
ನಾವೆಲ್ಲಾ ನಮ್ಮ ಜೀವನದಲ್ಲಿ ಪೂರ್ತಿಯಾಗಿ ಮನಸಿಟ್ಟು ನೋಡಿರುವ ಒಟ್ಟು ಚಲನಚಿತ್ರಗಳನ್ನು ಲೆಕ್ಕ ಹಾಕಿದರೆ ನೂರೋ ಇನ್ನೂರೋ ಇರಬಹುದು. ಆದರೆ ಈ ಮಹಾನುಭಾವ ನಟಿಸಿರುವ ಚಿತ್ರಗಳೇ ಇನ್ನೂರಕ್ಕೂ ಹೆಚ್ಚು. ಅಂದರೆ ಸರಿಸುಮಾರು ನಾವು ಜೀವಮಾನವಿಡೀ ನೋಡಿರುವ ಚಿತ್ರಗಳ ಒಟ್ಟು ಸಂಖ್ಯೆ, ಈ ದೇವರು ನಾಲ್ಕು ದಶಕಗಳಲ್ಲಿ ಅಭಿನಯಿಸಿರುವ ಚಿತ್ರಗಳಿಗಿಂತ ಕಡಿಮೆ ಎನ್ನಬಹುದೇನೋ.
ಹೌದು. ಆ ಮಹಾನುಭಾವನ ಹೆಸರು “ರಾಜಕುಮಾರ”. ಯಾವುದೋ ರಾಜ್ಯಕ್ಕೆ ಮಾತ್ರ ರಾಜ ಎಂದುಕೊಂಡರೆ ಬಹುಷಃ ನಮ್ಮತಹ ಮೂರ್ಖರಿಲ್ಲ. ಕನ್ನಡ ಚಿತ್ರರಂಗವೆಂಬ ಮಹಾನ್ ಸಾಮ್ರಾಜ್ಯವನ್ನು ಐದು ದಶಕಗಳು ಆಳಿದ “ಚಕ್ರವರ್ತಿ” ಎನ್ನಬಹುದು. ಯಾವುದೇ ಶಾಲೆಯಲ್ಲಿ ಕಲಿಯಲಿಲ್ಲ. ಯಾವುದೇ ಕಾಲೇಜಲ್ಲಿ ಓದಲಿಲ್ಲ, ಬರೆಯಲಿಲ್ಲ. ಆದರೂ ಅಭಿನಯದಲ್ಲಿ ಇವರೇ ಒಂದು ನಟನೆಯ ವಿಶ್ವವಿದ್ಯಾಲಯ ಎಂಬಷ್ಟು ಎತ್ತರಕ್ಕೆ ಬೆಳೆದರು.ಬಾಳಿದರು.
ಅಪ್ಪ ಅಮ್ಮ ಇಟ್ಟ ಹೆಸರು – ಮುತ್ತುರಾಜ. ಸಿನಿಮಾ ಕೊಟ್ಟ ಹೆಸರು – ರಾಜಕುಮಾರ್. ಆದರೂ ಅವರನ್ನು ಕನ್ನಡಿಗರು ಪ್ರೀತಿಯಿಂದ ಕರೆಯುವುದು ಮಾತ್ರ ಅಣ್ಣಾವ್ರು ಅಂತಲೇ. ಸುಮಾರು ಇನ್ನೂರ ಐದು ಚಿತ್ರಗಳ ಅಭಿನಯ, ಸಾವಿರಾರು ಹಾಡುಗಳ ಗಾಯಕ – ಅಣ್ಣಾವ್ರ ಸಿನಿಮಾಗಳ ಬಗೆಗಿನ ವಿಶಿಷ್ಟ ಪರಿಚಯವನ್ನು ದಿನಕ್ಕೊಂದು ಚಿತ್ರದ ಪರಿಚಯದಂತೆ ಕನ್ನಡದ ಹಿರಿಯ ಲೇಖಕ, ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಸೃಷ್ಟಿಸಿದ ಕಾದಂಬರಿಕಾರ – ಶ್ರೀ ಯತಿರಾಜ್ ವೀರಾಂಬುಧಿ ಯವರು ಚಿತ್ರೋದ್ಯಮ.ಕಾಮ್ ಮೂಲಕ ಮಾಡಿಕೊಡಲಿದ್ದಾರೆ.
ನಾಳೆಯಿಂದ ದೈನಂದಿನ ಅಂಕಣ – “ನಾನೇ ರಾಜಕುಮಾರ”.
ಚಿತ್ರೋದ್ಯಮ.ಕಾಮ್ ನಲ್ಲಿ ತಪ್ಪದೇ ಓದಿ.