ಹವ್ಯಾಸಿ ಬರಹಗಾರರು. ಅನೇಕ ಪತ್ರಿಕೆಗಳು ಈಗಾಗಲೇ ಇವರ ಲೇಖನಗಳನ್ನು ಪ್ರಕಟಿಸಿವೆ, ಪ್ರಕಟಿಸುತ್ತಿವೆ. ಶತಕಂಪಿನಿ ಎಂಬ ಕಥಾಸಂಕಲನ ಕೂಡ ಇವರ ಲೇಖನಿಯಿಂದಲೇ ಬಂದದ್ದು. ಚಿತ್ರರಂಗದ ಬಗೆಗಿನ ವಿಶಿಷ್ಟ ವಿಚಾರಗಳನ್ನು ಇವರು ಓದುಗರೊಡನೆ ಚಿತ್ರೋದ್ಯಮ.ಕಾಂ ಮೂಲಕ ಹಂಚಿಕೊಳ್ಳಲಿದ್ದಾರೆ.

Leave a Reply