“ನಿಗೂಢ ರಹಸ್ಯ” (1991)

ಸಿನೆಮಾ ಶುರುವಿನಲ್ಲಿಯೇ ನಮಗೆ ಭಯಾನಕ ಅನುಭವವಾಗುತ್ತದೆ!!!!

ಅದು ರಾತ್ರಿ ಸಮಯ. ನಾಯಕ ಆ ಸ್ಥಳಕ್ಕೆ ಸೈಟ್ ಇಂಜನಿಯರ್ ಆಗಿ ಬಂದಿರುತ್ತಾನೆ. ಆತ ರೈಲಿನಿಂದ ಇಳಿದು, ಹೊರಬಂದು ತಾನು ಹೋಗಬೇಕಾದ ಜಾಗ ಹೇಳಿದರೆ ಯಾವ ಆಟೋದವರೂ ಅಲ್ಲಿಗೆ ಬರಲು ಒಪ್ಪುತ್ತಿಲ್ಲ. “ಕತ್ತಲಾದ ಮೇಲೆ ಯಾರು ಬರ್ತಾರೆ ಸ್ವಾಮಿ ಅಲ್ಲಿಗೆ?” ಎನ್ನುತ್ತಿದ್ದಾರೆ. ಕಡೆಗೊಬ್ಬ ಬರಲು ಒಪ್ಪುತ್ತಾನೆ. ಆದರೆ ಆತನ ಹೆಸರೋ ‘ಭೂತಯ್ಯ’ ಅಂತ. ಮುಖ ಬೇರೆ ತೋರಿಸುತ್ತಿಲ್ಲ ಆತ.

ಆಟೋ ಚಲಿಸುತ್ತಿದೆ. ನಾಯಿಗಳು ಬೊಗಳುತ್ತಿವೆ.‌ ಸುತ್ತಲೂ ಕತ್ತಲೆ. ಹೀಗಿರುವಾಗ ನಾಯಕನಿಗೆ ಆ ಆಟೋ ಚಾಲಕನ ಮುಖದ ಒಂದು ಪಾರ್ಶ್ವ ಕನ್ನಡಿಯ ಮೂಲಕ ಕಾಣುತ್ತದೆ. ಆ ಭಾಗ ಸುಟ್ಟು ವಿಕಾರವಾಗಿ ಕಾಣುತ್ತಿರುತ್ತದೆ. ಆ ಆಟೋದವನು ಒಂದೆಡೆಯಲ್ಲಿ ಆಟೋ ನಿಲ್ಲಿಸಿ, ನಾಯಕನನ್ನು ಸೀಟಿನಿಂದ ಬೀಳಿಸಿ ಹೊರಟೇ ಹೋಗುತ್ತಾನೆ.‌ ಏಕೆಂದರೆ ಆ ಏರಿಯಾದಲ್ಲಿ ಆಟೋ ನಿಲ್ಲಿಸಲೂ ಸಹ ಭಯ ಆತನಿಗೆ. ಅಂತಹಾ ಏರಿಯಾಗೆ ಕತ್ತಲೆ ಹೊತ್ತಿನಲ್ಲಿ ನಮ್ಮ ಹೀರೋ ಬಂದಿದ್ದಾನೆ.

ಈಗವನ ಕಥೆಯೇನು……?

ಈಗ ಆ ಏರಿಯಾದಲ್ಲಿ ಕರೆಂಟ್ ಹೋಗಿದೆ. ಜನರು ಯಾವುದೋ ಅರಿಯದ ಕಾರಣಕ್ಕೆ ಭಯ ಪಡುತ್ತಿದ್ದಾರೆ. ಆ ಭಯ ಏನೆಂದರೆ ಆ ಏರಿಯಾದಲ್ಲಿ ಪ್ರತಿದಿನ ಕರೆಂಟ್ ಹೋದಾಗಲೂ ಒಬ್ಬೊಬ್ಬರು ನಾಪತ್ತೆಯಾಗುತ್ತಿರುತ್ತಾರೆ ಮತ್ತು ಕೆಲವು ದಿನಗಳ ನಂತರ ಹೆಣವಾಗಿ ಸಿಗುತ್ತಿರುತ್ತಾರೆ. ಹಾಗಾಗಿ ಕರೆಂಟ್ ಹೋದಾಗಲೆಲ್ಲಾ ತಮ್ಮಲ್ಲಿ ಯಾರು ಮಾಯವಾಗುತ್ತಾರೆ ಎಂದು ಯೋಚಿಸಿ ಜನರಿಗೆ ಭಯವಾಗುತ್ತಿರುತ್ತದೆ. ಈ ಕೆಲಸವನ್ನು ಒಂದು “ಭೂತ” ಮಾಡುತ್ತಿರುತ್ತದೆ ಅಂತ ಜನರ ನಂಬಿಕೆ.

ಅಲ್ಲಿ ನಾಯಕನಿಗೆ ನಾಯಕಿಯ ಪರಿಚಯವಾಗುತ್ತದೆ. ನಾಯಕಿಯ ಅಕ್ಕನೂ ಅದೇ ರೀತಿಯಲ್ಲಿ ಮಾಯವಾಗಿರುತ್ತಾಳೆ ಅಂತ ನಾಯಕನಿಗೆ ಗೊತ್ತಾಗುತ್ತದೆ.‌ ಅವನಿಗೆ ಭೂತ-ಪ್ರೇತದ ಮೇಲೆಲ್ಲಾ ನಂಬಿಕೆ ಇರುವುದಿಲ್ಲ. ಅವನು ತನ್ನ ಪಾಡಿ್ಗೆಗೆ ಕೆಲಸ ಮಾಡಿಕೊಂಡು ಇರುತ್ತಾನೆ.

ಹೀಗೇ ಇರುವಾಗ ಒಂದು ದಿನ ಒಬ್ಬ ವ್ಯಕ್ತಿ ತಾನು ದೊಡ್ಡ ಬಿಲ್ಡಿಂಗ್ ಕಟ್ಟಿಸುತ್ತಿರುವುದಾಗಿಯೂ, ಅದಕ್ಕೆ ನೀವೇ ಇಂಜನಿಯರ್ ಆಗಬೇಕೆಂದು ಹೇಳಿ ಒಂದು ಅಡ್ರೆಸ್ ಕೊಟ್ಟು ಸಂಜೆ ಭೇಟಿಯಾಗಲು ತಿಳಿಸುತ್ತಾನೆ. ಸಾಯಂಕಾಲ ನಾಯಕ ಖುಷಿಯಿಂದ ಅಲ್ಲಿಗೆ ಹೋಗುತ್ತಾನೆ. ಅವರ ಪ್ರಾಜೆಕ್ಟ್ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ.

ಆದರೆ ಆಚೆ ಬರುತ್ತಿರುವಾಗ ಪೊಲೀಸರು ಅವನನ್ನು ತಡೆದು ನಿಲ್ಲಿಸುತ್ತಾರೆ. ನಾಯಕ ತಿರುಗಿ ನೋಡಿದರೆ ಈಗ ಕೆಲ ನಿಮಿಷದ ಹಿಂದೆ ತಾನು ಒಳಹೋಗಿ ಡೀಲ್ ಮುಗಿಸಿದ್ದ ಮನೆ ಭೂತಬಂಗಲೆಯಾಗಿ ಬದಲಾಗಿರುತ್ತದೆ. ಅಲ್ಲದೇ ನಾಯಕನನ್ನು ಭೇಟಿ ಮಾಡಿದ ವ್ಯಕ್ತಿ ಸತ್ತು ಎಪ್ಪತ್ತು ವರ್ಷ ಆಗಿರುತ್ತದೆ.‌ ಬದುಕೇ ಇರದ ವ್ಯಕ್ತಿ ಭೇಟಿ ಮಾಡಲು ಹೇಗೆ ಸಾಧ್ಯ?? ಅಲ್ಲದೇ ಒಂದೇ ನಿಮಿಷದಲ್ಲಿ ಆ ಬಂಗಲೆ ಭೂತಬಂಗಲೆಯಾಗಿ ಚೇಂಜ್ ಆಗಲು ಹೇಗೆ ಸಾಧ್ಯ?

ಅದೇ “ನಿಗೂಢ ರಹಸ್ಯ” !!!!

ಕೆಲಸದ ಸ್ಥಳದಲ್ಲಿ ನಾಯಕನಿಗೆ ಹಳೆಯ ಸೈಟ್ ಇಂಜನಿಯರ್ ಶವ ಸಿಗುತ್ತದೆ. ಅವನನ್ನು ಕೊಂದವರು ಯಾರು? ಇದೆಲ್ಲದರ ಹಿಂದೆ ಯಾರಿದ್ದಾರೆ? ಪ್ರತೀ ರಾತ್ರಿ ಹಾಡು ಹೇಳುತ್ತಾ ಊರೆಲ್ಲ ಅಡ್ಡಾಡುವ ಮೋಹಿನಿ ಯಾರು? ಪ್ರತೀ ಬಾರಿ ಕೊಲೆ ನಡೆದಾಗ ಹಾಜರಾಗುವ ಆ ನಿಲುವಂಗಿಯ ವ್ಯಕ್ತಿ ಯಾರು?

ಇವೆಲ್ಲ ಪ್ರಶ್ನೆಗಳಿಗೆ ನಾಯಕ ಕಡೆಯಲ್ಲಿ ಉತ್ತರ ಕಂಡುಕೊಳ್ಳುತ್ತಾನೆ.

ಆಗಿನ ಕಾಲಕ್ಕೆ ಇಂತಹಾ ಒಂದು ಸಸ್ಪೆನ್ಸ್- ಥ್ರಿಲ್ಲರ್ ಯೋಚನೆ ಅಪರೂಪವಾಗಿತ್ತು. ಸಿನೆಮಾದಲ್ಲಿ ನಾಯಕಿ ಗೀತಾ ಅವರನ್ನು ಸಹ ಬಹಳ ಮುದ್ದಾಗಿ ತೋರಿಸಿದ್ದಾರೆ. ನಿಜಕ್ಕೂ ಶಂಕರನಾಗ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರು. ಅವರ ಅಲೋಚನೆಗಳು ಇಂದಿಗೂ ಅದ್ಭುತ ಎನಿಸುತ್ತವೆ.

ಸಿನೆಮಾ ಯೂಟ್ಯೂಬಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply